ಪ್ರಜ್ಞೆ ಮರಳಿ ಬಂದರೂ ಭಯ ಬಿಟ್ಟು ಹೋಗಿರಲಿಲ್ಲ, ಕೈಗಳು ತಣ್ಣಗಾಗಿದ್ದವು, ಬಿಪಿ 60ಕ್ಕೆ ಕುಸಿದಿತ್ತು: ಕೊರೋನಾ ಗೆದ್ದು ಬಂದ ಪತ್ರಕರ್ತೆಯ ಕಣ್ಣು ತೇವಗೊಳಿಸುವ ಅನುಭವ

0
1044

ಸನ್ಮಾರ್ಗ ವಾರ್ತೆ

“ನನ್ನೊಳಗಿನ ಪತ್ರಕರ್ತೆಯ ಪ್ರಜ್ಞೆ ಕೆಲವೊಮ್ಮೆ ನಾನು ರೋಗಿ ಎಂಬ ಪ್ರಜ್ಞೆಯನ್ನೂ ದಾಟಿ ಮುಂದಕ್ಕೆ ಹೋಗುತ್ತದೆ. ದಿನವೂ ಕೋವಿಡ್ ವರದಿ ಮಾಡುವ ನನಗೆ ಯಾವುದೇ ಕಾಯಿಲೆ ಇಲ್ಲ. ಹಾಗಾಗಿ ನಾನು ಸಂಪೂರ್ಣ ಸ್ವಸ್ಥ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಈ ರೋಗ ನನಗೆ ದೊಡ್ಡ ಪಾಠವನ್ನೇ ಕಲಿಸಿಬಿಟ್ಟಿತು. ನಮ್ಮ ವೃತ್ತಿಯಲ್ಲಿ ಪ್ರತ್ಯಕ್ಷದರ್ಶಿ ಅನುಭವ, ವರದಿ ಅಂತೀವಲ್ಲ, ಹಾಗೆ ಪತ್ರಕರ್ತೆಯೊಬ್ಬಳು ಈ ವ್ಯಾದಿಯ ಸಂಕಟದಿಂದ ಹೇಗೆ ಪಾರಾಗಿ ಬಂದಳು ಎಂಬುದನ್ನು ಹೇಳುವ ಅವಕಾಶವಿದು”

ಹೀಗೆಂದು ತಮ್ಮ ಸ್ವಂತ ಅನುಭವವನ್ನು ಎಳೆಎಳೆಯಾಗಿ ತೆರೆದಿಟ್ಟವರು ತಮಿಳು ನಾಡಿನ ಪತ್ರಕರ್ತೆ ಲಾವಣ್ಯಾ ನಟರಾಜನ್. ಕಳೆದ ಸುಮಾರು ಏಳು ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿರುವ ಲಾವಣ್ಯಾ ಈಗ ನ್ಯೂಸ್-7 ಎಂಬ ತಮಿಳು ಟೀವಿಗಾಗಿ ಕೆಲಸ ಮಾಡುತ್ತಾರೆ. ನ್ಯೂಸ್-ಮಿನಿಟ್ ಜೊತೆ ಅವರು ಹಂಚಿಕೊಂಡ ಅನುಭವದ ಪೂರ್ಣ ಪಾಠವನ್ನು ಮಂಜುನಾಥ್ ಚಾಂದ್ ಇಲ್ಲಿ ಅನುವಾದಿಸಿದ್ದಾರೆ.

ಮೊದಲ ಬಾರಿಗೆ ಲಾಕ್ಡೌನ್ ಮಾಡಿದಾಗಿನಿಂದ ಕೊರೊನಾ ವೈರಸ್ ಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡುವ ಹೊಣೆ ನನ್ನದಾಗಿತ್ತು. ಆರೋಗ್ಯ ಇಲಾಖೆ ದಿನವೂ ಒದಗಿಸುವ ಬುಲೆಟಿನ್ಗಳ ವಿವರಗಳನ್ನು ಪಡೆದು ರಾಜ್ಯದಲ್ಲಿ ಕೊರೊನಾ ಹಾವಳಿಯ ಪರಿಣಾಮ, ಸಾವಿನ ಪ್ರಮಾಣವನ್ನು ವರದಿ ಮಾಡುತ್ತಿದ್ದೆ. ವಯಸ್ಸಾದವರು, ಇನ್ನಿತರ ರೋಗ ಲಕ್ಷಣಗಳಿರುವವರು ಈ ವೈರಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಮತ್ತು ಕೆಲವು ಹದಿಹರೆಯದವರೂ ಇದ್ದಕ್ಕಿದ್ದಂತೆ ಸಾಯುತ್ತಿರುವುದು ನನ್ನ ಗಮನಕ್ಕೆ ಬರುತ್ತಿತ್ತು. ಆದರೆ ಇವನ್ನೆಲ್ಲ ವರದಿ ಮಾಡುವ ನನಗೇಕೆ ಈ ರೋಗ ಬಂದೀತು ಎಂಬುದು ನನ್ನ ಭಾವನೆಯಾಗಿತ್ತು.

ಆವತ್ತು ಬೆಳಗಿನ ನನ್ನ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಕಚೇರಿಗೆ ತೆರಳಿದ್ದೆ. ಆಫೀಸಿನಲ್ಲಿ ಕೆಲಸ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮೈಕೈಗಳಲ್ಲಿ ಅಸಹನೀಯ ನೋವು. ಕಂಪ್ಯೂಟರ್ ಮುಂದೆ ಕುಂತು ಟೈಪ್ ಮಾಡುವುದೇ ಅಸಾಧ್ಯವಾಯಿತು. ನಿಧಾನಕ್ಕೆ ಜ್ವರವೂ ಕಾಣಿಸಿಕೊಂಡಿತು. ಅದು ಏರುತ್ತಿರುವ ಲಕ್ಷಣ ನನಗೆ ಸ್ಪಷ್ಟವಾಯಿತು.

ತಕ್ಷಣ ಮನೆಗೆ ಮರಳಿದೆ. ಸ್ವಯಂ ಕ್ವಾರಂಟೈನ್ ಗೆ ಒಳಗಾದೆ. ನನ್ನ ಫ್ಯಾಮಿಲಿ ವೈದ್ಯರು ನನಗೆ ಕೆಲವು ಮೆಡಿಸಿನ್ ಸಲಹೆ ಮಾಡಿದರು. ಜೊತೆಗೆ ಕೋವಿಡ್ ಪರೀಕ್ಷೆಯೂ ಮಾಡಿಕೊಳ್ಳುವಂತೆ ಹೇಳಿದರು. ಆದರೆ ನಾನು ಮಾತ್ರೆಗಳ ಮೇಲೆ ನಂಬಿಕೆ ಇಟ್ಟೆ. ಗಂಟೆಗಳು ಉರುಳಿದಂತೆ ರೋಗ ಲಕ್ಷಣಗಳೂ ಉಲ್ಬಣಿಸಿದವು. ನನ್ನ ಮೈಕೈ ನೋವು ತಡೆಯಲಸಾಧ್ಯವಾಗಿತ್ತು. ವಿಪರೀತ ತಲೆನೋವು. ಕಣ್ಣು ಮಂಜಾದಂತೆ, ಗಂಟಲು ಕೆರೆತ ಮತ್ತು ಆಮಶಂಕೆ. ಇಷ್ಟೆಲ್ಲದರ ನಡುವೆ ನಿದ್ದೆ ಹತ್ತದ ಸ್ಥಿತಿ.

ಕೋವಿಡ್ ಪರೀಕ್ಷೆಗೆ ಒಳಪಡದೇ ಬೇರೆ ದಾರಿ ಇಲ್ಲ ಎಂಬುದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಆದರೂ ಹಿಂಜರಿಕೆ. ಎರಡನೇ ದಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಜ್ವರ 103ಕ್ಕೇರಿತ್ತು. ಮತ್ತೆ ಕಾಲಹರಣ ಮಾಡಲಿಲ್ಲ. ತಕ್ಷಣ ತಮಿಳು ನಾಡಿನ ಒಮಂದೂರ್ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾದೆ. ಸಂಜೆ ಹೊತ್ತಿಗೆ ವರದಿ ಬಂದಿತ್ತು. ಅಂದುಕೊಂಡಂತೆ ಫಲಿತಾಂಶ ಪಾಸಿಟಿವ್ ಆಗಿತ್ತು.

ನನ್ನನ್ನು ಆಸ್ಪತ್ರೆಯ ತನಕ ಕರೆದುಕೊಂಡು ಬಂದಿದ್ದವನಿಗೆ ತಕ್ಷಣ ಕ್ವಾರಂಟೈನ್ ಗೆ ಒಳಗಾಗುವಂತೆ ಹೇಳಿದೆ. ಆತ ನಿಂತಲ್ಲಿಂದಲೇ ನನಗೆ ಧೈರ್ಯ ತುಂಬಿದ. ಹೆದರಬೇಡ, ಧೈರ್ಯವಾಗಿರು ಎಂದು ಉತ್ತೇಜನ ನೀಡಿದ. ಕೊರೊನಾ ವೈರಸ್ನ ಸುದ್ದಿ ಅಪ್ಪ-ಅಮ್ಮನಿಗೆ ತಿಳಿಸುವ ಇರಾದೆ ನನ್ನದಾಗಿರಲಿಲ್ಲ. ಆದರೆ, ನನ್ನ ತಂಗಿ ಆ ಕೆಲಸವನ್ನು ಮಾಡಿದ್ದಳು. ವಿಷಯ ತಿಳಿದು ವಿದೇಶದಿಂದ ದೂರವಾಣಿ ಕರೆ ಮಾಡಿದ್ದ ಗೆಳೆಯನಲ್ಲಿ ಮನಸಾರೆ ಅತ್ತಿದ್ದೆ.

ನಮ್ಮದು ತಕ್ಕಮಟ್ಟಿಗೆ ದೊಡ್ಡ ಕುಟುಂಬ. ಮನೆಗೆ ಹೋಗಿ ಕ್ವಾರಂಟೈನ್ಗೆ ಒಳಗಾಗುವುದು ಸಾಧುವಾಗಿರಲಿಲ್ಲ. ಒಮಂದೂರು ಸರ್ಕಾರಿ ಆಸ್ಪತ್ರೆಯಲ್ಲಿಯೇ ತಪಾಸಣೆಗೆ ಒಳಗಾಗಿ ಜವಾಹರ್ ಎಂಜಿನಿಯರಿಂಗ್ ಕಾಲೇಜಿನ ಕೋವಿಡ್ ಆಸ್ಪತ್ರೆಗೆ ದಾಖಲಾಗುವುದು ಎಂದು ನಿರ್ಧಾರ ಕೈಗೊಂಡೆ.

ಮರುದಿನ ಬೆಳಿಗ್ಗೆ ನನ್ನನ್ನು ಕರೆದೊಯ್ಯಲು ಆಂಬುಲೆನ್ಸ್ ಬರುವುದೆಂದು ತೀರ್ಮಾನವಾಯಿತು. ಅದು ಬರುವುದಕ್ಕಾಗಿಯೇ ಮೂರು ಗಂಟೆಗಳ ಕಾಲ ಕಾಯಬೇಕಾಯಿತು. ಇಂತಹ ಸಂಗತಿಗಳನ್ನೆಲ್ಲ ನಾನು ನನ್ನ ಚಾನೆಲ್ ಗಾಗಿ ವರದಿ ಮಾಡಬೇಕಾಗಿತ್ತು. ಆದರೆ ಈಗ ಅಂತಹ ಸನ್ನಿವೇಶಗಳಿಗೆ ನಾನೇ ಸಾಕ್ಷಿಯಾಗಿದ್ದೆ.

ಆಂಬುಲೆನ್ಸ್ ಬಂದಾಗ ಇಡೀ ರಸ್ತೆಯಲ್ಲಿ ಜನ ನನ್ನನ್ನು ನುಂಗುವಂತೆ ದುರುಗುಟ್ಟಿ ನೋಡುತ್ತಿದ್ದರು. ಸೈರನ್ ಸದ್ದಿನೊಂದಿಗೆ ಆಂಬುಲೆನ್ಸ್ ಮಾಯವಾಗುತ್ತಿದ್ದಂತೆ ನನ್ನ ಇಡೀ ಕುಟುಂಬ ಕಣ್ಣೀರಾಗಿತ್ತು. ಅಲ್ಲಿಂದಾಚೆಗೆ ಅವರಿಗೆ ನೆರೆಹೊರೆಯವರಿಂದ ನಿರಂತರ ಫೋನುಗಳ ಕರೆ. ವಿಚಾರಣೆಯ ಮೇಲೆ ವಿಚಾರಣೆ. ಆಂಬುಲೆನ್ಸ್ ನಲ್ಲಿ ಎನ್-95 ಮಾಸ್ಕ್ ಧರಿಸಿದ್ದ ನನ್ನ ಕಣ್ಣಲ್ಲಿ ಭಯ ಮೋಡ ಕಟ್ಟಿತ್ತು. ಮನಸ್ಸು ಆತಂಕದ ಮಡುವಾಗಿತ್ತು. ಹೃದಯದ ಬಡಿತ ಏರುಗತಿಯಲ್ಲಿತ್ತು.

ಆಸ್ಪತ್ರೆಯ ಸಿ.ಟಿ. ಸ್ಕ್ಯಾನ್ ಕೊಠಡಿಯ ಮುಂದೆ ಕುಳಿತಿದ್ದವಳಿಗೆ ಏದುಸಿರು. ಕಾಯಲಾಗದಷ್ಟು ಆಯಾಸ. ನನ್ನೆದುರು ಕತ್ತಲು ಆವರಿಸಿದ ಅನುಭವ. ಪ್ರಜ್ಞೆ ತಪ್ಪುತ್ತಿದ್ದೇನೆ ಎಂಬುದು ಅರಿವಾಗಿತ್ತು. ಆ ಹೊತ್ತಿಗಾದರೂ ಒಮ್ಮೆ ಅಪ್ಪ-ಅಮ್ಮನನ್ನು ನೋಡಿಬಿಡೋಣ ಎಂಬ ಸಣ್ಣ ಆಸೆ ಮನಸ್ಸಿನಲ್ಲಿ ಮೂಡಿದ್ದು ನಿಜ. ಯಾವುದೇ ರೋಗ ಲಕ್ಷಣವಿಲ್ಲದ ಯುವಕರೂ ರೋಗಕ್ಕೆ ಬಲಿಯಾಗುತ್ತಿದ್ದಾರೆ, ಆ ಪಟ್ಟಿಯಲ್ಲಿ ನಾಳೆ ನನ್ನ ಹೆಸರನ್ನೂ ಸೇರಿಸಿ ವರದಿ ಬರೆಯುತ್ತಾರೆ ಎಂದೂ ಯೋಚಿಸಿದೆ. ಇವೆಲ್ಲ ಕೇವಲ ಒಂದೇ ನಿಮಿಷದಲ್ಲಿ ಮೂಡಿದ ಯೋಚನೆಗಳು. ಆ ಕಾರಿಡಾರಿನಲ್ಲಿದ್ದ ಆಯಾ ಒಬ್ಬರನ್ನು ಕೂಗಿ ಕರೆದಿದ್ದಷ್ಟೇ ನೆನಪು.

ಬಳಿಕ ಆಕ್ಷಿಜನ್ ಸಹಾಯದೊಂದಿಗೆ ನನಗೆ ಪ್ರಜ್ಞೆ ಮರಳಿ ಬಂದಿತ್ತಾದರೂ ಭಯ ನನ್ನ ಕಣ್ಣಿಂದ ಮಾಯವಾಗಿರಲಿಲ್ಲ. ನನ್ನ ಕೈಗಳು ತಣ್ಣಗಾಗಿದ್ದವು. ನನ್ನ ಬಿಪಿ 60ಕ್ಕೆ ಕುಸಿದಿತ್ತು. ತೀವ್ರ ಭಯದಿಂದ ಹೀಗಾಗಿದೆ ಎಂದು ನನ್ನನ್ನು ಪರೀಕ್ಷೆ ಮಾಡಿದ ಡಾಕ್ಟರ್ ಹೇಳಿದರು. ಈ ಕಾರಣದಿಂದಾಗಿ ನನ್ನನ್ನು ಜವಾಹರ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸದೇ ಒಮಂದೂರ್ ಸರ್ಕಾರಿ ಆಸ್ಪತ್ರೆಗೇ ದಾಖಲಿಸಲಾಯಿತು. ಅಲ್ಲಿ ದಾಖಲಾದಾಗ ಕೇವಲ ಇಬ್ಬರು ರೋಗಿಗಳು ವಾಡರ್್ನಲ್ಲಿದ್ದರು. ಒಬ್ಬರು ಕೋವಿಡ್ನಿಂದ ಚೇತರಿಸಿಕೊಂಡಂತೆ ಕಾಣುತ್ತಿದ್ದರು. ಆದರೆ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅವರು ಏದುಸಿರು ಬಿಡುತ್ತಿದ್ದ ರೀತಿಗೇ ನಾನು ಭಯಭೀತಳಾಗಿದ್ದೆ.

ಎರಡು ದಿನ ಕಳೆದ ಬಳಿಕ 70 ವರ್ಷದ ಡಾಕ್ಟರ್ ಒಬ್ಬರು ವಾರ್ಡ್ ಗೆ ದಾಖಲಾಗಿದ್ದರು. ಅವರು ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಅದಾಗಿ ಮರುದಿನವೇ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥರು ಮತ್ತು ಅವರ ಕುಟುಂಬದವರೂ ಅದೇ ವಾರ್ಡ್ ಗೆ ದಾಖಲಾದರು.

ಹೀಗೆ ವಾರ್ಡ್ ಗೆ ಬಂದು ಸೇರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನನಗೆ ಇನ್ನೊಂದು ಶಾಕ್ ಎದುರಾಗಿತ್ತು. ನನ್ನ ಅಮ್ಮನಿಗೆ ಕೋವಿಡ್ ಪಾಸಿಟಿವ್ ಎಂಬುದು ಸಾಬೀತಾಗಿ ಅವರು ಇದೇ ವಾಡರ್್ಗೆ ಬಂದು ದಾಖಲಾದರು. ಶ್ವಾಸಕೋಶದ ಉರಿಯೂತದ ಸಮಸ್ಯೆಯಿದ್ದ ಆಕೆಗೆ ತಕ್ಷಣ ಚಿಕಿತ್ಸೆ ಆರಂಭಿಸಲಾಗಿತ್ತು. ಒಂದು ವಾರ ಅಮ್ಮ-ಮಗಳು ಇಬ್ಬರೂ ಭಯದ ನೆರಳಲ್ಲೇ ಕಳೆದೆವು. ಅಲ್ಲಿಂದ ನಮ್ಮನ್ನು ಇನ್ನೊಂದು ಕ್ವಾರಂಟೈನ್ ಸೆಂಟರ್ಗೆ ಶಿಫ್ಟ್ ಮಾಡಿದರು. ಅಲ್ಲಿ ಅಮ್ಮ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅದು ನಿಜಕ್ಕೂ ದುಃಸ್ವಪ್ನ. ಆಕೆಗೆ ಅಲ್ಲಿ ಉಸಿರಾಟದ್ದೇ ದೊಡ್ಡ ಸಮಸ್ಯೆಯಾಗಿತ್ತು. ಅಲ್ಲಿ ಹೇಗೋ ಒಂದು ವಾರ ಕಳೆದಿದ್ದು ನಮ್ಮ ಪಾಲಿನ ಪುಣ್ಯ. ಹಾಗೂ ಹೀಗೂ ಚೇತರಿಸಿಕೊಂಡು ಮನೆಗೆ ಮರಳಿದೆವು. ಅಧಿಕಾರಿಗಳ ನಿದರ್ೇಶನದ ಮೇರೆಗೆ 17 ದಿನಗಳ ಕಾಲ ನಾವಿಬ್ಬರೂ ಕ್ವಾರಂಟೈನ್ ಗೆ ಒಳಗಾದೆವು.

ಒಂದೇ ಒಂದು ರೋಗ ಲಕ್ಷಣವಿಲ್ಲದ ನನಗೆ ಕೊರೊನಾ ಬರಲು ಸಾಧ್ಯವೇ ಇಲ್ಲ ಎಂದು ಉಡಾಫೆಯಲ್ಲಿದ್ದ ನನ್ನನ್ನು ಈ ಕೋವಿಡ್-19 ಬದುಕಿನ ಇನ್ನೊಂದು ಮುಖದ ದರ್ಶನ ಮಾಡಿಸಿದ್ದು ನಿಜ. ನಾನಿದ್ದ ವಾರ್ಡ್ ಚಿತ್ರ ಈಗಲೂ ನನ್ನ ಕಣ್ಣ ಮುಂದೆ ನಿಚ್ಚಳವಾಗಿದೆ. ಯಾವತ್ತೂ ಮಣಭಾರದ ಪಿಪಿಇ ದಿರಿಸಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಡಾಕ್ಟರ್ಗಳ ಕಣ್ಣುಗಳು ಮಾತ್ರ ಹೊಳೆಯುತ್ತಿರುವುದು ಕಾಣಿಸುತ್ತಿತ್ತು. ಆ ಕಣ್ಣುಗಳಲ್ಲೇ ಅವರು ನನಗೆ ಧೈರ್ಯ ತುಂಬುತ್ತಿದ್ದರು. ಅಂತಹುದೇ ಡ್ರೆಸ್ ತೊಟ್ಟ ನರ್ಸ್ ಗಳು ಮತ್ತು ಇತರ ಸಿಬ್ಬಂದಿ ಹಗಲಿರುಳೂ ರೋಗಿಗಳ ನಿಗಾ ವಹಿಸುತ್ತಿದ್ದುದು ಅವರ್ಣನೀಯ.

ಉಳಿದ ಯಾವುದೇ ರೋಗ ಬಂದಾಗ ನಿಮ್ಮ ಬಗ್ಗೆ ಕಾಳಜಿ ವಹಿಸಲು ಪಕ್ಕದಲ್ಲಿ ಒಬ್ಬರು ಇರುತ್ತಾರೆ. ಆದರೆ ಕೊರೊನಾ ಬಂದರೆ ಅದಕ್ಕೂ ಅವಕಾಶವಿಲ್ಲ. ಅಲ್ಲಿ ಆಗೀಗ ಅಡ್ಡಾಡುವ ನರ್ಸ್, ಆಯಾ, ಆರೋಗ್ಯ ಸಿಬ್ಬಂದಿಯೇ ನಮ್ಮ ಪಾಲಿನ ಆಶಾಕಿರಣ. ಈ ದೇಶದಲ್ಲಿ ಅವರೇ ಇಲ್ಲದೇ ಇದ್ದರೆ ಏನಾದೀತು ಎಂದು ಯೋಚಿಸುತ್ತಿರುತ್ತೇನೆ. ಅವರಿಗಾಗಿ ನಾವು ಅನುಕ್ಷಣವೂ ಪ್ರಾರ್ಥಿಸುತ್ತಿರಬೇಕು. ಕುಟುಂಬದವರು ಮತ್ತು ಸ್ನೇಹಿತರು ಆಗಾಗ ಫೋನ್ ಮಾಡಿ ಧೈರ್ಯ ತುಂಬುತ್ತಿದ್ದುದೊಂದು ನೆಮ್ಮದಿಯಾಗಿತ್ತು.

ಕೋವಿಡ್ ನನ್ನ ಜೀವನದಲ್ಲಿ ಎಂದೂ ಮರೆಯದ ಪಾಠವನ್ನು ಕಲಿಸಿ ಹೋಗಿದೆ. ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದೇ ಹೋದರೆ ಅದು ಇನ್ನೂ ದೊಡ್ಡ ಆಘಾತಕ್ಕೆ ನಮ್ಮನ್ನು ತಳ್ಳುತ್ತದೆ. ಭಯ ನಮ್ಮ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಿದರೆ ಸಾಕು ನಾವು ಈ ಸಣ್ಣ ವೈರಸ್ ಗೆದ್ದಂತೆ ಸರಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.