ಇದು ಅಮಾನವೀಯ, ದಯವಿಟ್ಟು ಪರಿಶೀಲಿಸಿ

0
1067

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

1. ಇರ್ಫಾನ್

2. ಇಲ್ಯಾಸ್

ದೆಹಲಿ ಗಲಭೆಯ ಆರೋಪದಲ್ಲಿ ಸುಮಾರು ಒಂದೂವರೆ ವರ್ಷ ಜೈಲಲ್ಲಿ ಕಳೆದು ಕಳೆದವಾರ ಜಾಮೀನಿನ ಮೇಲೆ ಹೊರಬಂದ  ಮುಹಮ್ಮದ್ ಆಸಿಫ್ ತನ್ಹ, ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿಟಾ ಎಂಬ ವಿದ್ಯಾರ್ಥಿ ಹೋರಾಟಗಾರರ ಜೊತೆಜೊತೆಗೇ  ಬಿಡುಗಡೆಗೊಂಡವರು ಈ ಇಲ್ಯಾಸ್ ಮತ್ತು ಇರ್ಫಾನ್. ಆದರೆ ಇವರಿಬ್ಬರು ಈ ಮೇಲಿನ ವಿದ್ಯಾರ್ಥಿ ಹೋರಾಟಗಾರರಷ್ಟು  ಭಾಗ್ಯವಂತರಲ್ಲ. ಜೈಲಲ್ಲಿ ಬರೋಬ್ಬರಿ 9 ವರ್ಷಗಳನ್ನು ಕಳೆದ ಬಳಿಕ ಇವರು ಬಿಡುಗಡೆಗೊಂಡಿದ್ದಾರೆ. 2013 ಆಗಸ್ಟ್ 31ರಂದು  ಮಹಾರಾಷ್ಟ್ರದ ನಾಂದೇಡ್‍ನಿಂದ ಮಹಾರಾಷ್ಟ್ರ ಉಗ್ರ ನಿಗ್ರಹ ದಳವು (ATS) ಇವರಿಬ್ಬರನ್ನು ಬಂಧಿಸಿತ್ತು. ಇವರ ಜೊತೆಗೇ ಇನ್ನೂ  ಮೂರು ಮಂದಿಯನ್ನೂ ಬಂಧಿಸಲಾಗಿತ್ತು. ರಾಜಕಾರಣಿಗಳು, ಪತ್ರಕರ್ತರು ಮತ್ತು ಪೆÇಲೀಸ್ ಅಧಿಕಾರಿಗಳನ್ನು ಹತ್ಯೆಗೈಯಲು ಪಾಕ್  ಮೂಲದ ಲಷ್ಕರೆ ತ್ವಯಿಬ ನಡೆಸಿರುವ ಸಂಚಿನಲ್ಲಿ ಇವರು ಭಾಗಿಯಾಗಿದ್ದಾರೆ ಎಂಬುದು ಆರೋಪ. ಇಲ್ಯಾಸ್ ಹಣ್ಣುಹಂಪಲು ವ್ಯಾ ಪಾರಿಯಾಗಿದ್ದರೆ ಇರ್ಫಾನ್ ಬ್ಯಾಟರಿ ಅಂಗಡಿಯನ್ನು ಹೊಂದಿದ್ದ. 2019ರಲ್ಲಿ ಬಾಂಬೆ ಹೈಕೋರ್ಟ್ ಇರ್ಫಾನ್‍ಗೆ ಜಾಮೀನು  ನೀಡಿತ್ತಾದರೂ ಅದನ್ನು NIA  ಸುಪ್ರೀಮ್ ಕೋರ್ಟ್‍ನಲ್ಲಿ ಪ್ರಶ್ನಿಸಿತ್ತು ಮತ್ತು ಆ ಜಾಮೀನಿಗೆ ಸುಪ್ರೀಮ್ ಕೋರ್ಟು ತಡೆ ವಿಧಿಸಿತ್ತು.  ಹೀಗೆ ನಾಲ್ಕು ತಿಂಗಳು ಜಾಮೀನಿನ ಮೇಲೆ ಹೊರಗಿದ್ದ ಇರ್ಫಾನ್, 2019 ಡಿಸೆಂಬರ್ 4ರಂದು ಪುನಃ ಜೈಲಿಗೆ ಹೋಗಿದ್ದ. ಇವರಿಬ್ಬರ  ಮೇಲೂ UAPA  ಅಡಿಯಲ್ಲಿ ಕೇಸು ದಾಖಲಾಗಿತ್ತು. ಕಳೆದವಾರ ವಿಶೇಷ ನ್ಯಾಯಾಲಯವು ಎಲ್ಲ ಆರೋಪಗಳಿಂದಲೂ ಇವರನ್ನು  ಮುಕ್ತಗೊಳಿಸಿದೆ. ಈ ಬಿಡುಗಡೆಯ ಒಂದುವಾರದ ಬಳಿಕ ಮುಹಮ್ಮದ್ ಹಬೀಬ್ ಎಂಬ 36 ವರ್ಷದ ವ್ಯಕ್ತಿ ಯನ್ನು NIA   (ರಾಷ್ಟ್ರೀಯ ತನಿಖಾ ಆಯೋಗ) ಕೋರ್ಟು ಬಿಡುಗಡೆಗೊಳಿಸಿದೆ. ಆದರೆ,

ಹೀಗೆ ಬಿಡುಗಡೆಗೊಳ್ಳುವ ಮೊದಲು ಈ ಹಬೀಬ್ 5  ವರ್ಷಗಳನ್ನು ಜೈಲಲ್ಲಿ ಕಳೆದಿದ್ದಾನೆ. ಈತನ ಮೇಲೂ ಲಷ್ಕರೆ ತ್ವಯ್ಯಿಬಾದ ಜೊತೆ ಸಹಕರಿಸಿದ ಆರೋಪವಿದೆ. UAPA  ಕಾಯ್ದೆಯಡಿಯಲ್ಲಿ  ಈತನ ಮೇಲೂ ಪ್ರಕರಣ ದಾಖ ಲಿಸಲಾಗಿತ್ತು. ಈತನನ್ನು ಬಂಧಿಸಿದ್ದು 2017ರಲ್ಲಿ. ಈ ಬಂಧನಕ್ಕೆ ಕಾರಣ 2005ರಲ್ಲಿ ಬೆಂಗಳೂರಿನ  ಭಾರತೀಯ ವಿಜ್ಞಾನ ಭವನದಲ್ಲಿ ನಡೆದ ಶೂಟೌಟ್. ಈ ಶೂಟೌಟ್‍ನಲ್ಲಿ ಓರ್ವರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು. ತ್ರಿ ಪುರಾದವನಾದ ಮತ್ತು ಗ್ಯಾರೇಜ್ ಮೆಕಾನಕ್ ವೃತ್ತಿಯಲ್ಲಿದ್ದ ಈತನ ಬಂಧನದ ಕಾರಣವೂ ಕುತೂಹಲಕಾರಿಯಾಗಿದೆ. ಬೆಂಗಳೂರು  ಪ್ರಕರಣದ ಮುಖ್ಯ ಆರೋಪಿಯೆಂದು ಹೆಸರಿಸಲಾದ ಸಲಾಹುದ್ದೀನ್‍ನನ್ನು 2008ರಲ್ಲಿ ಲಕ್ನೋದಲ್ಲಿ ಬಂಧಿಸಲಾಯಿತು. ಅಂದರೆ,  ಬೆಂಗಳೂರು ಶೂಟೌಟ್‍ನ 3 ವರ್ಷಗಳ ಬಳಿಕ. ಈತ ನೀಡಿದ ಹೇಳಿಕೆಯ ಆಧಾರದಲ್ಲಿ 2017ರಲ್ಲಿ ಈ ಹಬೀಬ್‍ನನ್ನು ಬಂ ಧಿಸಲಾಯಿತು. ಅಂದರೆ, ಸಲಾಹುದ್ದೀನ್ ಬಂಧನದ 9 ವರ್ಷಗಳ ಬಳಿಕ ಮತ್ತು ಬೆಂಗಳೂರು ಶೂಟೌಟ್‍ನ 12 ವರ್ಷಗಳ ಬಳಿಕ.  ಅಷ್ಟಕ್ಕೂ,

ಕಳೆದ ಎರಡು ವಾರಗಳಲ್ಲಿ ನಡೆದ ಬೆಳವಣಿಗೆಗಳಿವು. ಅಂದಹಾಗೆ,

ಯಾವುದೇ ಪ್ರಕರಣದ ತನಿಖೆಗೂ ಇಷ್ಟು ದೀರ್ಘ ಸಮಯದ ಅಗತ್ಯ ಇದೆಯೇ? ಒಂದುವೇಳೆ, ಪ್ರಕರಣದಲ್ಲಿ ಅಂತಾರಾಷ್ಟ್ರೀಯ  ಶಕ್ತಿಗಳು ಭಾಗಿಯಾಗಿವೆ ಎಂದೇ ಇಟ್ಟುಕೊಂಡರೂ ಶಂಕಿತರನ್ನು ವರ್ಷಗಳ ಕಾಲ ಅತ್ತ ವಿಚಾರಣೆಯೂ ಇಲ್ಲದೇ ಇತ್ತ ಜಾಮೀನೂ  ನೀಡದೇ ಜೈಲಲ್ಲಿ ಕೊಳೆಯಿಸುವುದೇಕೆ? ಹೀಗೆ ಕೊಳೆಯಿಸಲೇ ಬೇಕು ಎಂಬ ಉz್ದÉೀಶದಿಂದಲೇ ಈ UAPA  ಕಾಯ್ದೆಯನ್ನು  ರಚಿಸಲಾಯಿತೇ? 1969ರಲ್ಲಿ ಮೊದಲ ಬಾರಿ ಜಾರಿಗೆ ಬಂದ UAPA  ಕಾಯ್ದೆಯು ಆ ಬಳಿಕ 1972, 84, 2004, 2008, 12 ಮತ್ತು  2019ರಲ್ಲಿ ತಿದ್ದುಪಡಿಗೆ ಒಳಗಾಗುತ್ತಾ ಬಂದುದು ಯಾಕಾಗಿ, ಮಾನವೀಯವಾಗುವುದಕ್ಕೋ ಅಥವಾ ಇನ್ನಷ್ಟು ಕ್ರೂರಿ ಎನಿಸಿಕೊಳ್ಳುವುದಕ್ಕೋ? ಟಾಡಾ ಮತ್ತು ಪೆÇೀಟಾ ಗಳನ್ನು ರದ್ದುಪಡಿಸುವಾಗ ಅದರಲ್ಲಿರುವ ಅಮಾನವೀಯ ಸೆಕ್ಷನ್‍ಗಳನ್ನೆಲ್ಲಾ UAPA ಯಲ್ಲಿ  ತುರುಕಲಾಯಿತು ಎಂಬ ಆರೋಪಕ್ಕೆ ಏನುತ್ತರ ಇದೆ? ಭಯೋತ್ಪಾದನೆಯಂಥ ದೇಶವಿರೋಧಿ ಕ್ರೌರ್ಯಗಳನ್ನು ಎದುರಿಸುವುದಕ್ಕಾಗಿ  ಮತ್ತು ಅದರಲ್ಲಿರಬಹುದಾದ ಅಂತಾರಾಷ್ಟ್ರೀಯ ಸಂಚುಗಳನ್ನು ಮಟ್ಟ ಹಾಕುವುದಕ್ಕಾಗಿ ರೂಪ ಪಡೆದ UಂPಂಯು ಇವತ್ತು  ಪ್ರಯೋಗವಾಗುತ್ತಿರುವುದಾದರೂ ಯಾರ ಮೇಲೆ? UAPA ಯ ಅಡಿಯಲ್ಲಿ ಇವತ್ತು ಯಾರನ್ನೆಲ್ಲ ಬಂಧಿಸಲಾಗುತ್ತಿದೆಯೋ ಅವರೆಲ್ಲ ಈ  ಕಾಯ್ದೆಯಡಿಯಲ್ಲಿ ಬಂಧನಕ್ಕೆ ಅರ್ಹರು ಎಂದು ಪ್ರಾಮಾಣಿಕವಾಗಿ ಹೇಳಲು ಯಾರಿಗೆಲ್ಲ ಸಾಧ್ಯ? ಪತ್ರಕರ್ತ ಸಿದ್ದೀಕ್ ಕಾಪ್ಪನ್,  ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಸಫೂರಾ ಝರ್ಗರ್, ದೇವಾಂಗನಾ, ನತಾಶಾ, ಆಸಿಫ್… ಇವರೆಲ್ಲ ನಿಜಕ್ಕೂ UAPA ಗೆ  ಅರ್ಹರೇ? ನಿಜವಾಗಿ,

UAPA  ಹೊರತಾದ ಸಾಮಾನ್ಯ ಕಾಯ್ದೆಗಳಲ್ಲಿ, ಓರ್ವರ ಬಂಧನದ 60ರಿಂದ 90 ದಿನಗಳ ಒಳಗೆ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸ ಲ್ಲಿಸಬೇಕು. ಹಾಗೆ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ವಿಫಲವಾದರೆ ವ್ಯಕ್ತಿಗೆ ಕೋರ್ಟು ಜಾಮೀನು ನೀಡುತ್ತದೆ. ಆದರೆ UAPA   ಕಾಯ್ದೆಯಲ್ಲಿ ಇದು ಸಾಧ್ಯವೇ ಇಲ್ಲ. ಈ ಕಾಯ್ದೆಯು ಪೊಲೀಸರಿಗೆ ಅಪರಿಮಿತ ಕಾಲಾವಕಾಶವನ್ನು ನೀಡುತ್ತದೆ. ಚಾರ್ಜ್‍ಶೀಟ್ ಸಲ್ಲಿಕೆಗೆ  6 ತಿಂಗಳ ಅವಧಿ ಇದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದರೆ ಜಾಮೀನು ಸಿಗುವುದು ತೀರಾ ಕಷ್ಟಕರ. ಆದ್ದರಿಂದಲೇ,

ವಿದ್ಯಾರ್ಥಿ ಹೋರಾಟಗಾರರಿಗೆ ಹೈಕೋರ್ಟು ನೀಡಿರುವ ಜಾಮೀನನ್ನು ಪೆÇಲೀಸರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದು. ಒಂದು  ವರ್ಷಕ್ಕಿಂತಲೂ ಅಧಿಕ ಸಮಯದಿಂದ ಜಾಮೀನಿಲ್ಲದೇ ಜೈಲಲ್ಲಿದ್ದವರ ಬಗ್ಗೆ ಪೆÇಲೀಸರು ಇಷ್ಟು ಧೈರ್ಯದಿಂದ ಸುಪ್ರೀಮ್ ಕೋರ್ಟಿನ  ಬಾಗಿಲು ತಟ್ಟಲು- ಆರೋಪಿಗಳ ಮೇಲೆ UAPA  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವುದೇ ಕಾರಣ. ಈ ಕಾಯ್ದೆಯ ಸೆಕ್ಷನ್ 43ಆ (5)ರ ಪ್ರಕಾರ, ಆರೋಪಿಗಳಿಗೆ ಜಾಮೀನು ನಿರಾಕರಿಸುವುದಕ್ಕೆ ನಿಖರ ಪುರಾವೆಗಳ ಅಗತ್ಯ ಇರುವುದಿಲ್ಲ. ಮೇಲ್ನೋಟಕ್ಕೆ ಆರೋಪ ನಿಜ  ಎಂದು ಅನಿಸಿದರೆ ಸಾಕಾಗುತ್ತದೆ. ಪೊಲೀಸರು ಹೊರಿಸುವ ಆರೋಪವು ನಿಜ ಎಂದು ಅನಿಸಿದರೆ ಅಂಥ ಪ್ರಕರಣದ ಆರೋಪಿಗಳಿಗೆ  ಜಾಮೀನು ನಿರಾಕರಿಸಬಹುದು. ಈ ಬಗ್ಗೆ ಈಗಾಗಲೇ ಅನೇಕ ಕಾನೂನು ತಜ್ಞರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಅಲ್ಲದೇ, UAPA ಯು  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮಿಶನರ್ ಮುಂತಾದವರಿಗೆ ಅಪರಿಮಿತ ಅಧಿಕಾರವನ್ನು ನೀಡುತ್ತದೆ. ಸಿದ್ದೀಕ್ ಕಾಪ್ಪನ್ ಮೇಲೆ ಆರೋಪವ ನ್ನುಹೆಣೆದಿರುವುದು ಅಸಿಸ್ಟೆಂಟ್ ಕಮಿಶನರ್. ಅಂದಹಾಗೆ,

ನ್ಯಾಯಾಧೀಶರಿಗೂ ಜಿಲ್ಲಾಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಶನರ್‍ಗೂ ಸಾಕಷ್ಟು ವ್ಯತ್ಯಾಸ ಇದೆಯಲ್ಲವೇ? ನ್ಯಾಯಾಧೀಶರಂತೆ ಇತರರು  ರಾಜಕೀಯ ಪ್ರಭಾವದಿಂದ ಮುಕ್ತರಾಗಿರುವುದಿಲ್ಲ. ಜಿಲ್ಲಾಧಿಕಾರಿಗಳನ್ನಾಗಲಿ, ಇತರರನ್ನಾಗಲಿ ಪ್ರಭುತ್ವವೇ ಒಂದು ಹಂತದ ವರೆಗೆ  ನಿಭಾಯಿಸುತ್ತದೆ. ವರ್ಗಾವಣೆಯನ್ನೋ ಪುರಸ್ಕಾರ ವನ್ನೋ ನೀಡುತ್ತಲೂ ಇರುತ್ತದೆ. ಆದ್ದರಿಂದ,

ಇವರ ಕೈಯಲ್ಲಿ ಯಾವುದೇ ಕಾಯ್ದೆಯು ದುರುಪಯೋಗಕ್ಕೆ ಒಳಗಾಗುವುದನ್ನು ನಿರಾಕರಿಸುವ ಹಾಗಿಲ್ಲ. ಸಿಪಿಎಂ ಪಕ್ಷದ ಬಿನೋಯ್  ವಿಶ್ವಂ ಅವರು 2020ರಲ್ಲಿ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿ ಜಿ. ಕೃಷ್ಣಾ ರೆಡ್ಡಿ  ನೀಡಿದ ಉತ್ತರವೂ ಇದನ್ನೇ ಸೂಚಿಸುತ್ತದೆ. ಅವರ ಪ್ರಕಾರ, 2016ರಿಂದ 2019ರ ನಡುವೆ ದಾಖಲಾದ ಪ್ರಕರಣಗಳ ಪೈಕಿ 2.2%  ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಚಾರ್ಜ್‍ಶೀಟ್ ಸಲ್ಲಿಕೆಯ ಪ್ರಮಾಣ ಕೂಡ 25%ಕ್ಕಿಂತಲೂ ಕಡಿಮೆ. 2016ರಲ್ಲಿ  232 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಯಾಗಿದ್ದರೆ, 2017ರಲ್ಲಿ 272, 2018ರಲ್ಲಿ 317 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.  ಹಾಗೆಯೇ 2015ಕ್ಕೆ ಹೋಲಿಸಿದರೆ, 2019ರಲ್ಲಿ UAPA  ಅಡಿಯಲ್ಲಿ ಬಂಧಿತರಾದವರ ಸಂಖ್ಯೆ 72%ಕ್ಕಿಂತಲೂ ಅಧಿಕ. ಈ ವಿವರ  ನೀಡಿರುವುದೂ ಕೃಷ್ಣಾ ರೆಡ್ಡಿಯವರೇ. UAPA  ಅಡಿ 2019ರಲ್ಲಿ ದಾಖಲಾದ 1226 ಪ್ರಕರಣಗಳಿಗೆ ಸಂಬಂಧಿಸಿ 1948 ಮಂದಿಯನ್ನು  ಬಂಧಿಸಲಾಗಿದೆ. 2015ರಿಂದ 2018ರ ನಡುವೆ 897, 922, 901 ಮತ್ತು 1182 ಪ್ರಕರಣಗಳು ದಾಖಲಾಗಿದ್ದು, 1,128, 999, 1,554  ಮತ್ತು 1,421 ಮಂದಿಯನ್ನು ಬಂಧಿಸಲಾಗಿದೆ. 2019ರಲ್ಲಿ UಂPಂ ಅಡಿಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾದದ್ದು ಮಣಿಪುರದಲ್ಲಿ-  306. ಆದರೆ ಅತೀಹೆಚ್ಚು ಬಂಧನವಾದದ್ದು ಉತ್ತರ ಪ್ರದೇಶದಲ್ಲಿ- 498 ಮಂದಿ. ತಮಿಳ್ನಾಡಿನಲ್ಲಿ 270 ಪ್ರಕರಣ, ಜಮ್ಮು ಮತ್ತು  ಕಾಶ್ಮೀರದಲ್ಲಿ 235 ಪ್ರಕರಣ, ಝಾರ್ಖಂಡ್‍ನಲ್ಲಿ 105 ಮತ್ತು ಅಸ್ಸಾಮ್‍ನಲ್ಲಿ 27 ಪ್ರಕರಣಗಳು 2019ರಲ್ಲಿ ದಾಖಲಾಗಿವೆ. ಹಾಗೆಯೇ,  2014ರಿಂದ 18ರ ನಡುವೆ ದಾಖಲಾದ ಪ್ರಕರಣಗಳ ಪೈಕಿ 50% ಪ್ರಕರಣಗಳೂ ಸಾಬೀತಾಗಿಲ್ಲ. ಅಲ್ಲದೇ,

UAPA ಯು ರಾಜಕೀಯವಾಗಿ ದುರುಪಯೋಗಕ್ಕೀಡಾಗಬಹುದು ಎಂಬ ಆರೋಪಕ್ಕೆ ಇನ್ನೂ ಒಂದು ಪುರಾವೆ ಇದೆ.

2017ರಲ್ಲಿ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ UAPA  ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ಉತ್ತರ  ಪ್ರದೇಶದಲ್ಲಿ 2016ರಲ್ಲಿ ಬರೇ 10 ಪ್ರಕರಣಗಳು ದಾಖ ಲಾಗಿದ್ದರೆ, 2017ರಲ್ಲಿ 109 ಮತ್ತು 2018ರಲ್ಲಿ 107 ಪ್ರಕರಣಗಳು ದಾಖಲಾಗಿವೆ.  ಇನ್ನೊಂದು ಸಂಗತಿಯನ್ನೂ ಇಲ್ಲಿ ಉಲ್ಲೇಖಿ ಬಹುದು. 2018ರಲ್ಲಿ ಒಟ್ಟು 317 ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಇದಕ್ಕಾಗಿ ಪೊಲೀಸರು ಒಂದರಿಂದ 2 ವರ್ಷಗಳ ಅವಧಿಯನ್ನು ತೆಗೆದುಕೊಂಡಿದ್ದಾರೆ. ಅದರಲ್ಲೂ 10 ಪ್ರಕರಣಗಳಲ್ಲಿ 2 ವರ್ಷ ಕ್ಕಿಂತಲೂ ಅಧಿಕ  ಸಮಯವನ್ನು ತೆಗೆದುಕೊಂಡಿದ್ದಾರೆ. ಹಾಗಂತ, ಚಾರ್ಜ್‍ಶೀಟ್ ಸಲ್ಲಿಸದೇ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಈ  ಕಾಯ್ದೆಯಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿಕೊಳ್ಳುವಂತಿಲ್ಲ ಎಂಬಂಶವೂ ಗಮನಾರ್ಹ. ಅಷ್ಟಕ್ಕೂ,

UAPAಯನ್ನು ರಚಿಸುವಾಗ ಯಾವ ಉದ್ದೇಶ ಇತ್ತೋ ಮತ್ತು ಆಗ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತೋ ಆ ಉದ್ದೇಶ ಮತ್ತು  ಪರಿಸ್ಥಿತಿಗಳೆರಡೂ ಇವತ್ತಿನ ದಿನಗಳಲ್ಲಿ ಬದಲಾಗಿವೆ. ಭಯೋತ್ಪಾದನೆಯಂಥ ಅಂತಾರಾಷ್ಟ್ರೀಯ ದೇಶದ್ರೋಹಿ ಸಂಚು ಗಳನ್ನು ಮಟ್ಟ  ಹಾಕುವುದಕ್ಕೆಂದು ರಚಿಸಲಾದ ಕಠಿಣ ಕಾಯ್ದೆಯು ಬರಬರುತ್ತಾ ಅಮಾನವೀಯ ಸ್ವರೂಪವನ್ನು ಪಡಕೊಂಡಿತಲ್ಲದೇ, ಪ್ರಭುತ್ವ ವಿರೋಧಿ  ಧ್ವನಿಗಳನ್ನು ಅಡಗಿಸುವ ಉದ್ದೇಶದಿಂದಲೇ ದುರುಪಯೋಗಕ್ಕೂ ಈಡಾಗತೊಡಗಿತು. ಭಿನ್ನ ಧ್ವನಿಗಳನ್ನು ಗಲಭೆಯೆಂದು ಬಿಂಬಿಸಿ ಅದಕ್ಕೆ  ದೇಶವಿರೋಧಿ ಚಿತ್ರಕತೆಯನ್ನು ಹೆಣೆದು ವರ್ಷಗಟ್ಟಲೆ ಆ ಧ್ವನಿಗಳನ್ನು ಜೈಲಲ್ಲಿಟ್ಟು ಮಣಿಸುವುದಕ್ಕೆ ಈ ಕಾಯ್ದೆಯನ್ನು ಬಳಸಲಾಯಿತು.  ಜಾಮೀನಿಗೆ ಸಂಬಂಧಿಸಿ ಇರುವ ಕಠಿಣ ನಿಬಂಧನೆಗಳು ಪ್ರಭುತ್ವಕ್ಕೆ ವರದಾನವಾಯಿತು. ಸಿಎಎ ವಿರೋಧಿ ಪ್ರತಿಭಟನೆಯನ್ನೇ ದೆಹಲಿ  ಗಲಭೆಯೊಂದಿಗೆ ಜೋಡಿಸಿ ವಿದ್ಯಾರ್ಥಿ ಹೋರಾಟಗಾರರನ್ನು ಜೈಲಿಗಟ್ಟಿರುವುದು ಇದಕ್ಕಿರುವ ಹಲವು ಪುರಾವೆಗಳಲ್ಲಿ ಒಂದು ಮಾತ್ರ.  ಉಮರ್ ಖಾಲಿದ್ ಇನ್ನೂ ಜೈಲಲ್ಲಿದ್ದಾರೆ. ಇನ್ನು, ಹೀಗೆ ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಜೈಲು ಸೇರಿ ಐದೋ ಹತ್ತೋ  ವರ್ಷಗಳ ಬಳಿಕ ಬಿಡುಗಡೆಯಾಗಿ

ಬಂದವರ ಅನುಭವಗಳಂತೂ ಕರುಣಾಜನಕ. ಎಲ್ಲವನ್ನೂ ಕಳಕೊಂಡು ಬೀದಿಗೆ ಬಿದ್ದ ಸ್ಥಿತಿ ಅವರದು. ಒಂದುಕಡೆ ಅಮೂಲ್ಯ  ವರ್ಷಗಳನ್ನು ಕಳಕೊಂಡಿದ್ದರೆ ಇನ್ನೊಂದು ಕಡೆ ತನ್ನದು ಎನ್ನುವ ವ್ಯಾಪಾರವನ್ನೂ ಗೆಳೆಯರನ್ನೂ ನೆರೆಕರೆಯವರನ್ನೂ ಅವರು  ಕಳಕೊಂಡಿರುತ್ತಾರೆ. ತನ್ನ ಮನೆಯವರನ್ನು ಬಿಟ್ಟರೆ ಉಳಿದವರೆಲ್ಲರೂ ಇವರನ್ನು ಹತ್ತಿರ ಬಿಟ್ಟುಕೊಳ್ಳುವುದಕ್ಕೆ ಅನುಮಾನಿಸುವ ಪರಿಸ್ಥಿತಿ  ಎದುರಾಗುತ್ತದೆ. ಇಲ್ಯಾಸ್, ಇರ್ಫಾನ್, ಹಬೀಬ್- ಇವರೆಲ್ಲ ಮಾಧ್ಯಮದವರೊಂದಿಗೆ ಹಂಚಿಕೊಂಡ ಅನುಭವ ಹೃದಯಬೇಧಕ.

UAPA ಕಾಯ್ದೆ ಅಗತ್ಯವೋ ಅಲ್ಲವೋ, ಆದರೆ ಅಮಾಯಕರನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸುವ ಅದರ ಸೆಕ್ಷನ್‍ಗಳು  ಖಂಡಿತ ಅಮಾನವೀಯ, ಕ್ರೂರ.