ಕ್ರೊಯೇಷಿಯಾದ ಈ ಪಟ್ಟಣದಲ್ಲಿ 12 ರೂ. ಗಳಿಗೆ ಮನೆ ಮಾರಾಟ: ಕಾರಣ ಏನು ಗೊತ್ತಾ?

0
502

ಸನ್ಮಾರ್ಗ ವಾರ್ತೆ

ಲೆಗ್ರಾಡ್(ಉತ್ತರ ಕ್ರೊಯೇಷಿಯಾ): ಒಂದು ಕಾಲದಲ್ಲಿ ಕ್ರೊಯೇಷಿಯಾದ ಭೂ ಪ್ರದೇಶದ ಎರಡನೇ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿದ್ದ ಲೆಗ್ರಾಡ್ ಎಂಬ ಪ್ರದೇಶದಲ್ಲಿ ಸದ್ಯ ಮನೆಗಳನ್ನು ಒಂದು ಕುನಾ (16 ಯು.ಎಸ್. ಸೆಂಟ್ಸ್) ಅಂದರೆ ಭಾರತದ 12 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ಉತ್ತರ ಕ್ರೊಯೇಷಿಯಾದ ಲೆಗ್ರಾಡ್ ಪಟ್ಟಣದಲ್ಲಿ ಜನಸಂಖ್ಯೆಯ ಪ್ರಮಾಣವು ತೀವ್ರವಾಗಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಹೊಸ ನಿವಾಸಿಗಳನ್ನು ಆಕರ್ಷಿಸುವ ಉದ್ದೇಶದಿಂದ ಅಲ್ಲಿದ್ದ ನಿವಾಸಿಗಳು ಕೈಬಿಟ್ಟ ಮನೆಗಳನ್ನು ಒಂದು ಕುನಾ (ರೂ. 12) ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ಕ್ರೊಯೇಷಿಯಾದ ಭೂಪ್ರದೇಶದ ಎರಡನೇ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿದ್ದ ಲೆಗ್ರಾಡ್, ಒಂದು ಶತಮಾನದ ಹಿಂದೆ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ವಿಘಟನೆಯ ನಂತರ ಕುಸಿತವನ್ನು ಅನುಭವಿಸಿದೆ.

“ನಾವು ಗಡಿ ಪಟ್ಟಣವಾಗಿ ಇತರ ಸ್ಥಳಗಳಿಗೆ ಕಡಿಮೆ ಸಾರಿಗೆ ಸಂಪರ್ಕವನ್ನು ಹೊಂದಿದ್ದೇವೆ. ಅಂದಿನಿಂದ ಜನಸಂಖ್ಯೆಯು ಕ್ರಮೇಣ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಹೊಸ ನಿವಾಸಿಗಳಿಗೆ ಮಾರಾಟ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿರುವ ಸ್ಥಳೀಯ ಮೇಯರ್ ಇವಾನ್ ಸಬೊಲಿಕ್, ನಮ್ಮ ಮೊದಲ ಪ್ರಯತ್ನವಾಗಿ ಪಟ್ಟಣದಲ್ಲಿ ಖಾಲಿಯಾಗಿದ್ದ 19 ಮನೆಗಳನ್ನು ಮಾರಾಟ ಮಾಡಿದ್ದೇವೆ ಮತ್ತು ಮನೆ ನಿರ್ಮಾಣಕ್ಕಾಗಿ ಸ್ಥಳಗಳನ್ನು ಕೂಡ ಒಂದು ಕುನಾ ದರದಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಪಟ್ಟಣವು ಹಂಗೇರಿಯ ಗಡಿಯ ಸಮೀಪದಲ್ಲಿದೆ ಮತ್ತು ಸದ್ಯ ಇಲ್ಲಿ ಕೇವಲ 2,250 ರಷ್ಟು ನಿವಾಸಿಗಳು ವಾಸಿಸುತ್ತಿದ್ದಾರೆ. ಲೆಗ್ರಾಡ್‌ನಲ್ಲಿ ನೆಲೆಸಲು ಬಯಸುವ ವ್ಯಕ್ತಿಗಳು ಅಥವಾ ದಂಪತಿಗಳು ಆರ್ಥಿಕವಾಗಿ ಸುದೃಢರಾಗಿರಬೇಕು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ 15 ವರ್ಷಗಳ ಕಾಲ ಉಳಿಯಲು ಬದ್ಧರಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.