ಸನ್ಮಾರ್ಗ ವಾರ್ತೆ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ (AAP) ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಲಾಗಿದೆ. ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಎಂಬ ಈ ಪ್ರಣಾಳಿಕೆಯಲ್ಲಿ ದೆಹಲಿಯ ಜನರಿಗೆ 15 ಭರವಸೆಗಳನ್ನು ನೀಡಲಾಗಿದೆ.
ಪ್ರಧಾನ ಭರವಸೆಗಳಲ್ಲಿ ಯುವಕರಿಗೆ ಉದ್ಯೋಗದ ಭದ್ರತೆ, ಮಹಿಳೆಯರಿಗೆ ಸಮ್ಮಾನ್ ಯೋಜನೆ’ ಅಡಿಯಲ್ಲಿ ತಿಂಗಳಿಗೆ ₹2,100 ಸಹಾಯಧನ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಮತ್ತು ಮೆಟ್ರೊ ಪ್ರಯಾಣ, ದಲಿತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಸ್ಕಾಲರ್ಶಿಪ್ ಯೋಜನೆಯಡಿ ಅಂತಾರಾಷ್ಟ್ರೀಯ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿದೆ.
ಮಹಿಳೆಯರಿಗೆ ತಿಂಗಳಿಗೆ ₹2,100 ನೆರವು, 24 ಗಂಟೆಗಳ ಶುದ್ಧ ಕುಡಿಯುವ ನೀರು, ಉಚಿತ ವಿದ್ಯುತ್ ಮತ್ತು ನೀರು, ಕಲುಷಿತ ಯಮುನಾ ನದಿಯ ಶುದ್ಧೀಕರಣ, ದೆಹಲಿಯ ರಸ್ತೆಗಳ ಅಭಿವೃದ್ಧಿ, ಮತ್ತು ಯೋಗಾ ಕೇಂದ್ರಗಳನ್ನು ಪ್ರಾರಂಭಿಸುವುದು ಈ ಪ್ರಣಾಳಿಕೆಯ ಭಾಗವಾಗಿದೆ.
ಆಪ್ ನಾಯಕ ಅರವಿಂದ ಕೇಜ್ರಿವಾಲ್, ಈ ಭರವಸೆಗಳು ಜನತೆಯ ಆವಶ್ಯಕತೆಗಳನ್ನು ಪೂರೈಸಲು ಸ್ಪಷ್ಟ ಯೋಜನೆಗಳೊಂದಿಗೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
“ಈ ಭರವಸೆಗಳು ‘ಕೇಜ್ರಿವಾಲ್ ಕಿ ಗ್ಯಾರಂಟಿ’ಯಾಗಿದೆ. ಆದರೆ, ಬಿಜೆಪಿ ನೀಡುವ ಭರವಸೆಗಳು ಹುಸಿಯಾಗಿವೆ,” ಎಂದು ಬಿಜೆಪಿ ವಿರುದ್ಧ ಕೇಜ್ರಿವಾಲ್ ಟೀಕಿಸಿದರು.












