‘ಆಪ್ ಸರಿಯಾದ ಹಾದಿಯಲ್ಲಿಲ್ಲ’: ಸಂಸದರು ಪಕ್ಷ ತೊರೆಯುತ್ತಿರುವ ಕುರಿತು ಅಣ್ಣಾ ಹಜಾರೆ ಪ್ರತಿಕ್ರಿಯೆ

0
786

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಆಮ್ ಆದ್ಮಿ ಪಕ್ಷದ (AAP) ಸಂಸದರು ಪಕ್ಷವನ್ನು ತೊರೆಯುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದಾರೆ. ಆಪ್ ತನ್ನ ನೀತಿಗಳಿಂದ ದೂರ ಸರಿದ ಕಾರಣ ಸಂಸದರು ಪಕ್ಷವನ್ನು ತೊರೆದಿದ್ದಾರೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಇದು ಆಪ್ ನಾಯಕತ್ವದ ತಪ್ಪಾಗಿದೆ. ಒಂದು ವೇಳೆ ಪಕ್ಷವು ಸರಿಯಾದ ಹಾದಿಯನ್ನು ಅನುಸರಿಸಿದ್ದರೆ ಅವರು ಪಕ್ಷವನ್ನು ತೊರೆಯುತ್ತಿರಲಿಲ್ಲ ಎಂದು ಹಜಾರೆ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಪಕ್ಷದೊಳಗೆ ಎದುರಾದ ಬಿಕ್ಕಟ್ಟುಗಳು ಅವರು ಇಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿರಬಹುದು. ಪಕ್ಷವನ್ನು ಬಿಡಲು ಅವರಿಗೆ ತಮ್ಮದೇ ಆದ ಕಾರಣಗಳಿರಬಹುದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಅಭಿಪ್ರಾಯವಿರುತ್ತದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದ ಅಹಲ್ಯಾ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಣ್ಣಾ ಹಜಾರೆ ಈ ಮಾತುಗಳನ್ನು ಹೇಳಿದರು.

ಆಮ್ ಆದ್ಮಿ ಪಕ್ಷದ ಏಳು ಸಂಸದರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ನಿರ್ಧಾರವನ್ನು ನಿನ್ನೆ ಘೋಷಿಸಿದರು. ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಪಕ್ಷ ತೊರೆಯುತ್ತಿರುವ ಸಂಸದರು. ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದರು ಪಕ್ಷ ತೊರೆಯುವ ನಿರ್ಧಾರವನ್ನು ಘೋಷಿಸಿದರು.

ರಾಜ್ಯಸಭೆಯ ಮೂರನೇ ಎರಡರಷ್ಟು ಸದಸ್ಯರು ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿರುವುದಾಗಿ ರಾಘವ್ ಚಡ್ಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ತಿಂಗಳ ಆರಂಭದಲ್ಲಿ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಪಕ್ಷದೊಂದಿಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ರಾಘವ್ ಚಡ್ಡಾ ಅವರ ಸ್ಥಾನಕ್ಕೆ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿತ್ತು. ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ನಂತರ ಅಶೋಕ್ ಮಿತ್ತಲ್ ಆಮ್ ಆದ್ಮಿ ಪಕ್ಷದಿಂದ ಹೊರಹೋಗುವುದಾಗಿ ಘೋಷಿಸಿದರು.