ಮನುಷ್ಯತ್ವ ಎತ್ತಿಹಿಡಿದ ಅಬ್ದುಲ್ಲಾ ಮತ್ತು ಮೌಲಾನಾ

0
458

✍️ ಅಮಾನ್ ಕೆ.

ಎರಡು ಘಟನೆಗಳು

  1. ಅವರ ಹೆಸರು ಅಬ್ದುಲ್ಲಾ. ಕೇರಳದ ಮಲಪುರಂನಲ್ಲಿ ವಾಸಿಸುವ ಇವರು ಮಾರ್ಬಲ್ ವ್ಯಾಪಾರಿ. 50 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಇವರ ಹೋಟೆಲ್ ನಡೆಸುತ್ತಾ ಇದ್ದರು. ಆ ಸಂದರ್ಭದಲ್ಲಿ ಓರ್ವ ವ್ಯಾಪಾರಿಯಿಂದ 93 ರೂಪಾಯಿಯನ್ನು ಸಾಲವಾಗಿ ಪಡೆದುಕೊಂಡಿದ್ದರು. ಆದರೆ ಅದನ್ನು ಮರಳಿಸಿರಲಿಲ್ಲ. ಅವರಿಗೆ ನೆನಪೂ ಇರಲಿಲ್ಲ. ಈ ನಡುವೆ ಅವರು ಆಂಧ್ರದ ಹೋಟೆಲ್ ಉದ್ಯಮಕ್ಕೆ ವಿದಾಯ ಕೋರಿ ಮರಳಿ ಮಲಪುರಂಗೆ ಬಂದರು. ಹೊಸ ಮಾರ್ಬಲ್ ಉದ್ಯಮವನ್ನು ಪ್ರಾರಂಭಿಸಿದರು.

20 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಈ ಅಬ್ದುಲ್ಲಾರಿಗೆ ಆ ಸಾಲದ ನೆನಪಾಯಿತು. ನೆನಪು ಮಾತ್ರ ಅಲ್ಲ ಸಾಲ ಅವರನ್ನು ಕೊರೆಯತೊಡಗಿತು. ತಾನು ತಪ್ಪು ಮಾಡಿದ್ದೇನೆ ಎಂದು ಅವರಿಗೆ ಅನಿಸ ತೊಡಗಿತು. ಆ ಹಣವನ್ನು ಆತನಿಗೆ ಮರಳಿಸುವ ಹೊಣೆಗಾರಿಕೆ ತನ್ನದು ಎಂದು ಒಳ ಪ್ರಜ್ಞೆ ಎಚ್ಚರಿಸತೊಡಗಿತು. ಅವರಿಗೆ ನಿಂತಲ್ಲಿ ನಿಲ್ಲಲಾಗಲಿಲ್ಲ. ಕುಳಿತಲ್ಲಿ ಕೂರಲೂ ಆಗಲಿಲ್ಲ. ಬಿಡುವಿನ ವೇಳೆ ಆ 93 ರೂಪಾಯಿಯ ಸಾಲ ನೆನಪಿಗೆ ಬರತೊಡಗಿತು. ಈ ಹಿನ್ನೆಲೆಯಲ್ಲಿ ಅವರು ಒಂದು ನಿರ್ಧಾರಕ್ಕೆ ಬಂದರು. ತಾನು ಸಾಲ ಪಡಕೊಂಡ ಆ ವ್ಯಾಪಾರಿ ಯನ್ನು ಭೇಟಿಯಾಗಿ ಆತನ ಸಾಲ ವನ್ನು ಮರಳಿಸಬೇಕು ಎಂದು ಅವರು ತೀರ್ಮಾನಿಸಿದರು. ಈ ಬಗ್ಗೆ ತನ್ನ ಗೆಳೆಯರಲ್ಲಿ ಹೇಳಿಕೊಂಡು. ತನಗೆ ಸಾಲ ನೀಡಿದ ವ್ಯಕ್ತಿಯ ಮಾಹಿತಿಯನ್ನು ನೀಡಿ ನೆರವಾಗುವಂತೆ ಕೋರಿದರು. ಆದರೆ ಅವರಿಂದಲೂ ಸೂಕ್ತ ಮಾಹಿತಿ ಸಿಗಲಿಲ್ಲ.

ಇದಾದ ಬಳಿಕ ಅವರು ಸ್ವಯಂ ರಂಗಕ್ಕೆ ಇಳಿದರು. ಆಂಧ್ರಪ್ರದೇಶಕ್ಕೆ ತೆರಳಿ ಆ ವ್ಯಕ್ತಿಯನ್ನು ಹುಡುಕಾಡುವುದಕ್ಕೆ ತೀರ್ಮಾನಿಸಿದರು. ಗೆಳೆಯರಲ್ಲೂ ಈ ಬಗ್ಗೆ ಹೇಳಿದರು. ಹೀಗೆ ತನ್ನ ನಾಲ್ಕೈದು ಗೆಳೆಯರೊಂದಿಗೆ ಅವರು ಆಂಧ್ರಪ್ರದೇಶದ ಕರ್ನೂಲ್‌ಗೆ ತೆರಳಿದರು. ಅಲ್ಲಿ ಕೆಲಸ ಮಾಡುತ್ತಿರುವ ತನ್ನ ಸಹೋದರಿಯ ಮಗನನ್ನು ಜೊತೆ ಸೇರಿಸಿಕೊಂಡರು.

ಕರ್ನೂರಿನ ಗಣಿಗಿಲ್ಲಿ ಎಂಬ ಪ್ರದೇಶ ದಲ್ಲಿ ಎರಡು ದಿನಗಳ ಕಾಲ ಹುಡು ಕಾಡಿದ ಬಳಿಕ ಅವರ ಹುಡುಕಾಟಕ್ಕೆ ತೆರೆಬಿತ್ತು. ವಿಷಾದ ಏನೆಂದರೆ, ತಾನು ಸಾಲ ಪಡೆದುಕೊಂಡ ವ್ಯಕ್ತಿ ಮತ್ತು ಅವರ ಇಬ್ಬರು ಮಕ್ಕಳು ಅದಾಗಲೇ ಮೃತಪಟ್ಟಿದ್ದಾರೆ ಅನ್ನುವುದು ಅವರಿಗೆ ಗೊತ್ತಾಯ್ತು. ಬಳಿಕ ಸಾಲ ನೀಡಿದಾತನ ಮೊಮ್ಮಗ ಮಕ್ಬೂಲ್ ಅಹಮದ್ ಎಂಬಾತನನ್ನು ಭೇಟಿಯಾಗಿ ತಾನು ಸಾಲ ಪಡೆಕೊಂಡ ಮಾಹಿತಿ ನೀಡಿದ ಮೊಮ್ಮಗ ಮಕ್ಬೂಲ್ ಅಹಮದ್ ಎಂಬಾತನನ್ನು ಭೇಟಿಯಾಗಿ ತಾನು ಸಾಲ ಪಡಕೊಂಡ ಮಾಹಿತಿ ನೀಡಿದರು. 50 ವರ್ಷಗಳ ಹಿಂದಿನ 93 ರೂಪಾಯಿಗೆ ಬದಲಾಗಿ ಇಂದಿನ ಅದರ ಮೌಲ್ಯವನ್ನು ಲೆಕ್ಕ ಹಾಕಿ, ಅವರಿಗೆ ಮರಳಿಸಿದರು. ಮಾತ್ರವಲ್ಲ ಉಡುಗೊರೆಯನ್ನೂ ಕೊಟ್ಟರು.

ಘಟನೆ ಎರಡು: ಡಿಸೆಂಬರ್ ಒಂದ ರಂದು ಮುಂಜಾನೆ ನಾಲ್ಕು ಗಂಟೆ. ಬೆಳಗಿನ ಅದಾನ್ ಕೊಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದ ಹಾಫಿಝ್ ಮೌಲಾನ ಅಬ್ದುಲ್ ಬಾಸಿತ್ ಅವರಿಗೆ ಭಾರಿ ಶಬ್ದ ಕೇಳಿಸುತ್ತದೆ. ಅವರು ಮಸೀದಿಯ ಕಿಟಕಿಯನ್ನು ತೆರೆದು ಶಬ್ದ ಕೇಳಿ ಬಂದ ಕಡೆಗೆ ನೋಡುತ್ತಾರೆ. ತಾನಿರುವ ಜುಮಾ ಮಸೀದಿಯ ಪಕ್ಕದ ಹಳ್ಳ ಒಂದಕ್ಕೆ ಕಾರು ಮಗುಚಿ ಬಿದ್ದಿರುವುದು ಗೊತ್ತಾಗುತ್ತದೆ. ನಿಧಾನಕ್ಕೆ ಕಾರು ಮುಳುಗುತ್ತಿರು ವುದು ಅವರಿಗೆ ಕಾಣಿಸುತ್ತದೆ. ತಕ್ಷಣ ಅವರು ಮಸೀದಿ ಮೈಕ್‌ನತ್ತ ಓಡುತ್ತಾರೆ. ಸಾರ್ವಜನಿಕರಿಗೆ ಮಾಹಿತಿ ಕೊಡುತ್ತಾರೆ.

ಒಂದಕ್ಕಿಂತ ಹೆಚ್ಚು ಬಾರಿ ಈ ಮಾಹಿತಿಯನ್ನು ಪುನರಾವರ್ತಿಸಿ ನೆರವಿಗೆ ಬರುವಂತೆ ಕೋರುತ್ತಾರೆ. ನಿದ್ದೆಯಲ್ಲಿದ್ದ ಮಸೀದಿ ಅಕ್ಕಪಕ್ಕದ ಜನರು ಓಡೋಡಿ ಬರುತ್ತಾರೆ. ಇನ್ನೇನು ಆ ದೊಡ್ಡ ಹಳ್ಳದಲ್ಲಿ ಮುಳುಗಿಯೇ ಬಿಡುತ್ತದೆ ಎಂಬಂತಿದ್ದ ಕಾರಿನಿಂದ ಏಳು ಮಂದಿ ಪ್ರಯಾಣಿಕರನ್ನು ರಕ್ಷಿಸುತ್ತಾರೆ. ಈ ಕಾರು ತ್ರಿಪುರದಿಂದ ಹೊರಟಿತ್ತು ಮತ್ತು ತ್ರಿಪುರ-ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಹಳ್ಳಕ್ಕೆ ಬಿದ್ದಿತ್ತು. ಹಾಗಂತ,

ಈ ಕಾರಲ್ಲಿ ಯಾರಿದ್ದಾರೆ ಅನ್ನುವುದು ಮೌಲಾನರಿಗೆ ಗೊತ್ತಿರಲಿಲ್ಲ. ಅವರು ಹಿಂದುವೋ ಮುಸ್ಲಿಮೋ ಅನ್ನುವುದನ್ನೂ ಅವರು ಲೆಕ್ಕಿಸಿರಲಿಲ್ಲ. ಈ ಕಾರಿನಲ್ಲಿದ್ದವರ ನೆರವಿಗೆ ಧಾವಿಸಿದವರೂ ಇಂಥದ್ದೊಂದು ಆಲೋಚನೆಯನ್ನು ಮಾಡಿಯೇ ಇರಲಿಲ್ಲ. ತಮ್ಮ ಧರ್ಮವನ್ನು ನೋಡದೆ ಸಾವಿನಿಂದ ತಪ್ಪಿಸಿದ ಸ್ಥಳೀಯರಿಗೆ ಈ ಏಳು ಮಂದಿ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದರು. ಮೌಲಾನರ ಸಮಯ ಪ್ರಜ್ಞೆಯನ್ನು ಕೊಂಡಾಡಿದರು.

ನಿಜವಾಗಿ 93 ರೂಪಾಯಿ ಸಾಲವನ್ನು ಮರಳಿಸುವುದಕ್ಕಾಗಿ ಹೆಣಗಾಡಿದ ಅಬ್ದುಲ್ಲಾ ಮತ್ತು ತನಗೆ ಗುರುತು ಪರಿಚಯವೇ ಇಲ್ಲದ ಕಾರು ಪ್ರಯಾಣಿಕರನ್ನು ರಕ್ಷಿಸುವುದಕ್ಕಾಗಿ ಮಸೀದಿ ಮೈಕನ್ನು ಬಳಸಿ ಆಪದ್ಬಾಂಧವರಾದ ಮೌಲಾನ ಇಬ್ಬರೂ ಇವತ್ತಿನ ಕಾಲದ ಹೀರೋಗಳಾಗಬೇಕು. ಒಂದು ವೇಳೆ ಈ 93 ರೂಪಾಯಿಯನ್ನು ಅಬ್ದುಲ್ಲಾ ಮರಳಿಸದೆ ಇರುತ್ತಿದ್ದರೆ ಏನೂ ಆಗುತ್ತಿರಲಿಲ್ಲ. ಅವರಿಗಲ್ಲದೆ ಆ ವಿಷಯ ಯಾರಿಗೂ ಗೊತ್ತೂ ಇರಲಿಲ್ಲ. ಸಾಲ ಪಡೆದಾತ ಮರಳಿಸುವಂತೆ ಅವರ ಮೇಲೆ ಒತ್ತಡವನ್ನೂ ಹಾಕಿರಲಿಲ್ಲ. ಅದು ಬಿಡಿ, ಸಾಲ ಪಡೆದಾತ ಎಲ್ಲಿದ್ದಾನೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಆದರೂ ಅವರ ಅಂತರಾತ್ಮ ಕೇಳಲಿಲ್ಲ. ಹಾಗೆಯೇ ಆ ಮೌಲಾನ ಕೂಡ. ಅವರು ತನಗೇಕೆ ಉಸಾಬರಿ ಎಂದು ಹೇಳಿಕೊಂಡು ಎಂದಿನಂತೆ ಮಸೀದಿಯಲ್ಲಿ ಅಝಾನ್ ಕೊಟ್ಟು ನಮಾಝ್ ನಿರ್ವಹಿಸಿ ತಮ್ಮಷ್ಟಕ್ಕೆ ಇರಬಹುದಿತ್ತು. ಹಾಗೆ ಇರುತ್ತಿದ್ದರೆ ಅವರನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಅವರ ಒಳಗಿನ ಮನುಷ್ಯತ್ವ ಜಾಗೃತವಾಯಿತು. ಹೇಗಾದರೂ ಮಾಡಿ ಆ ಕಾರಿನೊಳಗಿದ್ದವರನ್ನು ರಕ್ಷಿಸಬೇಕು ಎಂದು ಅಂತರಾತ್ಮ ಕರೆ ಕೊಟ್ಟಿತು.

ಧರ್ಮದ ಹೆಸರಲ್ಲಿ ಮಸೀದಿಯ ಮೈಕನ್ನು ವಿರೋಧಿಸುವವರನ್ನು ಮತ್ತು ಮುಸ್ಲಿಂ ಐಡೆಂಟಿಟಿಯನ್ನು ದ್ವೇಷದಿಂದ ಕಾಣುವವರನ್ನು ಈ ಮೌಲಾನ ಮತ್ತು ಅಬ್ದುಲ್ಲ ಕಣ್ಣು ತೆರೆಸಲಿ.