ಶ್ರೀನಗರ,ಆ.19: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಆಗಸ್ಟ್ ಐದರಿಂದ ಕಾಶ್ಮೀರದಲ್ಲಿ ನಾಲ್ಕು ಸಾವಿರ ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎನ್ನುವ ಅಧಿಕೃತ ವರದಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಇಷ್ಟರಲ್ಲೇ ಸಾವಿರಾರು ಮಂದಿಯ ಬಂಧನವಾಗಿದೆಯೆಂದು ಪ್ರಮುಖ ಸುದ್ದಿ ಸಂಸ್ಥೆಯೊಂದರ ವರದಿಗಾರ ಅಧಿಕೃತ ಮೂಲಗಳನ್ನು ಉದ್ಧರಿಸಿ ವರದಿ ಮಾಡಿದ್ದಾರೆ.
ತನ್ನ ಕುರಿತು ಬಹಿರಂಗಪಡಿಸಬಾರದೆಂದು ನಿಬಂಧನೆಯಲ್ಲಿ ಓರ್ವ ಮ್ಯಾಜಿಸ್ಟ್ರೇಟ್ ನಾಲ್ಕು ಸಾವಿರದಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸುರಕ್ಷೆ ಕಾನೂನು ಪ್ರಕಾರ ಬಂಧಿಸಿದವರನ್ನು ವಿಚಾರಣೆಯಿಲ್ಲದೆ ಎರಡು ವರ್ಷಗಳವರೆಗೆ ಜೈಲಿನಲ್ಲಿರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಇದನ್ನು ದುರುಪಯೋಗಿಸಿ ವ್ಯಾಪಕ ಬಂಧನ ನಡೆಯಿತು ಎನ್ನಲಾಗಿದೆ. ಬಂಧಿಸಿದವರಲ್ಲಿ ಹೆಚ್ಚಿನವರನ್ನು ಕಾಶ್ಮೀರದ ಹೊರಗಿನ ಜೈಲಿನಲ್ಲಿರಿಸಲಾಗಿದೆ. ಕಾಶ್ಮೀರದ ಜೈಲುಗಳಲ್ಲಿ ಸ್ಥಳದ ಅಭಾವಿರುವುದು ಅದಕ್ಕೆ ಕಾರಣ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು. ಸಂಪರ್ಕ ಸಾಧನಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ವಿರುವುದರಿಂದ ಸ್ಯಾಟಲೈಟ್ ಫೋನ್ ಉಪಯೋಗಿಸಿ ರಾಜ್ಯದ ವಿವಿಧ ಕೇಂದ್ರಗಳನ್ನು ಸಂಪರ್ಕಿಸಿ ಮ್ಯಾಜಿಸ್ಟ್ರೇಟ್ ಬಂಧಿಸಿದವರ ಲೆಕ್ಕವನ್ನು ಕಲೆಹಾಕಿದ್ದರು. ನೂರಕ್ಕೂ ಹೆಚ್ಚು ಪ್ರಾದೇಶಿಕ ರಾಜಕೀಯ ನಾಯಕರು, ಹೋರಾಟಗಾರರು, ಅಕಾಡಮಿಸ್ಟ್ಗಳು ಬಂಧನಕ್ಕೊಳಗಾದವರಲ್ಲಿ ಸೇರಿದ್ದಾರೆ.
ಎಷ್ಟು ಮಂದಿಯನ್ನು ಕಸ್ಟಡಿಗೆ ಪಡೆಯಲಾಗಿದೆ ಎಂಬ ಬಗ್ಗೆ ಕೇಂದ್ರೀಕೃತ ಲೆಕ್ಕ ವಿಲ್ಲ ಎಂದು ಸರಕಾರದ ವಕ್ತಾರ ರೋಹಿತ್ ಕಾನ್ಸಾಲ್ ಹೇಳಿದ್ದಾರೆ. ಶ್ರೀನಗರವೊಂದರಲ್ಲೇ ದೇಹ ಪರಿಶೀಲನೆಯ ವೇಳೆ ಆರು ಸಾವಿರ ಮಂದಿಯನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಮೊದಲು ಇವರನ್ನು ಶ್ರೀನಗರದ ಸೆಂಟ್ರಲ್ ಜೈಲಿಗೆ ನಂತರ ಮಿಲಿಟರಿ ವಿಮಾನದಲ್ಲಿ ಅಜ್ಞಾತ ಕೇಂದ್ರಕ್ಕೆ ಸಾಗಿಸಲಾಯಿತು ಎಂದು ಅವರು ಹೇಳಿದರು. ಕಫ್ರ್ಯೂ ಇದ್ದಾಗ ಶ್ರೀನಗರದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.












