ಸನ್ಮಾರ್ಗ ವಾರ್ತೆ
ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ದೇವರಿಗೆ ಅವಹೇಳನ ಖಂಡಿಸಿ, ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ.
ಮಂಗಳೂರು ನಗರದ ಜಪ್ಪುವಿನಲ್ಲಿರುವ ಜೆರೋಸಾ ಶಾಲೆಯ 7ನೇ ತರಗತಿ ಶಿಕ್ಷಕಿಯಾಗಿರುವ ಪ್ರಭ ವಿರುದ್ಧ ಧರ್ಮನಿಂದನೆ ಆರೋಪ ಕೇಳಿ ಬಂದಿದ್ದು ಶಾಲೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜನರು ಜಮಾವನೆಗೊಂಡಿದ್ದರು. ಪೋಷಕರ ಜೊತೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಆಗಮಿಸಿದ್ದು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಶಾಲಾ ಗೇಟ್ ಮುಂಭಾಗ ಶಾಸಕ ಮತ್ತು ಪೋಷಕರನ್ನು ಪೊಲೀಸರು ತಡೆದಿದ್ದಾರೆ. ನೆರೆದ ಜನರು ಶಿಕ್ಷಕಿಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ
ಶಿಕ್ಷಕಿ ಪ್ರಭಾ ಅವರು ರಾಮಮಂದಿರ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಕುರಿತಂತೆ ಓರ್ವ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಧ್ವನಿ ಸುರುಳಿ ವ್ಯಾಪಕ ಹಂಚಿಕೆಯಾಗಿತ್ತು. ಆ ಬಳಿಕ ಸಂಘ ಪರಿವಾರ ಎಚ್ಚೆತ್ತುಕೊಂಡಿದ್ದು ಪ್ರತಿಭಟನೆ ನಡೆಸಿದೆ. ವರ್ಕ್ ಇನ್ ವರ್ಷಿಪ್ ಎಂಬ ವಿಷಯದಲ್ಲಿ ಪಾಠ ಮಾಡುತ್ತಿದ್ದಾಗ ಸಿಸ್ಟರ್ ಪ್ರಭ ಧರ್ಮ ನಿಂದೆಯ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ.