ಪುತ್ತೂರು ಎನ್ ಆರ್ ಐ ಉದ್ಯಮಿಗಳಿಂದ ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಸೌದಿಯಲ್ಲಿ ಸನ್ಮಾನ

0
145

ಸನ್ಮಾರ್ಗ ವಾರ್ತೆ

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಅಶೋಕ್ ರೈ ಅವರನ್ನು ತಾಲೂಕಿನ ಎನ್.ಆರ್.ಐ ಉಧ್ಯಮಿಗಳು ಸೌದಿಯ ಜುಬೈಲ್ ನಲ್ಲಿರುವ ಉದ್ಯಮಿ ತಾಹಿರ್ ಸಾಲ್ಮರ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿದರು.

ಪುತ್ತೂರು ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ಅವರು ತಾಲೂಕಿನ ಎನ್.ಆರ್.ಐ.ಗಳ ಪರವಾಗಿ ಶಾಸಕರನ್ನು ಗೌರವಿಸಿದರು.

ಪುತ್ತೂರು ತಾಲೂಕಿನ ಸೌಹಾರ್ದತೆ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ಶಾಸಕರೊಂದಿಗೆ ಕೈ ಜೋಡಿಸುವ ಭರವಸೆ ನೀಡಿದ ಎನ್.ಆರ್.ಐ.ಗಳು ತಾಲೂಕಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಿಸುವ ಬಗ್ಗೆ ಹಾಗೂ ಈಗಾಗಲೇ ಮಂಜೂರಾಗಿರುವ ಕ್ರೀಡಾಂಗಣದ ಅಭಿವೃದ್ಧಿಗೆ ಮುತುವರ್ಜಿ ವಹಿಸಿರುವ ಶಾಸಕ ಅಶೋಕ್ ರೈ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ನೆರವು ನೀಡುವಂತೆ, ಸ್ಕಾಲರ್ಶಿಪ್ ಅನುದಾನವನ್ನು ಹೆಚ್ಚಿಸುವಂತೆ ಹಾಗೂ ಸ್ಕಾಲರ್ಶಿಪ್ ಮೊತ್ತವನ್ನು ವಿಳಂಬ ಮಾಡದೇ ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು. ಈ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಸೌದಿಯಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಆಗಮಿಸಿದ್ದ ಶಾಸಕರನ್ನು ಅರಬ್ ರಾಷ್ಟ್ರದ ವಿವಿಧ ಭಾಗಗಳಲ್ಲಿ ಉದ್ಯಮ ಮತ್ತು ವ್ಯವಹಾರಗಳಲ್ಲಿ ತೊಡಗಿಸಿರುವ ಪುತ್ತೂರಿನ ಅನಿವಾಸಿಗಳು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಅವರೊಂದಿಗೆ ಹಲವು ಕ್ರಿಯಾಶೀಲ ವಿಷಯಗಳ ಕುರಿತು ಸಮಾಲೋಚಿಸಿದರು. ಈ ಸಂದರ್ಭ ಶಾಸಕರಾದ ಅಶೋಕ್ ರೈ ಅವರು ತಾಲೂಕಿನ ಪ್ರಗತಿಗೆ ಅನಿವಾಸಿಗಳ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭ ಶಾಸಕರ ಜೊತೆ ಇದ್ದ ವಕೀಲರಾದ ಪದ್ಮರಾಜ್ ಅವರನ್ನು ಸನ್ಮಾನಿಸಲಾಯಿತು. ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದ ಅನಿವಾಸಿಗಳ ಪೈಕಿ ಉದ್ಯಮಿ ಕೆ.ಐ.ಸಿ ಗಲ್ಫ್ ಕಮಿಟಿಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು, ಕೆ.ಐ.ಸಿ ಜುಬೈಲ್ ಅಧ್ಯಕ್ಷರಾದ ಉದ್ಯಮಿ ಫೈರೋಝ್ ಪರ್ಲಡ್ಕ, ಲತೀಫ್ ಮರಕ್ಕನಿ, ಇಸ್ಮಾಯಿಲ್ ಕೂರ್ನಡ್ಕ, ನಿಝಾಮ್ ಅರಂಡ, ಹಾರಿಸ್ ಅರಂಡ, ಆಸಿಫ್ ದರ್ಬೆ, ಫೈಝಲ್ ಉಪ್ಪಿನಂಗಡಿ, ಫಾರೂಕ್ ಪೋರ್ಟ್ ವೇ, ಸುಹೈಲ್ ಕೋಡಿಂಬಾಡಿ, ಮುಸ್ತಾಕ್ ಕೋಡಿಂಬಾಡಿ, ಅಕ್ರಮ್ ಶೆರೀಫ್ ನೆಕ್ಕಿಲಾಡಿ, ಆಸಿಫ್ ಬಪ್ಪಳಿಗೆ, ಜಮಾಲ್ ಅರಂಡ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here