‘ಗೆಟ್ ಔಟ್ ರವಿ’: ತಮಿಳುನಾಡಿನಲ್ಲಿ ರಾಜ್ಯಪಾಲರ ವಿರುದ್ಧ ವ್ಯಾಪಕ ಪ್ರತಿಭಟನೆ

0
273

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ನಡೆದ ನಾಟಕೀಯ ಘಟನೆಗಳ ಬಳಿಕ ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಪ್ರತಿಭಟನಾ ಕಾರ್ಯಕ್ರಮಗಳು ನಡೆಯುತ್ತಿವೆ. ‘ಗೆಟ್ ಔಟ್ ರವಿ’ ಎಂಬ ಬ್ಯಾನರ್, ಪೋಸ್ಟರ್‌ಗಳು ವಿವಿಧೆಡೆ ಕಾಣಿಸಿಕೊಂಡಿವೆ.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರು ಮಾಡಿದ ನೀತಿ ಘೋಷಣೆ ಭಾಷಣವು ಪ್ರತಿಭಟನೆಗೆ ಕಾರಣವಾಯಿತು. ರಾಜ್ಯಪಾಲರು ಹಲವು ವಾಕ್ಯಗಳನ್ನು ಕೈಬಿಟ್ಟು ರಾಜ್ಯ ಸರ್ಕಾರದ ನೀತಿ ಘೋಷಣೆ ದಾಖಲೆಯನ್ನು ಓದಿದರು. ವಿಧಾನಸಭೆ ದಾಖಲೆಯಲ್ಲಿ ಭಾಷಣದ ಪೂರ್ಣ ಸ್ವರೂಪ ಇರಬೇಕು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿರ್ಣಯವನ್ನು ಸಂಸತ್ತು ಅಂಗೀಕರಿಸುವುದರೊಂದಿಗೆ, ರಾಜ್ಯಪಾಲ ಆರ್.ಎನ್. ರವಿ ಕೆಳಗಿಳಿದು ಹೊರ ನಡೆದರು.

ಇದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಎರಡು ಪಕ್ಷಗಳ 65 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮರೀನ ಕಾಮರಾಜ್ ರಸ್ತೆಯ ಸರಕಾರಿ ಕಾಲೇಜಿನ ಪ್ರವೇಶ ದ್ವಾರದ ಮುಂದೆ ವಿದ್ಯಾರ್ಥಿಗಳು ಧರಣಿ ನಡೆಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಟೀಕೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಮುಖ್ಯಮಂತ್ರಿ ಡಿಎಂಕೆಯ ಹಿರಿಯ ನಾಯಕರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ನಡುವೆ ರಾಜ್ಯಪಾಲರು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅವರು ಕೂಡ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ವರದಿಯಾಗಿದೆ.