ಅಜಿತ್ ಡೋವಲ್‍ರ ಮನೆ ದಾಳಿಗೆ ಭಯೋತ್ಪಾದಕರಿಂದ ಸಂಚು: ಭದ್ರತೆ ಹೆಚ್ಚಳ

0
417

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಯೋತ್ಪಾದಕ ಬೆದರಿಕೆಯ ನಂತರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ಡೋವಲ್‍ರ ಮನೆ ಮತ್ತು ಕಚೇರಿಗೆ ಕೇಂದ್ರ ಸರಕಾರ ಭದ್ರತೆ ಹೆಚ್ಚಿಸಿದೆ. ಜೈಶೆ ಮುಹಮ್ಮದ್ ಭಯೋತ್ಪಾದಕರೆಂದು ಶಂಕಿಸಲಾದ ಮಾಲಿಕ್ ಎಂಬಾತನ ಬಂಧನದಲ್ಲಿ ಸಿಕ್ಕದ ಸುಳಿವಿನ ಆಧಾರದಲ್ಲಿ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಸುರಕ್ಷಾ ಏಜೆನ್ಸಿಗಳಿಗೆ ವಿವರ ನೀಡಲಾಗಿದೆ.

ಪಾಕಿಸ್ತಾನದ ಸೂಚನೆ ಮೇರೆಗೆ ಅಜಿತ್ ಡೋವಲ್‍ರನ್ನು ಗುರಿಯಾಗಿಟ್ಟು ಸರ್ದಾರ್ ಪಟೇಲ್ ಭವನ್ ಮತ್ತು ದಿಲ್ಲಿಯ ಉನ್ನತ ಕೇಂದ್ರಗಳಲ್ಲಿ ಗುಪ್ತಚಾರಿಕೆ ನಡೆಸಿದ್ದಾಗಿ ಬಂಧಿತ ವ್ಯಕ್ತಿ ಹೇಳಿದ್ದಾನೆ. 2016ರ ಉರಿ ದಾಳಿ ಮತ್ತು 2019ರ ಬಾಲಕೋಟೆ ವಾಯುದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಅಜಿತ್ ಡೋವಲ್‍ರ ಮೇಲೆ ಗುರಿಯಿಟ್ಟಿವೆ ಎನ್ನಲಾಗಿದೆ.

ಫೆಬ್ರುವರಿ ಆರಕ್ಕೆ ಮಾಲಿಕ್ ಬಂಧಿತನಾದ ಬೆನ್ನಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ತನಿಖಾಧಿಕಾರಿಗಳು ವಿಚಾರಾಣೆ ನಡೆಸಿದ್ದರು. ಶೋಪಿಯನ್‍ನ ಇಬ್ಬರು, ಹಿದಾಯತ್ತುಲ್ಲಾ ಮಾಲಿಕ್‍ನ ಪತ್ನಿ, ಚಂಡಿಗಢದ ಕಾಲೇಜು ವಿದ್ಯಾರ್ಥಿ,ಒಬ್ಬ ಬಿಹಾರಿ ವ್ಯಕ್ತಿಯ ವಿಚಾರಣೆ ಮಾಡಲಾಗಿತ್ತು. ಶೋಪಿಯಾನ್‍ನ ವ್ಯಕ್ತಿಯನ್ನು ಬಂಧಿಸಿ ಆಯುಧಗಳು, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಂದು ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಜೈಷೆ ಫ್ರಂಟ್ ಗ್ರೂಪ್ ಲಷ್ಕರೆ ಮುಸ್ತಫಾದ ಮುಖ್ಯಸ್ಥ ಮಾಲಿಕ್‍ನನ್ನು ಅನಂತ್ ನಾಗ್‍ನಲ್ಲಿ ಬಂಧಿಸಿದ ಬಳಿಕ ಗಂಗ್ಯಾಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.