ಪತ್ನಿಯ ಒಪ್ಪಿಗೆ ಇಲ್ಲದೆ ಗೃಹ ವಸ್ತು, ಆಭರಣಗಳನ್ನು ಬಳಸಲು ಪತಿಗೆ ಅಧಿಕಾರ ಇಲ್ಲ: ದೆಹಲಿ ಹೈಕೋರ್ಟ್

0
182

ಸನ್ಮಾರ್ಗ ವಾರ್ತೆ

ನವದೆಹಲಿ: ಪತ್ನಿಯ ಒಪ್ಪಿಗೆ ಇಲ್ಲದೇ ಅಥವಾ ಆಕೆಗೆ ಯಾವುದೇ ಮಾಹಿತಿ ನೀಡದೆ ಪತಿಯು ಮನೆಯಲ್ಲಿದ್ದ ಆಭರಣ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ತನ್ನ ಅನುಪಸ್ಥಿತಿಯಲ್ಲಿ ಪತಿ ಮನೆಗೆ ಬೀಗ ಹಾಕಿರುವುದಲ್ಲದೆ, ಮನೆಯಲ್ಲಿದ್ದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾನೆ ಎಂದು ಪತ್ನಿ ದಾಖಲಿಸಿರುವ ದೂರಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಪತಿ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿಯ ಬಂಧನ ಪೂರ್ವ ಜಾಮೀನಿನ ವಿಚಾರಣೆಯ ಸಂದರ್ಭದಲ್ಲಿ ಪತ್ನಿ ಸಲ್ಲಿಸಿದ ದೂರನ್ನು ನ್ಯಾಯಮೂರ್ತಿ ಅಮಿತ್‌ ಮಹಾಜನ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಮನೆಗೆ ಬೀಗ ಹಾಕಿ ತಾನು ಹೊರಗಿದ್ದಾಗ ಮನೆಯ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದರು.

“ಅರ್ಜಿದಾರರು ದೂರುದಾರರ ಪತಿಯಾದರೂ ಈ ರೀತಿ ಆಭರಣ, ಗೃಹೋಪಯೋಗಿ ವಸ್ತುಗಳ ಬಳಸಿಕೊಳ್ಳಲು ಕಾನೂನು ಅನುಮತಿಸುವುದಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

“ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನನ್ನು ಗುರಾಣಿಯಾಗಿ ಬಳಸಲು ಅನುಮತಿಸುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಮಾಡಿರುವ ಆರೋಪಗಳು ಕ್ಷುಲ್ಲಕ ಅಥವಾ ಕೇವಲ ಅರ್ಜಿದಾರರನ್ನು ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ಹೊಂದಿವೆ ಎಂದು ಕಂಡು ಬರುವುದಿಲ್ಲ” ಎಂದು ಆದೇಶದಲ್ಲಿ ಪೀಠ ಉಲ್ಲೇಖಿಸಿದೆ.