ಅಲಿಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಆರೋಪ ಹಿಂದೆಗೆತ

0
543

ಹೊಸದಿಲ್ಲಿ: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ರಿಪಬ್ಲಿಕ್ ಟಿವಿ ಚ್ಯಾನೆಲ್ ಪತ್ರಕರ್ತರನ್ನು ತಡೆದ ಘಟನೆಯಲ್ಲಿ 14 ವಿದ್ಯಾರ್ಥಿಗಳ ವಿರುದ್ಧ ಹೊರಿಸಿದ್ದ ದೇಶದ್ರೋಹ ಆರೋಪವನ್ನು ವಾಪಸು ಪಡೆಯಲಾಗಿದೆ. ಕ್ಯಾಂಪಸ್ಸಿನಲ್ಲಿ ಪಾಕ್ ಪರ ಮತ್ತು ಭಾರತ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಯುವಮೋರ್ಚ ಜಿಲ್ಲಾ ನಾಯಕ ಮುಖೇರ್ಶ ಲೋಧಿ ನೀಡಿದ ದೂರಿನಲ್ಲಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಕೇಸು ದಾಖಲಿಸಲಾಗಿತ್ತು. ಆದರೆ ಪುರಾವೆಗಳ ಅಭಾವದಲ್ಲಿ ಪೊಲೀಸರು ಆರೋಪ ಪಟ್ಟಿಯಿಂದ ದೇಶದ್ರೋಹ ಎಂಬ ಪದವನ್ನು ಹಿಂದೆಗೆದಿದ್ದಾರೆ.

ಫೆಬ್ರುವರಿ 12ಕ್ಕೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ವರದಿಗಾರಿಕೆಗೆ ಬಂದಿದ್ದ ರಿಪಬ್ಲಿಕ್ ಚ್ಯಾನೆಲ್ ವರದಿಗಾರರಿಗೆ ವಿದ್ಯಾರ್ಥಿಗಳು ಹಲ್ಲೆ ನಡೆಸಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ನೋಡಿದರೆ ಗುರುತಿಸಬಹುದಾದ ಹದಿನಾಲ್ಕು ಮಂದಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿತ್ತು. ದೇಶದ್ರೋಹ, ಹಲ್ಲೆ, ತಡೆಯೊಡ್ಡಿದ್ದು ಸಹಿತ ಎಂಟು ಆರೋಪಗಳನ್ನು ವಿದ್ಯಾರ್ಥಿಗಳ ವಿರುದ್ಧ ಹೊರಿಸಿ ಕೇಸು ದಾಖಲಿಸಿಕೊಳ್ಳಲಾಗಿತ್ತು.