ಸಂಶಯಗಳು ಮತ್ತು ಅಪರಿಚಿತರಿಂದ ಒದಗುವ ಸಹಾಯ ನಮ್ಮ ಕಣ್ಣುಗಳನ್ನು ತೇವಗೊಳಿಸುತ್ತವೆ

0
1701

ಉಮ್ಮು ಫಾತೀಮ

ಅಂದು ಅಗತ್ಯದ ಕೆಲಸದ ಮೇಲೆ ಮಗಳ ಜತೆ ಕ್ವೀನ್ಸ್ ರೋಡಿಗೆ ಹೋಗಲಿಕ್ಕಿದ್ದ ಕಾರಣ ಗಡಿಬಿಡಿಯಲ್ಲಿ ಹೊರಡುತ್ತಿದ್ದ ನಾನು ಕ್ಯಾಬ್ ಕರೆಯಲು ಮೊಬೈಲ್ ಕೈಗೆತ್ತಿಕೊಂಡಾಗಲೇ..ಮೊಬೈಲ್ನನಲ್ಲಿ ನೆಟ್ ಪ್ಯಾಕಿನ ಅವದಿ ಮುಗಿದದ್ದು ಗಮನಕ್ಕೆ ಬಂದದ್ದು. ಮೈನ್ ಬ್ಯಾಲೆನ್ಸ್ ಕೂಡ ಝೀರೊ ತೋರಿಸುತ್ತಿದ್ದ ಕಾರಣ ಒಮ್ಮೆಲೆ ನಂಗೆ ತಲೆ ಬಿಸಿಯಾಯಿತು.

ಯಾ ಅಲ್ಲಾಹ್ ! ತೀರಾ ಅವಶ್ಯ ಇರುವ ಈ ಸಮಯದಲ್ಲೇ ಹೀಗಾಗಿದೆಯಲ್ಲಾ.. ಹೋಗಿ ಸರಿಯಾಗಿ ಒಂಬತ್ತು ಗಂಟೆಗೆ ನಾವು ಅಲ್ಲಿರಬೇಕು.

ಮಗಳ ವಿದ್ಯಾಬ್ಯಾಸದ ವಿಷಯವಾದ ಕಾರಣ ಕಾಲೇಜಿನವರು ತಿಳಿಸಿದ ‘ದಿನ, ಸಮಯ’ಕ್ಕೆ ಸರಿಯಾಗಿ ಹೋಗಿ ತಲುಪಲೇ ಬೇಕಿತ್ತು.
ಇದೀಗ ಮೊಬೈಲ್’ನ ಬ್ಯಾಲೆನ್ಸ್ ಕೂಡ ಮುಗಿದಿದೆಯಲ್ಲಾ.. ಎಂದು ಕಂಗಾಲಾಗಿದ್ದ ನನಗೆ ಅದೇ ಸಮಯಕ್ಕೆ ಸರಿಯಾಗಿ ಬನಶಂಕರಿಯಲ್ಲಿದ್ದ ಮಗನ ಕರೆ ಬಂತು.

ಮಗನಿಗೆ ವಿಷಯ ತಿಳಿಸುತ್ತಲೇ ಅವನು ‘ಕ್ಯಾಬ್ ನಾನು ಬುಕ್ ಮಾಡ್ತೇನೆಂದ’.

ಹಾಗೆ ಗಡಿಬಿಡಿಯಲ್ಲಿ ಹೊರಟ ಕಾರಣ ಹ್ಯಾಂಡ್ ಬ್ಯಾಗಿನಿಂದ ‘ಏಟಿಯಂ ಕಾರ್ಡ್’ ತೆಗೆದು ಕೈಯ್ಯಲ್ಲಿ ಹಿಡಿದುಕೊಂಡು ಕ್ಯಾಬ್ ಡ್ರೈವರ್’ಗೆ ಹೇಳಿದೆ.

ಹೋಗ್ತಾ ಹೋಗ್ತಾ ಹಾಗೇ ಸ್ವಲ್ಪ ‘ಏಟಿಯಂ’ ಬಳಿ ನಿಲ್ಲಿಸಪ್ಪ.. ಎಂದು.. ಆಯ್ತೆಂದ ಅವನು ಆಮೇಲೆ ಮೊಬೈಲ್ ಕರೆ’ಗಳಲ್ಲಿ ಬಿಝಿಯಾಗಿ ಬಿಟ್ಟ.

ಅದಾಗಿ ನೇರ ಹೋದ ಅವನು ಬ್ರೇಕ್ ಮೇಲೆ ಕಾಲಿಟ್ಟದ್ದೇ ನಾವು ಹೋಗಿ ತಲುಪಬೇಕಾದ ವಿಳಾಸದಲ್ಲಿ.

‘ಏನಪ್ಪಾ ನಿನಗೆ ದುಡ್ಡು ಕೊಡೋದು ಬೇಡವೇ..? ‘ಏಟಿಯಂ’ ಬಳಿ ನಿಲ್ಲಿಸದೇ ಸೀದಾ ಬಂದ್ಬಿಟ್ಟೆಯಲ್ಲಾ.? ಎಂದು ನಾನು ಕೇಳಿದಾಗ
ಓಹ್ ! ಸ್ವಾರಿ ಮ್ಯಾಡಮ್ ಮರೆತು ಬಿಟ್ಟೆ ಎನ್ನುತ್ತಾ.. ಕಾರಿನಿಂದ ತಲೆ ಹೊರಗೆ ಚಾಚಿ ಕಟ್ಟಡಗಳ ಆಚೀಚೇ ಹುಡುಕತೊಡಗಿದ ಎಲ್ಲಾದರು ‘ಏಟಿಯಂ’ ಕಾಣ ಸಿಗುತ್ತದಾ ಎಂದು.. ಆಗ ನಾನು ಮತ್ತೆ ಕೇಳಿದೆ. ನಿನ್ನ ಮೊಬೈಲ್ನಲ್ಲಿ ‘ಗೂಗಲ್ ಪೇ’ ಏನಾದರು ಇದೆಯೇನಪ್ಪಾ..?’ಹಾಂ.. ಇದೆ ಮ್ಯಾಡಮ್’ ಎನ್ನುತ್ತಾ ನಂಬರ್ ಕೊಟ್ಟ ಅವನಿಗೆ ಹಣ ಟ್ರಾನ್ಸ್ಫರ್ ಮಾಡಿ ಕೊಟ್ಟು ಕಾರಿನಿಂದ ಇಳಿದು ಮಗಳ ಜತೆ ಆ ಕಾಲೇಜಿನೊಳಗೆ ಪ್ರವೇಶಿಸಿದೆ.

ಆ ಮೇಲೆ ಅಲ್ಲಿ ಮೀಟಿಂಗ್ ಮುಗಿಸಿಕೊಂಡು ಹೊರ ಬಂದಾಗ ನನಗೆ ಸ್ವಲ್ಪ ಉದ್ದಕ್ಕೆ ನಡೆಯುವಾ ಎನಿಸಿತು.

ಸಣ್ಣಂದಿನಿಂದಲೇ ನಾನು ನಮ್ಮ ಮನೆಯ ಅಂಗಳದಲ್ಲೇ ಸುತ್ತ ಆಚಿಂದೀಚೆ ಈಚಿಂದಾಚೆ ನಡೆಯುತ್ತಾ ಇರುವುದು ನನ್ನ ತಂದೆಯವರನ್ನು ನೋಡಿ ನೋಡಿ ಮೈಗೂಡಿಸಿಕೊಂಡು ಬಂದಿದ್ದು.ಅದು ನನಗೆ ದೊಡ್ಡ ಅಭ್ಯಾಸವೇ ಆಗಿತ್ತು.

ಪುತ್ತೂರಿನ ಮನೆಯಲ್ಲಿರುವಾಗ ನಡೆಯಲು ಬೇಕಾದಷ್ಟು ಅಲ್ಲಿ ಜಾಗವಿತ್ತು.. ಮನೆಯ ಕಂಪೌಂಡಿನ ಮುಂದುಗಡೆಯೇ ದೊಡ್ಡಪ್ಪನವರ ದೊಡ್ಡ ದೊಡ್ಡ ಎರಡು ತೋಟಗಳಿದ್ದು ಅದರ ಬಲಪಕ್ಕದಲ್ಲಿ ಗೌಡರ ತೋಟವೂ.. ಎಡಪಕ್ಕದಲ್ಲಿ ನನ್ನ ಪ್ರೀತಿಯ ಬಾಯಮ್ಮನವರ ತೋಟವೂ ಇದ್ದು.. ಅಲ್ಲಿನ ವಾತಾವರಣವೂ ತಂಪು ಗಾಳಿಯೊಂದಿಗೆ ಹಕ್ಕಿಗಳ ಚಿಲಿಪಿಲಿ ನಾದವು ಸದಾ ಕೇಳಿಸುತ್ತಿದ್ದು.. ಅದನ್ನು ಆಲಿಸುತ್ತಾ ಅಂಗಳದಲ್ಲಿ ನಡೆಯುವುದೆಂದರೇ ನನಗೆ ಮೈಮನಕ್ಕೆ ಉಲ್ಲಾಸವೂ.. ಬಲು ಸಂತೋಷವೂ.. ಉಂಟಾಗುತ್ತಿತ್ತು. ಈಗ ಬೆಂಗಳೂರಿಗೆ ಬಂದು ಈ ಅಪಾರ್ಟ್ಮೆಂಟಿನ ಮೂರನೇ ಮಹಡಿಯ ಫ್ಲಾಟಿನಲ್ಲಿ ಇರುವ ನನಗೆ ನಡೆಯಲೆಂದು ಇಲ್ಲಿಂದ ಕೆಳಗಡೆ ಹೋಗುವುದೆಂದರೆ ಉದಾಸೀನವೇ ಅನಿಸುವುದು.

ಹಾಗೆ.. ಇದೀಗ ಕ್ವೀನ್ಸ್ ರೋಡಿಗೆ ಬಂದಿರುವ ನನಗೆ ಇಲ್ಲಿಯಾದರು ಸ್ವಲ್ಪ ಉದ್ದಕ್ಕೆ ನಡೆಯೋಣ ಅನ್ನುವ ಬಯಕೆ ಉಕ್ಕಿತು..

ಪಕ್ಕದ ರೋಡಿನ ಬದಿಯಿಂದಲೇ ನಡೆಯುತ್ತಾ ಮಗಳ ಕಾಲೇಜಿನತ್ತ ಹೆಜ್ಜೆ ಇಟ್ಟೆವು ವಸಂತ ನಗರದ ಪ್ಯಾಲೇಸ್ ರೋಡಿನಲ್ಲಿರುವ ಸುಂದರವಾದ ‘ಮೌಂಟ್ ಕಾರ್ಮೆಲ್ ಪಿ.ಯು ಕಾಲೇಜಿನ’ ಕ್ಯಾಂಪಸ್ಸಿಗೆ ಬಂದ ನಾವು ಇಲ್ಲಿ ಒಂದು ಸುತ್ತು ಹೊಡೆದಾಗ ನಡೆದದ್ದು ಸಾಕೆನಿಸಿತು.

ಬಹಳ ದಿನ ಬಿಟ್ಟು ಇಷ್ಟೊಂದು ನಡೆಯುತ್ತಿರುವುದು ಕಾರಣವೊ.. ಅಥವಾ ಅಲ್ಪ ಸ್ವಲ್ಪ ಜ್ವರ ಇದ್ದ ಕಾರಣವೋ ಸುಸ್ತಾಗಿ ಮನೆಗೆ ಹಿಂತಿರುಗಲು ಹಾಗೆಯೆ ರಸ್ತೆಯ ಬದಿಗೆ ಬಂದು ಅಟೋಗಾಗಿ ಏದುಸಿರು ಬಿಡುತ್ತಾ ಕಾದು ನಿಂತೆವು..

ಈ ಬೆಂಗಳೂರಿನಲ್ಲಿ ಎಷ್ಟೇ ಅಟೋಗಳಿರಲಿ ನಾವು ಎಲ್ಲಿದ್ದೇವೆ.. ಅಲ್ಲಿಂದ ಯಾವ ಕಡೆಗೆ ಹೋಗಬೇಕು.. ‘ಆ ಕಡೆಗೆ ಅಟೋ ಹೋಗುವುದಿಲ್ಲ’ ಎಂದು ಹೇಳುವುದು ಇಲ್ಲಿನ ಅಟೋದವರ ಒಂದು ವಿಶೇಷ ಸ್ವಭಾವವಾಗಿದೆ. ಹಾಗೆಯೇ ಕೆಲವರು ‘ಮ್ಯಾಡಮ್ ಬೇಕಾದರೆ ಬರ್ತೇನೆ, ಮೀಟರ್ ಮೇಲೆ ಒಂದೈವತ್ತು ಜಾಸ್ತಿ ಕೊಡಿ, ಅಥವಾ ಸ್ವಲ್ಪ ಸೇರಿಸಿ ಕೊಡಿ’ ಅನ್ನುವುದೂ ಇದೆ. ಮಗಳೋ ತುಂಬಾ ಮೆತ್ತಗಿನ ಸ್ವಭಾವಿ ‘ಯಾಕೆ ಹೆಚ್ಚು ಕೊಡಬೇಕು’ ಎಂದು ಏಮಾರಿಸಿ ಕೇಳುವವಳೂ ಅಲ್ಲ. ಅದಾಗ ಅಟೋ’ವೊಂದು ಬಹಾಳ ನಿಧಾನಕ್ಕೆ ಬರುತ್ತಿತ್ತು.’ಅಂಕಲ್’ ಎಂದು ಕರೆದು ಮಗಳು ನಿಲ್ಲಲು ಕೈ ತೋರಿಸಿಯೇ ಬಿಟ್ಟಳು. ಪಕ್ಕದಲ್ಲೇ ಬಂದು ನಿಂತ ಅಟೋದವರ ಬಳಿ ಮಗಳು ‘ಆರ್.ಟಿ. ನಗರಕ್ಕೆ ಅಂಕಲ್’ ಅಂದಾಗ ನಮಗೆ ಕೂರಲು ಕೈ ಸನ್ನೆ ಮಾಡಿದ ಅವರನ್ನು ನಾನು ತಲೆ ಎತ್ತಿ ನೋಡಿದೆ. ತೀರ ಆತ್ಮೀಯರನ್ನಲ್ಲದೇ.. ಬೇರೆಯವರ ಮುಖ ನೋಡುವ ಅಭ್ಯಾಸವಿಲ್ಲದ ನಾನು. ಇವರು ಕೈ ಸನ್ನೆಯಲ್ಲೇ ಯಾಕೆ ಕೂರಲು ಇಷಾರ ಮಾಡುತ್ತಿರುವರೆಂದು ತಟ್ಟನೆ ಅವರ ಮುಖ ನೋಡಿದೆ. ನೋಡುತ್ತಲೇ ಗಾಬಾರಿಗೊಂಡೆ..

60ವಯಸ್ಸು ದಾಟಿದ ಅಂದಾಜಿನ ದಪ್ಪಗಿನ ದೇಹದ ಅವರ ದೊಡ್ಡ ಮುಖದಲ್ಲಿ ಅಷ್ಟಷ್ಟು ದೊಡ್ಡ ದೊಡ್ಡ ಕಣ್ಣುಗಳು ತೀರ ಕೆಂಪಡರಿದ್ದು ನೋಡಲೇ ಭಯವೆನಿಸುತ್ತಿತ್ತು. ಇದೀಗ ಏನು ಮಾಡಲೀ ಕ್ಷಣಕಾಲ ಗೊಂದಲದ ಯೋಚನೆಯಲ್ಲಿ ಬಿದ್ದ ನಾನು ಆಗಲೇ..ಅಟೋ ಹತ್ತಿ ಕುಳಿತು ‘ಬೇಗ ಬನ್ನಿ’ ಎಂದು ಮಗಳು ನನ್ನನ್ನು ಕರೆಯುತ್ತಿದ್ದದ್ದನ್ನು ನೋಡಿ ಮನದಲ್ಲೇ ‘ತವಕ್ಕುಲು’ ಅನ್ನುತ್ತಾ ಅಲ್ಲಾಹುವಿನ ಮೇಲೆ ಬರವಸೆ ಇಡುತ್ತಾ ನಾನೂ ಅಟೋ ಹತ್ತಿದೆ.

ಮಗಳು ಹೇಳಿದಳು ‘ಅಂಕಲ್ ‘ಏಟಿಯಂ’ ಕಡೆ ಸ್ವಲ್ಪ ನಿಲ್ಲಿಸಿ..’
ಆಗಲೂ ಅವರು ‘ಆಗಲೀ’ ಎಂಬಂತೆ ತಲೆ ಅಲ್ಲಾಡಿಸಿದರಷ್ಟೇ.
ನಾನು ಮೆಲ್ಲಗೆ ಮಗಳ ಕಿವಿಯಲ್ಲುಲಿದೆ ‘ಯಾವತ್ತು ಸರಿಯಾಗಿ ನೋಡಿ ಅಟೋ ನಿಲ್ಲಿಸೋದೂ.. ಅಟೋ ಹತ್ತೋದು ಮಾಡ್ಬೇಕು.
ಅವರ ಕಣ್ಣುಗಳು ತೀರ ಕೆಂಪಗಿದೆ.. ಸರಿಯಾಗಿ ಅಟೋ ಓಡಿಸ್ತಾರೋ ಇಲ್ಲವೋ..’ ನನ್ನ ಮಾತಿಗೆ ಮಗಳು ಏನೂ ಮರುನುಡಿಯದೆ ಮೌನವಾಗಿದ್ದಳು. ಅಟೋ ಮುಂದಕ್ಕೆ ಸಾಗುತ್ತಲೇ ಇತ್ತು..

ಮಗಳು ನಿತ್ಯ ಕಾಲೇಜಿಗೆ ಹೋಗಿ ಬರುವ ಚಿರಪರಿಚಿತ ರಸ್ತೆಯಾದ ಕಾರಣ ರಸ್ತೆಯತ್ತ ದೃಷ್ಟಿನೆಟ್ಟು ಆರಾಮವಾಗಿ ಕುಳಿತಿದ್ದಳು. ಕೆಲವು ಕಡೆ ‘ಏಟಿಯಂ’ ಕಂಡರೂ ನಿಲ್ಲಿಸದೆ ದಾಟಿ ಅಟೋ ಮುಂದಕ್ಕೆ ಹೋಗುತ್ತಿರಲು ನಾನು ನೆನಪಿಸಿದೆ..ನಮಗೆ ಸ್ವಲ್ಪ ಏಟಿಯಂ’ಗೆ ಹೋಗಲಿಕ್ಕಿದೆ. ಈಗ ಡ್ರೈವರ್ ಮೌನಮುರಿದು ಉತ್ತರಿಸಿದರು ‘ಜೀ.. ಆರ್.ಟಿ ನಗರ್ ಮೇ ಹಿ ಹೈನಾ.. ವಹಾಂ ಕೊ ಹೀ ಜಾಯೇಂಗೇ..’ ಸರಿ, ಎಂದೆ ನಾನು.

ಅದಾಗಿ ಮುಂದೆ ಎಷ್ಟು ಕಡೆಯೆಲ್ಲಾ ‘ಏಟಿಯಂ’ನಲ್ಲಿ ನಿಲ್ಲಿಸಿದರು ಎಂದಿಲ್ಲ.. ಜನರ ಕ್ಯೂ.. ಅಥವಾ ‘ಇಲ್ಲಿ ಕ್ಯಾಶ್ ಇಲ್ಲ’ ಅನ್ನೋ ಬರಹ.. ಕೆಲವೆಡೆ ಎರಡು ಸಾವಿರದ ನೋಟು ಮಾತ್ರ ತೆಗೆಯಬೇಕಂತೆ ಚಿಲ್ಲರೆಯಿಲ್ಲಂತೆ ಗೊಣಗುತ್ತಾ ಹೊರಬರುತ್ತಿರುವ ಜನರು.ಅದೂ ತುಂಬಾ ಹೊತ್ತು ಕ್ಯೂನಲ್ಲಿ ನಿಂತೂ ನಿಂತೂ ನಿರಾಶಳಾಗಿ ಮರಳುತ್ತಿದ್ದಳು ಮಗಳು.

ನನ್ನ ಮನದಲ್ಲಿ ಡ್ರೈವರ್ ಬಗ್ಗೆ  ಆ ಭಯವಿದ್ದದ್ದು ನಾನು ಆ ತರ ಯೋಚಿಸಿದ್ದೂ ಕಾರಣವೇ ಅವರು ಅಷ್ಟೂ ನಿಧಾನಕ್ಕೆ ಅಟೋ ಬಿಡುತ್ತಾ ಬರುತ್ತಿದ್ದುದು.. ಅವರ ಕಣ್ಣುಗಳು ಅಷ್ಟೂ ಕೆಂಪಡರಿದ್ದೂ.. ನಾವು ಕೇಳಿದ್ದಕ್ಕೆಲ್ಲಾ ತಲೆ ಕೈ ಆಡಿಸಿ ಅವರು ಉತ್ತರಿಸುತ್ತಿದ್ದದ್ದೂ ಆಗಿತ್ತು.ಅಟೋದಲ್ಲಿ ನಾನು, ಮಗಳು ಇಬ್ಬರೇ ಬೇರೆ.ಎಷ್ಟಾದರೂ ನಮ್ಮ ಜಾಗರೂಕತೆಯಲ್ಲಿ ನಾವಿರಬೇಕಲ್ಲವೇ..? ಆದರೇ..ಈ ಡ್ರೈವರ್ ಬಗೆಗಿನ ನನ್ನ ಈ ಆಲೋಚನೆ, ಭಯಕ್ಕೆ.. ನನಗೇ ನಾಚಿಕೆ ಎನಿಸಿದ್ದು ಇಲ್ಲಿ..

ಮಗಳು ಒಂದು ‘ಏಟಿಯಂ’ಗಾಗಿ ಕಟ್ಟಡವೊಂದರ ಮಹಡಿ ಮೇಲೆ ಹತ್ತಿ ಇಲ್ಲಿಯೂ ಹಣವಿಲ್ಲ ಎಂದು ಅಲ್ಲಿಂದಲೇ ಕೈಯಾಡಿಸುತ್ತಾ ಇಳಿದು ಬರುತ್ತಿರ ಬೇಕಾದರೇ.. ಅದನ್ನು ನೋಡಿದ ಈ ಡ್ರೈವರ್ ಅಟೋದಿಂದ ಇಳಿದು ಸ್ವಲ್ಪ ಮುಂದಕ್ಕೆ ನಡಕ್ಕೊಂಡು ಹೋಗಿ.. ಹುಡುಕಿ ಕುಶಿಯಿಂದಲೇ ಬಂದು ಅಟೋದಲ್ಲಿ ಕೂರುತ್ತಾ.. ಹೇಳಿದರು ‘ಉದರ್ ಏಕ್ ಏಟಿಯಂ ಹೇ.. ವಹಾಂ ಕೊ ಜಾಯೇಂಗೆ..’ಇದೀಗ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಇದ್ದ ಭಯ ಕರಗತೊಡಗಿತು.

ಮುಂದಕ್ಕೆ ಹೋಗಿ ಅಟೋವನ್ನು ‘ಏಟಿಯಂ’ ಒಂದರ ಪಕ್ಕದಲ್ಲೇ..ನಿಲ್ಲಿಸಿದರು. ಮಗಳು ಇಳಿದು ಹೋಗಿ ಅಲ್ಲಿ ಒಳಗೊಬ್ಬರು ಇರುವುದನ್ನು ಗಮನಿಸಿ ಹೊರಗೆ ನಿಂತಳು. ಪುಣ್ಯಕ್ಕೆ ಹೊರಗೆ ಕ್ಯೂ ಇರಲಿಲ್ಲ. ನನಗೆ ಜ್ವರದ ತೀವ್ರತೆ ಏರುತ್ತಿತ್ತು.. ಅಟೋದ ಹೊರಗೆ ತಲೆ ಹಾಕಿ ನಾನು ಮಗಳನ್ನು ಗಮನಿಸುತ್ತಾ ಅಟೋದಲ್ಲೆ ಕುಳಿತ್ತಿದ್ದೆ.’ಏಟಿಯಂ’ನ ಬೂತಿನೊಳಗಡೆ ಇದ್ದ ವ್ಯಕ್ತಿ ಬೇರೆ ಬೇರೆ ಕಾರ್ಡುಗಳಿಂದ ನಿಧಾನವಾಗಿ ಹಣ ತೆಗೆಯುತ್ತಾ ನಿಂತಿದ್ದರು.

ಅದಾಗ ತಟ್ಟನೇ ಎಲ್ಲಿಂದಲೊ ನಡೆಯುತ್ತಿರುವನೊ ನಾಟ್ಯಮಾಡುತ್ತಿರುವನೊ ಎಂಬಂತೆ ಬಂದ ಯುವಕನೊಬ್ಬ’ಏಟಿಯಂ ಬೂತಿ’ನ ಹತ್ರ ಬಂದು ಒಳ ನುಗ್ಗಲು ತಯಾರಾದಂತೆ ನಿಂತ. ಜತೆಗೆ ಅವನು ನನ್ನ ಮಗಳ ಕಡೆ ನೋಡಲು.. ಅವನ ಆ ವಿಚಿತ್ರ ರೀತಿ ಕಂಡ ಡ್ರೈವರ್ ತಕ್ಷಣ ಅಟೋದಿಂದ ಹಾರಿದರೇ ಎನ್ನುವಂತೆ ಅಲ್ಲಿ ಹೋಗಿ ಮಗಳ ಮತ್ತು ಆ ಯುವಕನ ಮಧ್ಯೆ ನಿಂತು ಜೋರಾಗಿ ಒಳಗಿದ್ದವರಿಗೆ ‘ಆಗಿಲ್ವಾ ಇನ್ನೂವೇ.?’ ಎಂದು ಕೇಳುತ್ತಾ..ಹಾಗೆಯೇ ನನ್ನ ಮಗಳ ಕಡೆಗೆ ತಿರುಗಿ ಸ್ವಂತ ಮಗಳಿಗೆ ಹೇಳುವಂತೆ ಆದರದಿಂದ ಹೇಳಿದರು..’ಬೇಟಿ ತೈರೊ ವೋ ಅಬಿ ಬಾಹರ್ ಆಯೇಂಗೆ..’ ಮತ್ತೆ ಆ ಯುವಕನ ಕಡೆಗೂಮ್ಮೆ ತಿರುಗಿ ಕಣ್ಣಗಲಿಸಿ  ಅವನನ್ನು ಮೇಲಿಂದ ಕೆಳವರೇಗೂ ತೀಕ್ಷ್ಣವಾಗಿ ನೋಡಿದರು..ಯುವಕ ಪೆಚ್ಚು ಮೋರೆ ಹಾಕಿ ಅಲ್ಲೆ ಬದಿಗೆ ಸರಿದು ನಿಂತ.

ನಂತರ ಬೂತಿನ ಒಳಗಿದ್ದವರು ಹೊರಬಂದರು..ನನ್ನ ಮಗಳು ‘ಏಟಿಯಂ’ನಿಂದ ಹಣ ತೆಗೆದು ಬರುವ ತನಕವೂ ಅಲ್ಲೆ ರಕ್ಷಕನಂತೆ ಕಾದಿದ್ದ ಡ್ರೈವರ್ ಮಗಳು ಅಟೋದ ಬಳಿ ಬರುವಾಗ ಅವಳ ಹಿಂದೆಯೇ ನಿಧಾನವಾಗಿ ಬಂದ ಅವರನ್ನು ನೋಡಿದ ನನ್ನ ಮನದಲ್ಲಿ ತೀರದ ಸಂಕಟವುಂಟಾಗಿ ನನ್ನ ಕಣ್ಣಾಲಿಗಳು ತುಂಬಿ ಬಂದವು.ಮೂಕಳಂತೆ ತೀರ ಮೌನಿಯಾಗಿ ಕುಳಿತುಬಿಟ್ಟೆ
ಇಂತಹವರನ್ನು ಸಂಶಯಿಸಿದೆನಲ್ಲಾ..ನನ್ನ ಹುಚ್ಚು ಮನಸ್ಸಿನ ಸಂಶಯದ ಬಗ್ಗೆ ಬಹಳ ಬೇಸರಗೊಂಡು ಮನದಲ್ಲೆ ಅಲ್ಲಾಹುವಿನಲ್ಲಿ ಕ್ಷಮೆಯಾಚಿಸುತ್ತಾ ಅವರಿಗಾಗಿಯೂ ಅವರ ಕುಟುಂಬಕ್ಕಾಗಿ ದುವಾ ಬೇಡುತ್ತಾ ಕುಳಿತೆ.

ಅಟೋ ಮುಂದಕ್ಕೆ ಸಾಗುತ್ತಿತ್ತು ‘ಅಂಕಲ್ ರೈಟ್’ಗೆ, ಅಂಕಲ್ ಲೆಫ್ಟ್’ಗೆ’ ಮಗಳು ನಾವಿರುವ ಪ್ಲಾಟಿನತ್ತ ದಾರಿ ತಿಳಿಸುತ್ತಾ ಇದ್ದಳು.
ಈ ಏಟಿಯಂ’ನ ಕಾಯುವಿಕೆಯಿಂದಾಗಿ ಹೊತ್ತೂ ಬಹಳವಾಗಿತ್ತು.
ಅಪಾರ್ಟ್ಮೆಂಟ್ ತಲುಪಿ ಅಟೋದಿಂದ ಇಳಿದು ಹೇಳಿದೆ.. ಮಾಫ್ ಕೀಜಿಯೆ ಭಯ್ಯಾ.. ಹಂಮ್ ಸೆ ಆಪ್ಕೊ ಬಹುತ್ ತಕ್ಲೀಫ್ ಹೋಗಯಾ ಹೈನಾ.. ಹಣವನ್ನು ಅವರ ಕೈಗಿತ್ತು ಶುಕ್ರಿಯಾ ಅಂದೆ.

‘ತಕ್ಲೀಫ್ ಕುಚ್ ನಹೀ ಹೇ..’ ಎನ್ನುತ್ತಾ ಚಿಲ್ಲರೆ ನೀಡಲು ಅವರು ಹಣ ಎಣಿಸುತ್ತಲೇ.. ಬೇಡ ಅದಿರಲಿ ಎಂದ ನಾನು ಅಲ್ಲಾಹ್ ಹಾಫಿಝ್ ಎನ್ನುತ್ತಾ..

ನಾವು ನಮ್ಮ ಫ್ಲಾಟಿನ ಗೇಟಿನೊಳಗಡೆ ಬಂದೆವು.. ನನ್ನ ಜ್ವರ ತೀರ ಜೋರಾಗಿದ್ದದ್ದನ್ನು ಗಮನಿಸಿ ಮಗಳೂ ನನ್ನ ಕೈಹಿಡಿದು ನಿಧಾನಕ್ಕೆ ಹೆಜ್ಜೆಯಿಡುತ್ತಿದ್ದಳು.

ಮನೆಯೊಳಗೆ ಬಂದ ನಾನು ಮಗಳ ಬಳಿ ಕೇಳಿದೆ
ನೀನು ಕೊನೇಯ ‘ಏಟಿಯಂ’ ಬಳಿ ನಿಂತಾಗ.. ಡ್ರೈವರ್ ತಕ್ಷಣ ದಾಪುಗಾಲು ಹಾಕುತ್ತಾ ಬಂದು ನಿನ್ನ ಬಳಿ ನಿಂತದ್ಯಾಕೆ..?? ಮಗಳೆಂದಳು ‘ಹೌದು ! ಅದು ಆ ಒಬ್ಬ ಆಕಡೆ ಗಂಡಸರು ಕ್ಯೂ ನಿಲ್ಲುವ ಬದಿಗೆ ಬಂದು ನಿಂತವನು ಒಂಥರಾ ಇದ್ದ.. ನನಗಿಂತ ಮೊದಲು ಒಳ ಹೋಗಲು ರೆಡಿಯಾಗಿ ನುಗ್ಗುವ ಹಾಗೆ ನಿಂತಿದ್ದ.. ಅವನನ್ನು ನೋಡಿ ‘ಡ್ರೈವರ್ ಅಂಕಲ್’ ಬೇಗ ಬಂದು ಮಧ್ಯಕ್ಕೆ ನಿಂತರು..

ಅಬ್ಬಾ.. ಅದಾಗ ನನಗೆ ನೆಮ್ಮದಿ ಎನಿಸಿತು…ಮಗಳ ನುಡಿ ಕೇಳುತ್ತಾ ಹೌದೆಂದೆ ನಾನು.

ನಿಜ ! ಮನುಷ್ಯನ ಬಾಹ್ಯ ರೂಪ.. ಅಥವಾ ಉಡುಪು ನೋಡಿ ನಾವು ಅವರಿಗೆ ಬೆಲೆ ಕಟ್ಟಲೇ ಬಾರದು. ಇಂದು ಎಷ್ಟೋ ಕಡೆ ರಕ್ಷಣೆ ನೀಡಬೇಕಾದವರೇ ರಾಕ್ಷಕರಾಗುತಿದ್ರೆ.. ಇನ್ನೊಂದು ಕಡೆ ಈ ತರ ಇನ್ಯಾರೋ ಒಬ್ಬರು ಅಪರಿಚಿತರು ‘ಕುಟುಂಬ ಪ್ರೇಮ’ ಅರಿತವರು ನಮಗೆ ಎಲ್ಲಿಂದಲೋ ರಕ್ಷಕರಾಗಿ ಬರುತ್ತಾರೆ. ಅಪರಿಚಿತರೊಂದಿಗೆ ಎಚ್ಚರದಿಂದಿರಲೇ ಬೇಕು ನಾವು.. ಆದರೆ ಈ ತರ ಸಂಶಯಪಡುವುದೂ ಕೂಡ ಕೆಲವೊಮ್ಮೆ ನಮ್ಮನ್ನೆ ನಾಚಿಕೆಗೀಡು ಮಾಡಿ ತೀರದ ನೋವೂ ಕೊಡುತ್ತದೆ.

ಈಗಿನ ಕಾಲವೂ ಹಾಗೆಯೇ ಎಲ್ಲಾರನ್ನೂ ನಂಬುವ ಹಾಗಿಲ್ಲಾ.. ಅದರಲ್ಲೂ ಅಪರಿಚಿತರನ್ನು ತೀರ ಸಂಶಯದಲ್ಲಿಯೇ ನೋಡಬೇಕಾಗಿ ಬಂದಿದೆ ಅಷ್ಟೂ ಅನಾಹುತಗಳು ದಿನನಿತ್ಯ ನಡೆಯುತ್ತಿರುತ್ತದೆ ಈಗ.

ಸೃಷ್ಟಿಕರ್ತನ ಮೇಲೆ ನಾವು ತುಂಬು ಭರವಸೆಯನ್ನು ಇಟ್ಟಿರಬೇಕು. ಖಂಡಿತಾ! ಅವನು ನಮ್ಮ ಎಲ್ಲಾ ಕಷ್ಟ ಸಂಕಟದ ಸಮಯದಲ್ಲೂ ಸದಾ ನಮ್ಮ ಜತೆಗೆ ರಕ್ಷಕನಾಗಿರುತ್ತಾನೆ.