ಮಗ ಆಹಾರ ನೀಡದ್ದರಿಂದ ಮೃತಪಟ್ಟ ತಾಯಿ: ಕೇಸು ದಾಖಲಿಸಿದ ಕೇರಳ ಪೊಲೀಸರು

0
553

ಸನ್ಮಾರ್ಗ ವಾರ್ತೆ

ಕೇರಳ,ಡಿ.2: ತಾಯಿಯೋರ್ವಳಿಗೆ ಮಗ ಆಹಾರ ನೀಡದ್ದರಿಂದ ಮೃತಪಟ್ಟಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇರಳದ ಪೊಲೀಸರು ಕೇಸು ದಾಖಲಿಸಿದ್ದು, ಮಗನ ವಿರುದ್ಧ ಮಗಳು ಮತ್ತು ಅಳಿಯ ಸಹಿತ ಇತರ ಸಂಬಂಧಿಕರು ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಕೋಝಿಕ್ಕೋಡ್ ಜೈಲ್ ರಸ್ತೆ ಸ್ಪಾನ್ ಹೊಟೇಲಿನ ಸಮೀಪದಲ್ಲಿ ವಾಸಿಸುತ್ತಿದ್ದ ಸುಮತಿ ವಿ. ಕಾಮತ್(70) ಎಂಬ ಮಹಿಳೆ ಮಂಗಳವಾರ ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸುಮತಿಯವರ ಸಾವಿಗೆ ಮಗನೇ ಕಾರಣನಾಗಿದ್ದು, ಆಹಾರ ಕೊಡದೆ ಹಸಿವಿಗೆ ದೂಡಿದ್ದರಿಂದ ಸಾವು ಸಂಭವಿಸಿದೆ ಎಂದು ಕಸಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂಬಂಧಿಕರು ತಿಳಿಸಿದ್ದಾರೆ.

ಕೆಲ ದಿನಗಳಿಂದ ನಿತ್ರಾಣಗೊಂಡಿದ್ದ ಸುಮತಿಯವರನ್ನು ಮಗಳು ಜ್ಯೋತಿ ಮತ್ತು ಮಗ ರಮೇಶ್ ಆಸ್ಪತ್ರೆಗೆ ದಾಖಲಿಸಿದ್ದರು. ಹಲವಾರು ದಿನದಿಂದ ಆಹಾರ ಸೇವಿಸಿರದ ಕಾರಣ ಮೃತಪಟ್ಟರೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆಂದು ಅಳಿಯ(ಮಗಳ ಗಂಡ) ನಾಗಿರುವ ರಾಜೀವ್ ತಿಳಿಸಿದ್ದಾರೆ.

ಆರೋಪಿಯ ಸ್ಥಾನದಲ್ಲಿರುವ ಸುಮತಿಯವರ ಮಗ ರಮೇಶ್ ಎಂಬಾತ ಸುಮತಿಯವರಿಗೆ ದೈಹಿಕವಾಗಿ ಹಲ್ಲೆ ಮಾಡಿರುವುದಲ್ಲದೇ, ಮಾನಸಿಕ ಹಿಂಸೆ ನೀಡುತ್ತಿದ್ದ. ಅಲ್ಲದೇ, ಆಕೆಗೆ ಸರಿಯಾದ ಆಹಾರ ನೀಡದಿದ್ದರಿಂದ ಆಕೆ ನಿತ್ರಾಣಗೊಂಡಿದ್ದು, ಇದರಿಂದಾಗಿ ಆಕೆ‌ ಕೊನೆಯುಸಿರೆಳೆಯುವಂತಾಯಿತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮೂರು ತಿಂಗಳ ಹಿಂದೆ ಸುಮತಿಯರ ಮಂಗಳೂರಿನ ಮನೆಯಿಂದ ಮಗ ರಮೇಶ್ ರವರು ತನ್ನ ತಾಯಿಯನ್ನು ನೋಡಿಕೊಳ್ಳುವುದಾಗಿ ಕೋಝಿಕ್ಕೋಡಿನ ಮನೆಗೆ ಕರೆದುಕೊಂಡು ಬಂದಿದ್ದನು. ಕೊರೋನಾ ಲಾಕ್ ಡೌನ್ ನ‌ ಹಿನ್ನೆಲೆಯಲ್ಲಿ ಸುಮತಿಯವರ ಬೇರೆ ಮಕ್ಕಳಿಗೆ ಕೋಝಿಕ್ಕೋಡ್ ಗೆ ತೆರಳಲಾಗಿರಲಿಲ್ಲ. ಆದರೆ ಫೋನ್‍ನಲ್ಲಿ ಮಾತಾಡಿದಾಗ ಸುಮತಿಯವರಿಗೆ ಏನೋ ಸಮಸ್ಯೆ ಇದೆಯೆಂದು ಅನಿಸಿದ್ದು ಆದ್ದರಿಂದ ಊರಿಗೆ ನಾವು ಬಂದೆವು ಎಂದು ಪೊಲೀಸರಿಗೆ ದೂರು ನೀಡಿರುವ ಮಗಳು ಮತ್ತು ಸಂಬಂಧಿಕರು ಹೇಳಿದ್ದಾರೆ.

ಇಷ್ಟೆಲ್ಲಾ ಆಗಿದ್ದರೂ ಸುಮತಿಯವರ ಪುತ್ರ ರಮೇಶ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.