ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಬಳಿ ಮುಸ್ಲಿಮರ ದೂರುಗಳೇ ಹೆಚ್ಚು!

0
567

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.21: ದೇಶದ ಅಲ್ಪಸಂಖ್ಯಾತ ಸಮುದಾಯದ ಜನರು ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಐದು ಸಾವಿರ ದೂರುಗಳನ್ನು ಸಲ್ಲಿಸಿದ್ದಾರೆ. ಇವುಗಳಲ್ಲಿ ಶೇ. 55 ಕಾನೂನು ವ್ಯವಸ್ಥೆಗೆ ಸಂಬಂಧಿಸಿದ್ದಾಗಿದ್ದು ಸುಮಾರು ಶೇ.75 ದೂರುಗಳು ಮುಸ್ಲಿಂ ಸಮುದಾಯವೊಂದರಿಂದಲೇ ಬಂದಿದೆ.

ಆಯೋಗ ನೀಡಿದ ಅಂಕಿ ಸಂಖ್ಯೆ ಪ್ರಕಾರ 2016-17ರಿಂದ 2018-19ರವರೆಗೆ ಒಟ್ಟು 5003 ದೂರುಗಳು ಬಂದಿವೆ. ಇವುಗಳಲ್ಲಿ ಮುಸ್ಲಿಂ ಸಮುದಾಯದಿಂದ 37703 ದೂರುಗಳು ಬಂದಿವೆ. ನಂತರದ ಸ್ಥಾನದಲ್ಲಿ ಸಿಖ್ಖರಿದ್ದಾರೆ. ಅವರಿಂದ 340 ದೂರುಗಳು ಬಂದಿವೆ. ಕ್ರೈಸ್ತರಿಂದ 338 ದೂರುಗಳು ಬಂದಿವೆ. ದೇಶದಲ್ಲಿ ಐವತ್ತು ಸಾವಿರ ಜನಸಂಖ್ಯೆ ಇರುವ ಪಾರ್ಸಿ ಸಮುದಾಯದಿಂದ ಕಳೆದ ಮೂರು ವರ್ಷಗಳಲ್ಲಿ ಒಂಬತ್ತು ದೂರುಗಳು ಸಿಕ್ಕಿವೆ.

ಅಲ್ಪಸಂಖ್ಯಾತ ಸಮುದಾಯದಿಂದ ಸಿಗುವ ದೂರುಗಳಲ್ಲಿ ಅತಿ ಹೆಚ್ಚು ಕಾನೂನು ವ್ಯವಸ್ಥೆಗೆ ಸಂಬಂಧಿಸಿದ್ದಾಗಿರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಆಯೋಗದ ಮುಂದೆ ದೇಶದಾದ್ಯಂತದಿಂದ ಕಾನೂನಿಗೆ ಸಂಬಂಧಿಸಿದ 2860 ದೂರುಗಳು ಬಂದಿವೆ ಎಂದು ಅಲ್ಪಸಂಖ್ಯಾತರ ಆಯೋಗದ ಓರ್ವ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಇದರಲ್ಲಿ ಪೊಲೀಸರಿಗೆ ಸಂಬಂಧಿಸಿದ ದೂರುಗಳೇ ಹೆಚ್ಚಿವೆ.

“ನಮಗೆ ದೂರು ಸಿಕ್ಕಿದ ಕೂಡಲೇ ಆಡಳಿತವನ್ನು ಸಂಪರ್ಕಿಸಿ ಕ್ರಮ ಜರುಗಿಸುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಕಾನೂನಿಗೆ ಸಂಬಂಧಿಸಿದ ದೊಡ್ಡ ಪ್ರಕರಣವಾದರೆ ಆಯೋಗ ಸ್ಥಳಕ್ಕೆ ತನ್ನ ತಂಡವನ್ನು ಕಳುಹಿಸಿಕೊಡುತ್ತದೆ” ಎಂದು ಅಧಿಕಾರಿಗಳು ತಿಳಿಸಿದರು. ಆಯೋಗದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಸೇವೆ ಸಂಬಂಧಿಸಿದ 424, ಶಿಕ್ಷಣಕ್ಕೆ ಸಂಬಂಧಿಸಿದ 277 ಮತ್ತು ಧಾರ್ಮಿಕ ಹಕ್ಕಿಗೆ ಸಂಬಂಧಿಸಿದ 184 ದೂರುಗಳು ಬಂದಿವೆ.