ಪಾಕಿಸ್ತಾನದ ವಲಸೆಗಾರ ನಾಯಕ ಅಲ್ತಾಫ್ ಹುಸೈನ್‍ರನ್ನು ಬಂಧಿಸಿದ ಲಂಡನ್ ಪೊಲೀಸರು; ಪಾಕ್ ಗೆ ಐಎಂಎಫ್ ಸಾಲ ನೀಡಬಾರದು ಅಂದಿದ್ದರು

0
898

ಲಂಡನ್, ಜೂ. 12: ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರ ನಾಯಕ ಹಾಗೂ ಮುತ್ತಹಿದಾ ಖೌಮಿ ಮೂವ್‍ಮೆಂಟ್ (ಎಂಕ್ಯೂಎಂ) ಸ್ಥಾಪಕ ಅಲ್ತಾಪ್ ಹುಸೈನ್‍ರನ್ನು ದೇಶವಿರೋಧಿ ಭಾಷಣ ನೀಡಿದ್ದಕ್ಕಾಗಿ ಲಂಡನ್ ಪೊಲೀಸರು ಬಂಧಿಸಿದ್ದಾರೆ. ಮೆಟ್ರೊಪಾಲಿಟಿನ್ ಪೊಲೀಸ್ ಭಯೋತ್ಪಾದನಾ ವಿರೋಧಿ ವಿಭಾಗ ತನಿಖೆಯ ಭಾಗವಾಗಿ ಅವರನ್ನು ಬಂಧಿಸಿದೆ. 1೯90ರಲ್ಲಿ ಪಾಕಿಸ್ತಾನದಿಂದ ಇಂಗ್ಲೆಂಡ್‍ಗೆ ಪಲಾಯನ ಮಾಡಿ ಅವರು ರಾಜಕೀಯ ಆಶ್ರಯ ಪಡೆದಿದ್ದರು. ನಂತರ ಅವರಿಗೆ ಇಂಗ್ಲ೦ಡ್ ಪೌರತ್ವ ನೀಡಿತ್ತು. 2016ರಲ್ಲಿ ಮಾಡಿದ್ದ ಭಾಷಣದ ಹೆಸರಿನಲ್ಲಿ ಈಗ ತನಿಖೆಯನ್ನು ಅವರು ಎದುರಿಸುತ್ತಿದ್ದಾರೆ.

ಪಾಕಿಸ್ತಾನ ಸರಕಾರದ ವಿರುದ್ಧ ಅಲ್ತಾಪ್ ಹುಸೈನ್‍ರ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪಾಕಿಸ್ತಾನದಂತಹ ನಂಬಿಕೆಗೆ ಯೋಗ್ಯವಲ್ಲದ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಎಚ್ಚರ ವಹಿಸಬೇಕೆಂದು ಅವರು ಅಂತಾರಾಷ್ಟ್ರೀಯ ನಾಣ್ಯ ನಿಧಿ(ಐಎಂಎಫ್)ಗೆ ಇತ್ತೀಚೆಗೆ ಹೇಳಿದ್ದರು. ಭಾರತ ವಿಭಜನೆಗೊಂಡು ಪಾಕಿಸ್ತಾನಕ್ಕೆ ವಲಸೆಹೋದವರ ಪಾರ್ಟಿ ಎಂಕ್ಯೂಎಂ ಪಾಕಿಸ್ತಾನದ ಕರಾಚಿ ನಗರ ಸಹಿತ ಹಲವು ಕಡೆ ಪ್ರಭಾವಿಯಾಗಿದೆ. ಇತ್ತೀಚೆಗೆ ಪಾರ್ಟಿಯು ವಿಭಜನೆಗೊಂಡಿತ್ತು. ಆದರೂ ಅನಿವಾಸಿಯಾಗಿ ಲಂಡನ್‍ನಲ್ಲಿ ನೆಲಸಿರುವ ಸ್ಥಾಪಕ ನಾಯಕ ಅಲ್ತಾಫ್ ಹುಸೈನ್ ಎರಡು ವಿಭಾಗದ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದ ಪ್ರಭಾವವನ್ನು ಹೊಂದಿದ್ದಾರೆ.