ಎನ್‍ಸಿಪಿ ನಾಯಕ ತನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ- ಅಣ್ಣಾ ಹಝಾರೆ

0
680

ಮುಂಬೈ, ಜು.10: ತನ್ನನ್ನು ಕೊಲೆ ಮಾಡುವಂತೆ ಈ ಹಿಂದೆ ಕೊಲೆಗೀಡಾಗಿರುವ ಕಾಂಗ್ರೆಸ್ ನಾಯಕ ಪವನ್‍ರಾಜೆ ನಿಂಬಾಲ್ಕರ್ ರ ಕೊಲೆಗಡುಕರಿಗೆ ಸುಪಾರಿ ನೀಡಲಾಗಿದೆ ಎಂದು ಸಿಬಿಐ ಕೋರ್ಟಿನಲ್ಲಿ ಅಣ್ಣಾ ಹಝಾರೆ ಹೇಳಿದ್ದಾರೆ. ಉಸ್ಮಾನಾಬಾದ್ ಟರ್ನೊ ಸಕ್ಕರೆ ಫ್ಯಾಕ್ಟರಿಯ ಭ್ರಷ್ಟಾಚಾರ ಹೊರತಂದಿರುವುದಕ್ಕಾಗಿ ತನ್ನ ಕೊಲೆಗೆ ಯೋಜನೆ ರೂಪಿಸಲಾಗಿದೆ ಎಂದು ಹಝಾರೆ ಹೇಳಿದರು. ಅವರು ನಿಂಬಾಲ್ಕರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಹೇಳುತ್ತಿದ್ದರು. ನಿಂಬಾಲ್ಕರ್ ರ ಸಂಬಂಧಿಕರಾದ ಮಾಜಿ ಸಚಿವ ಪದಂಸಿನ್ ಪಾಟೀಲ್ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಇವರು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ರ ಬಲಗೈಯಾಗಿದ್ದಾರೆ. ನಿಂಬಾಲ್ಕರ್ ರನ್ನು ಕೊಲೆ ಮಾಡಿದ ಸುಫಾರಿ ಹಂತಕರ ವಿಚಾರಣೆಯ ವೇಳೆ ಹಝಾರೆಯನ್ನು ಕೂಡ ಕೊಲ್ಲಲು ತಮಗೆ ತಿಳಿಸಲಾಗಿತ್ತು ಎಂದು ಕೋರ್ಟಿನಲ್ಲಿ ಆರೋಪಿಗಳು ಹೇಳಿದ್ದರು. ಇದು ಗೊತ್ತಾಗಿ ತಾನು ಪೊಲೀಸರಿಗೆ ದೂರು ನೀಡಿದಾಗ ದೂರನ್ನು ಹಿಂಪಡೆದುಕೊಳ್ಳುವಂತೆ ಪದಂಸಿನ್ ಪಾಟೀಲ್‍ರ ಜನರು ಬೆದರಿಕೆ ಹಾಕಿದ್ದಾರೆ ಮತ್ತು ಬ್ಲಾಂಕ್ ಚೆಕ್ ನೀಡಲು ಯತ್ನಿಸಿದ್ದಾರೆ ಎಂದು ಹಝಾರೆ ಕೋರ್ಟಿಗೆ ತಿಳಿಸಿದರು.

ಬೆದರಿಕೆಯ ಕುರಿತು ಹಝಾರೆ ಪ್ರಧಾನಿ, ಮುಖ್ಯ ಮಂತ್ರಿಗೆ ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತನಗೆ ಸಿಕ್ಕಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಝಾರೆ ಮರಳಿಸಿದ್ದರು.