ಇಂದು ಮಹಾರಾಷ್ಟ್ರ, ಹರಿಯಾಣ ಚುನಾವಣಾ ದಿನಾಂಕ ಘೋಷಣೆ

0
522

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಯ ದಿನಾಂಕ ಇಂದು ಘೋಷಣೆಯಾಗಲಿದೆ. ಕೇಂದ್ರ ಚುನಾವಣಾ ಆಯೋಗ ಮಧ್ಯಾಹ್ನ ಹನ್ನೆರಡು ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಲಿದೆ. ಎರಡು ವಿಧಾನ ಸಭೆಗಳಿಗೆ ಚುನಾವಣೆಯ ಜೊತೆಗೆ ಕೇರಳದ ಐದು ವಿಧಾನಸಭಾ ಕ್ಷೇತ್ರಗಳಿಗೆ (ಮಂಜೇಶ್ವರಂ, ಎರ್ನಾಕುಳಂ, ಅರೂರ್, ಕೊನ್ನಿ, ವಟ್ಟಿಯೂಕ್ಕಾವ್)ಗೆ ಉಪಚುನಾವಣಾ ದಿನಾಂಕವೂ ಘೋಷಣೆಯಾಗುವ ಸಾಧ್ಯತೆ ಇದೆ.

ಈ ವರ್ಷ ಮಹಾರಾಷ್ಟ್ರ, ಝಾರ್ಕಂಡ್, ಹರಿಯಾಣಕ್ಕೆ ಚುನಾವಣೆ ನಡೆಯಲಿದೆ. ಇದೇ ವೇಳೆ, ಝಾರ್ಕಂಡ್ ವಿಧಾನಸಭೆಯ ಕಾಲಾವಧಿ ನವೆಂಬರ್‌ನಲ್ಲಿ ಪೂರ್ತಿಯಾಗುವುದರಿಂದ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ನಂತರ ಘೋಷಿಸುವ ಸಾಧ್ಯತೆಯಿದೆ.

ಕಳೆದ ಚುನಾವಣೆಯಲ್ಲಿ ಮಹಾರಾಷ್ಟ್ರದ 288 ಸೀಟುಗಳಲ್ಲಿ 122 ಸೀಟುಗಳು ಬಿಜೆಪಿಗೆ ಮತ್ತು 63 ಸೀಟುಗಳು ಶಿವಸೇನೆ ಸಿಕ್ಕಿತ್ತು. ಕಾಂಗ್ರೆಸ್-ಎನ್‍ಸಿಪಿ ಸಖ್ಯಕ್ಕೆ 83 ಸೀಟುಗಳು ಸಿಕ್ಕಿದ್ದವು. ಎಂಎನ್‍ಎಸ್ ಒಂದು ಸೀಟಿನಲ್ಲಿ ಗೆದ್ದಿದ್ದರೆ ಇತರರು ಹತ್ತೊಂಬತ್ತು ಸೀಟಿನಲ್ಲಿ ಜಯಗಳಿಸಿದ್ದರು. ಹರಿಯಾಣದಲ್ಲಿ 90 ಸೀಟುಗಳಲ್ಲಿ ಬಿಜೆಪಿಗೆ 47 ಸೀಟುಗಳು ಸಿಕ್ಕಿದ್ದವು. ಐಎನ್‍ಎಲ್‍ಡಿಗೆ 19, ಎಚ್‍ಜೆಸಿಗೆ 2, ಬಿಎಸ್‍ಪಿ 1, ಇತರೆ ಆರು ಸ್ಥಾನಗಳು ಸಿಕ್ಕಿದ್ದವು. ಹರಿಯಾಣ, ಮಹಾರಾಷ್ಟ್ರ ವಿಧಾನಸಭೆಯ ಕಾಲವಧಿ ಅಕ್ಟೋಬರ್, ನವೆಂಬರ್‌ಗಳಲ್ಲಿ ಕೊನೆಗೊಳಲ್ಲಿದೆ.