ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯರು, ಹಿಂದೂಗಳು ಮತ್ತು ದಕ್ಷಿಣ ಏಷ್ಯದವರ ಮೇಲೆ ದ್ವೇಷ ಪ್ರಚಾರ ವಿಪರೀತ ಹೆಚ್ಚುತ್ತಿದೆ ಎಂದು ಅಮೆರಿಕನ್ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ಟೀಕಿಸಿದ್ದಾರೆ. ಆನ್ಲೈನ್ ದ್ವೇಷ ಪ್ರಚಾರದಲ್ಲಿ ಪ್ರಮುಖ ಟೆಕ್ನಾಲಜಿ ಕಂಪೆನಿಗಳು ಲಾಭ ಕೊಯ್ಯುತ್ತಿದ್ದು ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದು ಆವಶ್ಯಕ ಎಂದು ಅವರು ಹೇಳಿದರು. ಇಂತಹ ಅಭ್ಯಾಸದ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಅಮೆರಿಕದಲ್ಲಿ ಭಾರತೀಯ ಮೂಲದವರು ಮತ್ತು ಹಿಂದೂ ದೇವಾಲಯಗಳ ವಿರುದ್ಧ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳು ಮತ್ತು ದಾಳಿ ಯತ್ನಗಳ ಹಿನ್ನೆಲೆಯಲ್ಲಿ ಅವರ ಈ ಬಲವಾದ ಪ್ರತಿಕ್ರಿಯೆ ಬಂದಿದೆ. ಅಮೆರಿಕದಲ್ಲಿ ದಕ್ಷಿಣ ಏಷ್ಯಾದ ಸಮುದಾಯಗಳ ವಿರುದ್ಧ ದ್ವೇಷ ಹೆಚ್ಚಳವಾಗಿದ್ದು ಸೆಂಟರ್ ಫಾರ್ ದ ಸ್ಟಡಿ ಆಫ್ ಆರ್ಗನೈಝೇಶನ್ಡ್ ಹೇಟ್ ಬಿಡಿಗಡೆ ಮಾಡಿರುವ ವರದಿಯ ಪ್ರಕಾರ 2025 ಜನುವರಿಯಿಂದ 2026 ಜೂನ್ವರೆಗೆ ಎಕ್ಸ್ನಲ್ಲಿ ದಕ್ಷಿಣ ಏಷ್ಯದವರನ್ನು ಗುರಿಯಾಗಿಸಿ ಸುಮಾರು 5,42,360 ದ್ವೇಷಪೂರಿತ ಪೋಸ್ಟ್ಗಳು ಕಂಡು ಬಂದಿವೆ. 2024 ಜನವರಿಯಲ್ಲಿ ಪ್ರತಿ ದಿನ 12,904 ಪೂಸ್ಟ್ಗಳು ಬಂದವು. 2026 ರ ಜೂನ್ನಲ್ಲಿ 43,843 ಪೋಸ್ಟ್ಗಳು ಕಂಡು ಬಂದಿವೆ.
ಕೃಷ್ಣಮೂರ್ತಿ ಹೇಳುವ ಪ್ರಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಕ್ಷಿಣ ಏಷ್ಯಾದ ಜನಸಮುದಾಯಗಳ ವಿರುದ್ಧದ ದ್ವೇಷಪೂರಿತ ವಿಷಯಗಳಲ್ಲಿ ಶೇ. 240ಕ್ಕೂ ಹೆಚ್ಚು ಏರಿಕೆಯಾಗಿದೆ. ಇಂತಹ ದ್ವೇಷದ ಪ್ರಚಾರಗಳನ್ನು ತಡೆಯಲು ಪ್ಲಾಟ್ಫಾರ್ಮ್ಗಳಿಗೆ ಯಾವುದೇ ಪ್ರೇರಣೆಯಾಗಲಿ ಅಥವಾ ಆಸಕ್ತಿಯಾಗಲಿ ಇಲ್ಲವೆಂದೂ, ಇದರ ಮೂಲಕ ಸಿಗುವ ವೀವ್ಸ್ ಮತ್ತು ಎಂಗೇಜ್ಮೆಂಟ್ ಕಂಪನಿಗಳಿಗೆ ಆರ್ಥಿಕ ಲಾಭ ತಂದುಕೊಡುತ್ತಿದೆ ಎಂದೂ ಅವರು ಆರೋಪಿಸಿದರು.ಆನ್ಲೈನ್ ದ್ವೇಷದ ಪ್ರಚಾರಗಳನ್ನು ತಡೆಯುವಲ್ಲಿ ವಿಫಲವಾಗುವ ಟೆಕ್ ಕಂಪನಿಗಳ ವಿರುದ್ಧ ಫೆಡರಲ್ ಮಟ್ಟದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಯು.ಎಸ್ ಕಾಂಗ್ರೆಸ್ ಅನ್ನು ಒತ್ತಾಯಿಸಿದರು.












