ನೀವಿರುತ್ತಿದ್ದರೆ ಸಂತುಷ್ಟರಾಗುತ್ತಿದ್ದೀರೇನೋ

0
176

ಸನ್ಮಾರ್ಗ ವಾರ್ತೆ

ವಾರಗಳ ಹಿಂದೆಯಷ್ಟೇ ಹೊರಬಿದ್ದ ವಿಧಾನಸಭಾ ಚುನಾವಣಾ ಫಲಿತಾಂಶ ನಮ್ಮಲ್ಲಿ ಹಲವರಿಗೆ ಭಾರಿ ಭರವಸೆಯನ್ನು ಮೂಡಿಸಿರುವ, ಮನಸ್ಸಿನಲ್ಲಡಗಿದ್ದ ದುಗುಡ, ಅಸಹಾಯಕತೆಗೆ ಸಾಂತ್ವನ ನೀಡಿ ನಿರೀಕ್ಷೆ ಹುಟ್ಟಿಸಿದ ಫಲಿತಾಂಶವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಹೌದು, ಈ ಕೋಮುವಾದ, ಮತೀಯ ಗೂಂಡಾಗಿರಿ, ಕೋಮು ಪಕ್ಷಪಾತ ನಮ್ಮನ್ನೂ, ನಮ್ಮ ಭವಿಷ್ಯದ ಮಕ್ಕಳನ್ನೂ ಎತ್ತ ಸಾಗಿಸುತ್ತಿದೆ ಎಂಬ ಭೀತಿಯಲ್ಲಿ ತೊಳಲಾಡುತ್ತಿದ್ದ ಸಮುದಾಯಕ್ಕೆ ಆಶಾವಾದದ ಕಿಡಿಯೊಂದನ್ನು ಹೊತ್ತಿಸುವಲ್ಲಿ ಈ ಚುನಾವಣಾ ಫಲಿತಾಂಶ ಯಶಸ್ವಿಯಾಗಿದೆ.

ಸರಕಾರ ಯಾವ ಪಕ್ಷದ್ದೇ ಬರಲಿ, ಜನರ ನೆಮ್ಮದಿ, ಭಾವನೆ, ಕನಸುಗಳೊಂದಿಗೆ ಚೆಲ್ಲಾಟವಾಡದೆ, ಇತರರಿಗೆ ಮುಳುವಾಗದ ತಮ್ಮ ತಮ್ಮ ನಂಬಿಕೆ ವಿಶ್ವಾಸ ಆಚಾರಗಳ ಆಧಾರದಲ್ಲಿ ಜನರನ್ನು ಬದುಕಲು ಬಿಟ್ಟರೆ ಅದೇ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಮಾಣವಾಗುವ ನೈಜ ಸರಕಾರ.

ಈ ಪೀಠಿಕೆ ಯಾವ ವಿಷಯ ವಸ್ತುವಿಗೆ ಎಂದು ನಿಮ್ಮ ಮನಸ್ಸಿನಲ್ಲಿ ಕುತೂಹಲ ಉಂಟಾಗಿರಬಹುದು. ಹಿಂದಿನ ಕೆಲವು ವರ್ಷಗಳಂತೆ ಈ ಬಾರಿಯೂ ನನ್ನ ತಂದೆಯವರು ಈ ಭೂಮಿಗೆ ವಿದಾಯ ಹೇಳಿ ದೇವನ ಸಾಮೀಪ್ಯದಲ್ಲಿ ಹಾಜರಾದ ಮೇ 27 ನೇ ತಾರೀಖಿನ ನೆನಪಿನಲ್ಲಿ ಅಪ್ಪನವರ ಕೋಮು ಸಾಮರಸ್ಯದ ನಡೆಗಳ ಕುರಿತು ಒಂದು ಕಿರು ಲೇಖನವನ್ನು ಬರೆಯಲು ಮನಸ್ಸು ಹಂಬಲಿಸುತ್ತಿತ್ತು. ಕೋಮುವಾದ ಕೋಮು ಪಕ್ಷಪಾತಕ್ಕೆ ಒಂದು ದೊಡ್ಡ ತಡೆಗೋಡೆಯೋ ಎಂಬಂತೆ ಬಹಳ ಎತ್ತರಕ್ಕೆ ಬೆಳೆದು ನಿಂತಿದ್ದರು ನನ್ನಪ್ಪ. ತಮ್ಮ ಆಯುಷ್ಯದ, ತಮ್ಮ ರಚನಾತ್ಮಕ ಚಟುವಟಿಕೆಗಳ ಬಹುದೊಡ್ಡ ಭಾಗವನ್ನು ಧರ್ಮ- ಧರ್ಮಗಳ ಮಧ್ಯೆ ವೈಷಮ್ಯ, ತಪ್ಪು ಕಲ್ಪನೆಗಳನ್ನು ನಿವಾರಿಸಿ ಸಮಾಜದಲ್ಲಿ ಸಾಮರಸ್ಯದ ಬಾಳು ಎಲ್ಲರದ್ದಾಗಬೇಕು ಎಂದು ದಿನ ರಾತ್ರಿ ಪ್ರಯತ್ನಿಸಿದ ಜೀವ ನನ್ನ ತಂದೆಯವರದ್ದು.

ಈ ಹಿಂದೂ, ಮುಸ್ಲಿಂ, ಕ್ರೈಸ್ತ ವಿಭಜನೆಗೆ, ವಿಂಗಡಣೆಗೆ ಬ್ರಿಟಿಷರು ಬಹಳ ದೊಡ್ಡ ದಾರಿ ಮಾಡಿ ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿ ಅದರ ಕರಿನೆರಳು ಎಲ್ಲ ಭಾರತೀಯರ ಮೇಲೆ ಬೀಳುವಂತೆ ಮಾಡಿದ್ದರೂ ಹಿಂದಿದ್ದ ಪ್ರಜ್ಞಾವಂತ ಜನರು ಈ ಕೋಮುವಾದ ನಮ್ಮ ನೆಮ್ಮದಿಯ ಬದುಕಿಗೆ ಮುಳುವಾಗುವಂತದ್ದು ಎಂದರಿತು ಸ್ವಾತಂತ್ರ್ಯ ಹೋರಾಟಗಾರರ ಆದರ್ಶದ ಅಡಿಯಲ್ಲಿ ಸಮಾಜದಲ್ಲಿ ಸಾಮರಸ್ಯದ ಬದುಕಿಗೆ ಗಟ್ಟಿ ಅಡಿಪಾಯ ಹಾಕಲು ಪ್ರಯತ್ನಿಸುತ್ತಿದ್ದರು. ಆದರೆ ಕರ್ನಾಟಕದ ಇತ್ತೀಚಿನ ವಿದ್ಯಮಾನಗಳು ಕೋಮುವಾದದ ಭಯಾನಕ ರೂಪ ಪಡೆಯುತ್ತಿದ್ದುದು ನಿಜಕ್ಕೂ ಆತಂಕಕಾರಿಯಾಗಿತ್ತು. ಜನರು ಹೆಚ್ಚು ಹೆಚ್ಚು ಶಿಕ್ಷಿತರೂ, ವಿದ್ಯಾವಂತರೂ ಆಗುತ್ತಿದ್ದರೂ ಜನರ ಮಧ್ಯೆ ಈ ದ್ವೇಷದ, ಕೋಮುವಾದದ ಕಂದಕಗಳು ಬೆಳೆಯುತ್ತಲೇ ಇರುವುದು ಯಾಕೆ ಎಂಬುದು ನಮ್ಮ ಮನಸ್ಸನ್ನು ಪೀಡಿಸುವ ಸಾಮಾನ್ಯ ಪ್ರಶ್ನೆಯಾಗಿಬಿಟ್ಟಿದೆ.

ಈ ಕೋಮು ವೈಷಮ್ಯವನ್ನು ಇಲ್ಲವಾಗಿಸಲು ನನ್ನ ತಂದೆಯವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅತ್ಯಂತ ಸ್ಪುಟವಾಗಿ, ನಿರರ್ಗಳವಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವ ಬರೆಯುವ ಸಾಮರ್ಥ್ಯವು ನನ್ನ ತಂದೆಯವರಿಗಿದ್ದುದು, ದೇವರು ಅವರನ್ನು ಆ ಕಾರ್ಯಕ್ಕಾಗಿಯೇ ನಿಯೋಗಿಸಿದ್ದಾನೆಯೇ ಎಂಬ ಅನುಮಾನ ಮೂಡುವಂತಿತ್ತು. ಜನರ ಮನಸ್ಸಿನಲ್ಲಿ ಇಸ್ಲಾಂನ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗಬೇಕು. ಇಸ್ಲಾಮಿನ ನೈಜ ಅರ್ಥ, ತಾತ್ಪರ್ಯ ಜನರ ಮುಂದೆ ಒಂದು ತೆರೆದ ಪುಸ್ತಕದಂತಿರಬೇಕು ಎಂಬ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದರು. ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಮಂದಿರ ಮಸೀದಿ ಚರ್ಚುಗಳ ಗುರು ಮಾನ್ಯರ ಪಾತ್ರ ಬಹಳ ಪ್ರಮುಖವಾದದ್ದು ಎಂದರಿತು ಮುಸ್ಲಿಂ ಸಮುದಾಯಕ್ಕೆ ಹೊಸದಾಗಿದ್ದ ಒಂದು ಪ್ರವೃತ್ತಿಯನ್ನು ಹುಟ್ಟು ಹಾಕಿದರು. ಅದೇನೆಂದರೆ ಮಠ ಮಂದಿರ ಇಗರ್ಜಿಗಳ ಮಠಾಧೀಶರುಗಳನ್ನು ಪಾದ್ರಿಗಳನ್ನು ನಿರಂತರ ಸಂಪರ್ಕದಲ್ಲಿರಿಸಲು, ಅವರೊಂದಿಗೆ ವಿಚಾರ ವಿನಿಮಯವನ್ನು ಮಾಡಿಕೊಳ್ಳಲು ಹಲವಾರು ಕಾರ್ಯಕ್ರಮಗಳನ್ನು ಕಾರ್ಯತಂತ್ರಗಳನ್ನು, ರೂಪುರೇಷೆಗಳನ್ನು ಹಾಕುತ್ತಿದ್ದರು.

ಈ ನಿಟ್ಟಿನಲ್ಲಿ ಅವರು ತನ್ನ ಮುಖವಾಣಿಯಾದ ಸನ್ಮಾರ್ಗ ವಾರ ಪತ್ರಿಕೆಯನ್ನು ಪ್ರಬಲ ಆಸ್ತ್ರವಾಗಿ ಬಳಸಿದ್ದರು. ಹಾಗೆಯೇ ಇಸ್ಲಾಮ್ ನ ನೈಜ ಪರಿಚಯ ಮಾಡಿಸುವಂತಹ ಕೃತಿಗಳಾದ ತಪ್ಪು ಕಲ್ಪನೆಗಳು, ಜಿಹಾದ್, ಇಸ್ಲಾಂ ಮತ್ತು ಪರಧರ್ಮ ಸಹಿಷ್ಣುತೆ, ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ) ಜೀವನ ಮತ್ತು ಸಂದೇಶ ಇತ್ಯಾದಿಗಳನ್ನು ಕನ್ನಡ ಜನಮಾನಸಕ್ಕೆ ಸಮರ್ಪಿಸಿದ್ದರು. ಶಾಂತಿ ಪ್ರಕಾಶನ, ಇಸ್ಮಿಕ ಸಂಸ್ಥೆಗಳು ಅವರ ಈ ಪರಿಶ್ರಮದ ಭಾಗವೇ ಆಗಿದೆ. ಇಸ್ಲಾಮಿನ ವಿಷಯ ನಾಲ್ಕು ಜನರ ಮುಂದೆ ಮಾತನಾಡಲೂ ಹೆದರುತ್ತಿದ್ದoತಹ ಸಂದರ್ಭದಲ್ಲಿ, ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದುದು ಅವರ ಎದೆಗಾರಿಕೆ ಮತ್ತು ದೇವನ ಮೇಲೆ ಇದ್ದ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ. ಈ ಎಲ್ಲ ಪರಿಶ್ರಮಗಳ ಹಿಂದೆ ಸ್ವಾರ್ಥ, ಸಮಾಜದಲ್ಲಿ ಹಿರಿಮೆ, ಮೇಲ್ಮೆ ಗಳಿಸಬೇಕೆಂಬ ಹಂಬಲ ಅಣುಗಾತ್ರದಷ್ಟಿದು ಎಲ್ಲೂ ಕಂಡು ಬರಲಿಕ್ಕಿಲ್ಲ.

ಇಸ್ಲಾಮಿನ ಪರಿಚಯ ಇತರರಿಗೆ ಭಾಷಣ ಲೇಖನಗಳ ಮೂಲಕ ಮಾಡುವವರು ನಮ್ಮ ಸಮಾಜದಲ್ಲಿ ಧಾರಾಳವಿದ್ದಾರೆ. ಆದರೆ ಅದನ್ನು ಸಮಗ್ರವಾಗಿ ತನ್ನ ಜೀವನದಲ್ಲಿ ಚಾಚೂ ತಪ್ಪದೆ ಅಳವಡಿಸಿ ತೋರಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳು ನನ್ನ ತಂದೆಯವರ ಬದುಕಿನಲ್ಲಿದೆ. ಇತ್ತೀಚೆಗೆ ಹಿಜಾಬ್ ನ ವಿವಾದ ಭುಗಿಲೆದ್ದಾಗ ನನಗೆ ನನ್ನ ಬಾಲ್ಯದ ಒಂದು ಘಟನೆ ನೆನಪಾಯಿತು. ನಾವು ಸಾಮಾನ್ಯವಾಗಿ ಈ ವಸ್ತ್ರ ಸoಹಿತೆ ಕೇವಲ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಅನ್ವಯವಾಗುವಂಥದ್ದು, ಅವರೇ ಅದನ್ನು ಪಾಲಿಸಬೇಕಾದವರು ಎಂಬಂತೆ ಬಿಂಬಿಸುತ್ತೇವೆ. ಮಹಿಳೆಗೆ ವಸ್ತ್ರಸಂಹಿತೆಯ ಪಾಲನೆ ಎಷ್ಟು ಅಗತ್ಯವೂ ಅಷ್ಟೇ ಕಾಳಜಿ ಪುರುಷನ ವಸ್ತ್ರ ಸಂಹಿತೆಯ ಬಗ್ಗೆಯೂ ನಾವು ತೋರಿಸಬೇಕು ಎಂಬ ಆದರ್ಶದ ನಡೆಯಾಗಿತ್ತು ನನ್ನ ತಂದೆಯವರದ್ದು. ತಮ್ಮ ಅತ್ಯಂತ ಕಿರಿಯ ಮಗನ ಶಿಕ್ಷಣ ಮತ್ತು ಸಂಪ್ರದಾಯದ ಪಾಲನೆಯ ವಿಷಯ ಬಂದಾಗ, ವಸ್ತ್ರ ಸಂಹಿತೆಯ ಪಾಲನೆಯ ಬಗ್ಗೆ ಅವರಿಗಿದ್ದ ಬದ್ಧತೆ ಎಂತಹವರನ್ನು ಆಶ್ಚರ್ಯಚಕಿತಗೊಳಿಸುವಂತಹದ್ದು. ಆಗಿನ್ನೂ ಮೂರನೇ ತರಗತಿಯಿಂದ ನಾಲ್ಕನೇ ತರಗತಿಗೆ ತೇರ್ಗಡೆಯಾಗಿದ್ದ ನನ್ನ ತಮ್ಮನಿಗೆ ಆತ ಕಲಿಯುತ್ತಿದ್ದ ವಿದ್ಯಾಸಂಸ್ಥೆಯಲ್ಲಿ ನಾಲ್ಕನೇ ತರಗತಿಯಲ್ಲೂ ಮಣಿಗಂಟಿನವರೆಗಿನ ಪ್ಯಾಂಟ್ ಧರಿಸಲು ಅವಕಾಶವಿಲ್ಲದೆ ಸಮವಸ್ತ್ರದ ಭಾಗವಾಗಿ ಮೊಣಕಾಲಿನ ಮೇಲಿರುವ ಚಡ್ಡಿಯನ್ನು ಧರಿಸಿ ಹೋಗಬೇಕಾಗಿ ಬಂದಾಗ, ಆ ಶಾಲೆಯಿಂದ ವರ್ಗಾವಣೆಯನ್ನು ಪಡೆದುಕೊಂಡು ಮುಸ್ಲಿಂ ಮಕ್ಕಳು ಧಾರಾಳವಾಗಿ ಕಲಿಯುತ್ತಿರುವ, ಪ್ಯಾಂಟ್ ಧರಿಸಲು ಅನುಮತಿರುವ ಬದ್ರಿಯಾ ಶಿಕ್ಷಣ ಸಂಸ್ಥೆಗೆ ಅವನನ್ನು ದಾಖಲು ಗೊಳಿಸಿದ್ದರು. ಕಲಿಕೆಯ ವಿಷಯದಲ್ಲಾಗಲಿ, ಇತರ ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಾಗಲೀ ಯಾವುದೇ ತೊಂದರೆಯಾಗದಿದ್ದರೂ ಕೇವಲ ಇಸ್ಲಾಂ ಪುರುಷನಿಗೆ ನಿರ್ಧರಿಸಿದ್ದ ವಸ್ತ್ರ ಸಂಹಿತೆಗೆ ವಿರುದ್ಧವಾಗಿರುವ ವಸ್ತ್ರವನ್ನು ತನ್ನ ಮಗ ಪುಟ್ಟ ಬಾಲಕನಾಗಿರುವಾಗಲೇ ಧರಿಸುವುದನ್ನು ಇಷ್ಟಪಡದ ಅವರು ಮಗನ ಶಾಲೆಯನ್ನೇ ಬದಲಿಸುವ ದಿಟ ನಿರ್ಧಾರ ತೆಗೆದುಕೊಂಡರು.

ಹಾಗೆಯೇ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಿರುವ ತುಂಬು ಕುಟುಂಬದಲ್ಲಿ ಪ್ರತಿಯೊಬ್ಬರ ವಿದ್ಯಾಭ್ಯಾಸಕ್ಕೂ,ಇಸ್ಲಾಮಿನ ರೀತಿ ರಿವಾಜುಗಳಿಗೂ ಯಾವುದೇ ತೊಂದರೆಯಾಗದಂತೆ ನಡೆದುಕೊಂಡರು. ಹೆಣ್ಣು ಗಂಡು ಮಕ್ಕಳು ಸಹ ಶಿಕ್ಷಣವನ್ನು ಪಡೆಯುವುದು ಅವರು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ತನ್ನ ಹಿರಿಮಗಳ ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿಯೇ, ಸೂಕ್ತ ಶಿಕ್ಷಣ ಸಂಸ್ಥೆಯನ್ನು ಹುಡುಕಿ, ಅದಕ್ಕೆ ತಕ್ಕಂತೆ ತನ್ನ ವಾಸ್ತವ್ಯದ ಮನೆಯನ್ನೂ, ಊರನ್ನೂ ಬದಲಿಸಿದರು. ಹೆಣ್ಣು ಮಕ್ಕಳಿಗೆ ಹದಿಮೂರು- ಹದಿನಾಲ್ಕನೆಯ ವಯಸ್ಸಿನಲ್ಲೇ, ಅಂದರೆ 9ನೇ ತರಗತಿಗೆ ಹೋಗುವಾಗಲೇ ಪೂರ್ತಿ ಮೈ ಮುಚ್ಚುವ ಪರ್ದಾವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸುತ್ತಿದ್ದರು. ಚಿಕ್ಕವರಿದ್ದಾಗ ನಮಗೆ ತಂದೆಯವರ ಶಿಸ್ತು, ತುಸು ಕಠಿಣವೆ ಎಂದು ತೋರಿ ಬಂದರೂ ಅವರ ಸಂಸ್ಕಾರ, ಸಂಪ್ರದಾಯ, ಆಚರಣೆಗಳಲ್ಲಿದ್ದ ಬದ್ಧತೆ, ಅವರ ಧರ್ಮ ನಿಷ್ಠೆಯ ಬಗ್ಗೆ ನಿಜವಾಗಿಯೂ ಬಹಳ ಹೆಮ್ಮೆ ಎನಿಸುತ್ತದೆ.

ಅತ್ಯಂತ ನಗಣ್ಯ, ಕ್ಷುಲ್ಲಕ ಎಂದು ನಾವು ಹೊಂದಾಣಿಕೆ ಮಾಡಿಕೊಳ್ಳಬಹುದಲ್ಲವೇ ಎಂದು ಭಾವಿಸುವ ವಿಚಾರಗಳೂ ಅವರ ಧರ್ಮ ನಿಷ್ಠೆಯ ಮುಂದೆ ಅಪರ ರೂಪವನ್ನು ತಾಳುತ್ತಿದ್ದವು. ಇತ್ತೀಚೆಗೆ ವಿದ್ಯಾಸಂಸ್ಥೆಗಳಲ್ಲಿ ಹುಡುಗಿಯರಿಗೆ ಶಿರವಸ್ತ್ರ ಧರಿಸುವ ಅವಕಾಶವನ್ನು ವಂಚಿಸಿ, ಅದಕ್ಕೆ ಶಾಲಾ ವಸ್ತ್ರ ಸಂಹಿತೆಗೆ ವಿರುದ್ಧ ಎಂಬ ಹಣೆ ಪಟ್ಟಿ ಕಟ್ಟಿ ಅದನ್ನು ಸುಪ್ರೀಂ ಕೋರ್ಟ್ ನ ಮೆಟ್ಟಲವರೆಗೂ ಎಳೆದೊಯ್ದು, ನಾಗರಿಕ ಸಮಾಜಕ್ಕೆ ಅಪಮಾನವಾಗುವ ನಡೆ ಎರಡೂ ವರ್ಗದವರಿಂದ ಕಂಡು ಬಂದಾಗ ಮನಸ್ಸಿಗೆ ಮರುಕವಾಯಿತು. ಈ ಸಂಧರ್ಭದಲ್ಲಿ ನನ್ನ ವೃತ್ತಿ ಜೀವನದಲ್ಲಾದ ಒಂದು ಸಣ್ಣ ಘಟನೆ ನನ್ನ ಮನಸ್ಸನ್ನು ಬಹಳವಾಗಿ ಘಾಸಿಗೊಳಿಸಿತ್ತು. ನನ್ನ ತಂದೆಯವರ ಧರ್ಮನಿಷ್ಠೆ ಆಗ ನನಗೆ ಬಹಳ ನೆನಪಾಯಿತು.

ಮುಸ್ಲಿಂ ಆಡಳಿತ ವರ್ಗವು ನಡೆಸುತ್ತಿರುವ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ನನಗೆ ಕಳೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ತರಗತಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿಭಾಯಿಸಲು ನನ್ನೊಂದಿಗೆ ಕೇಳಿಕೊಂಡಿದ್ದರು. ಬೇಸಿಗೆ ರಜೆಯ ಸಂದರ್ಭವಾದುದರಿಂದ ಹೆಚ್ಚಿನ ಶಿಕ್ಷಕಿಯರು ಇಂತಹ ಜವಾಬ್ದಾರಿಗಳಿಗೆ ಒಪ್ಪಿಕೊಳ್ಳದಿದ್ದುದರಿಂದ, ಶಿಕ್ಷಕರ ಕೊರತೆ ಇದೆ ನೀನು ಬರುತ್ತೀಯ ಎಂದು ನನ್ನ ಸಹೋದ್ಯೋಗಿಯೊಬ್ಬರು ಕೇಳಿಕೊಂಡಿದ್ದರು. ಅವರಿಗೆ ಪರೀಕ್ಷೆಯ ಮೇಲ್ವಿಚಾರಣೆಯ ಹೊಣೆಗಾರಿಕೆಯೂ ಇತ್ತು. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕೇವಲ ಹತ್ತು ಹದಿನೈದು ಶೇಕಡಾ ಮಂದಿ ಮಾತ್ರ ಮುಸ್ಲಿಂ ಉದ್ಯೋಗಿಗಳಿದ್ದು ಎಲ್ಲರೂ ನಮ್ಮೊಂದಿಗೆ ಬಹಳ ಅನ್ಯೋನ್ಯವಾಗಿ ತಮ್ಮ ತಮ್ಮ ಸಂಪ್ರದಾಯ ಸಂಸ್ಕಾರಗಳಿಗೆ ಬಹಳ ಗೌರವ ಕೊಟ್ಟು ನೈಜ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಯಾವ ಆದರ್ಶವನ್ನು ಎತ್ತಿ ಹಿಡಿಯಬೇಕೋ ಹಾಗೆಯೇ ನಡೆದುಕೊಂಡಿದ್ದೆವು. ಆದರೆ ಹಿಜಾಬ್ ನ ಬಿಸಿ-ಬಿಸಿ ಚರ್ಚೆ ನಡೆಯುತ್ತಿದ್ದ ಆ ಸಂದರ್ಭದಲ್ಲಿ ನನ್ನೊಂದಿಗೆ ಬಹಳ ಅನ್ಯೋನ್ಯವಾಗಿದ್ದ ಆ ಶಿಕ್ಷಕಿಯೇ ನೀನು ಕರ್ತವ್ಯ ನಿರ್ವಹಿಸುವಾಗ ಈ ಶಿರವಸ್ತ್ರವನ್ನು ಕಳಚಿ ಬರಬೇಕು… ತಡವರಿಸುತ್ತಾ…..ಇಲ್ಲ ನಿನಗೆ ತೆಗೆಯಲಿಕ್ಕಾಗುವುದಾದರೆ ತೆಗೆದರೆ ಒಳ್ಳೆಯದಿತ್ತು. ಯಾಕೆಂದರೆ ಹಲವು ಸರಕಾರಿ ಅಧಿಕಾರಿಗಳು ನಮ್ಮ ಶಾಲೆಗೆ ಭೇಟಿ ನೀಡುತ್ತಾರೆ. ಈಗ ವಿದ್ಯಾರ್ಥಿಗಳಿಗೂ ಇದಕ್ಕೆ ಅವಕಾಶವಿಲ್ಲ ವಲ್ಲ ಎಂದರು. ಆ ಶಿಕ್ಷಕಿ ನನ್ನೊಂದಿಗೆ ಕೇಳಿದ ಪ್ರಶ್ನೆ, ಅಂದು ಹಲವು ಮುಸ್ಲಿಂ ಹುಡುಗಿಯರನ್ನು ನಡೆಸಿಕೊಂಡ ರೀತಿ ನಿಜಕ್ಕೂ ನಮ್ಮ ಸಮುದಾಯವನ್ನು ಅಸಹಾಯಕತೆಯ ಎಷ್ಟು ದೊಡ್ಡ ಪಾತಾಳಕ್ಕೆ ಈ ಸರಕಾರ ದೂಡಿ ಬಿಡುತ್ತಿದೆ ಎಂದು ಬಹಳ ಬೇಸರವಾಯಿತು.

ನಮ್ಮ ದೈನಂದಿನ ಚಟುವಟಿಕೆಗಳ ಆರಂಭಕ್ಕೆ ಹಸಿರು ನಿಶಾನಿಯಂತಿದ್ದ ಬೆಳಗಿನ ಆಝಾನ್ ನಿನಾದ, ನಮ್ಮ ಸಂಪ್ರದಾಯಗಳೊಂದಿಗೆ ಗಾಢ ತಳುಕಿರುವ ಹಲಾಲ್ ದಿಬ್ಹ, ನಮ್ಮ ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ, ಮಹತ್ವಕಾಂಕ್ಷೆಯ ಉದ್ಯೋಗ ಖಾತ್ರಿಗೆ ಜೀವಾಳವಾಗಿದ್ದ ಮೀಸಲಾತಿ…. ಹೀಗೆ ಒಂದೇ ಎರಡೇ? ಅಡಿಯಿಂದ ಮುಡಿತನಕ ಯಾವುದೇ ನಿಖರ ಕಾರಣಗಳಿಲ್ಲದಿದ್ದರೂ ಅದನ್ನು ಬಹಿಷ್ಕರಿಸುವ, ನಮ್ಮ ಸಂಪ್ರದಾಯವನ್ನು ಅಣಕಿಸುವ ಪ್ರಯತ್ನ, ಹಿಂದಿನ ಸರಕಾರದೊಂದಿಗೆ ಪ್ರಜ್ಞಾವಂತ ಸಮಾಜದ ನಾಗರಿಕರು ಎನ್ನುವ ಜನರು ಬಹಳ ಹೆಮ್ಮೆಯಿಂದಲೇ ಮಾಡುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದದ್ದು ನನ್ನ ಮಟ್ಟಿಗಂತೂ ಖಂಡಿತ ಅನಿರೀಕ್ಷಿತ ಮತ್ತು ಕಗ್ಗತ್ತಲಲ್ಲಿ ಮೂಡಿದ ಬೆಳ್ಳಿ ರೇಖೆ. ಆ ದಿನ ನನಗಾದ ಸಂತೋಷ ಸಮಾಧಾನಕ್ಕೆ ಪಾರವೇ ಇರಲಿಲ್ಲ. ಬೆಳಗ್ಗೆಯಿಂದ ಫಲಿತಾಂಶದ ಕೊನೆಯ ಘಟ್ಟದವರೆಗೂ ವಾರ್ತೆ ವಿದ್ಯಮಾನಗಳನ್ನು ಕೇಳಿ ಫಲಿತಾಂಶದ ಸ್ಪಷ್ಟತೆಯ ಅರಿವಾದಾಗ ಮನಸ್ಸಿನಲ್ಲಿ ನಿರಾಳ ಭಾವವೊಂದು ಮೂಡಿತು. ಆದರೆ ನನ್ನ ಆತ್ಮೀಯರೆನಿಸಿಕೊಂಡ ಕೆಲವು ಸಹೋದ್ಯೋಗಿಗಳ ಈಗಿನ ವಿರೋಧ ಪಕ್ಷವು ನಡೆಸಿದ ದಬ್ಬಾಳಿಕೆಯ ಆಡಳಿತದ ಹೊರತಾಗಿಯೂ ಅವರು ಗೆದ್ದು ಬರಬೇಕಿತ್ತೆoಬ ಬಯಕೆಯ ಪ್ರತಿಫಲನ ಅವರ ಸ್ಟೇಟಸ್ ಗಳಲ್ಲಿ ನೋಡಿ ಮನಸ್ಸಿಗೆ ಮರುಕವಾಯಿತು. ವಿದ್ಯಾವಂತರಾದ ನಾಗರಿಕರೆಲ್ಲರೂ, ಪ್ರಜ್ಞಾವಂತರೂ, ಜನಾನುರಾಗಿ, ಜನಹಿತ ಕಲ್ಯಾಣಕಾರಿ ಕೆಲಸ ಕಾರ್ಯಗಳನ್ನು ನೆಚ್ಚುವವರೂ, ಸಮಾಜದಲ್ಲಿ ಸಾಮರಸ್ಯದ ಬದುಕನ್ನು ಇಷ್ಟಪಡುವವರೂ ಅಲ್ಲ ಎಂಬ ಕಹಿ ಸತ್ಯವನ್ನು ನಾವು ಕಲ್ಪಿಸಿಕೊಳ್ಳಬೇಕಾಗಿಲ್ಲ. ಬದಲಾಗಿ ಇದು ನಮ್ಮ ಆಜು ಬಾಜಿನಲ್ಲೇ ನೋಡಲು ಸಿಗುವ ವಿದ್ಯಮಾನವಾಗಿದೆ ಎಂದು ಮನಸ್ಸಿಗೆ ಬಹಳ ಬೇಸರವಾಯಿತು. ಈ ಕೋಮು ದ್ವೇಷ, ವಿಭಜನೆಗಳಿಗೆ ಸೂಕ್ತ ಮದ್ದು ಯಾವಾಗ ಯಾರಿಂದ ಕಂಡು ಹಿಡಿಯಲು ಸಾಧ್ಯವಾಗಬಹುದು ಎಂಬ ಪ್ರಶ್ನೆ ಮನಸ್ಸನ್ನು ಕಾಡುತ್ತಲೇ ಇದೆ.

ಈ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀವೇಕೋ ತುಂಬಾ ನೆನಪಾದಿರಿ ಅಬ್ಬ. ಮುಸಲ್ಮಾನರ ಈ ಗುಂಪುಗಾರಿಕೆ, ಪಕ್ಷಪಾತೀ ನಿಲುವು, ಪರಸ್ಪರ ಮತ್ಸರ ವೈಷಮ್ಯಗಳು ಹೊಗೆಯಾಡುತ್ತಿದ್ದ ಈ ಚುನಾವಣಾ ಕಣದಲ್ಲಿ, ಬಾಹ್ಯ ಶತ್ರುವಿಗಿಂತ ಮುಸ್ಲಿಂ ಸಮಾಜದ ಐಕ್ಯವನ್ನು ಒಡೆಯುತ್ತಿರುವ ಈ ಆಂತರಿಕ ಶತ್ರುಗಳನ್ನು ಸದೆ ಬಡಿಯುವುದು ಒಂದು ಜಠಿಲ ಸಮಸ್ಯೆ ಆಗಿತ್ತು. ನಮ್ಮ ಸಮುದಾಯದ, ಸಂಘಟನೆಯ ನಾಯಕರಿಗೆ ಜನಮನ್ನಣೆ ಸಿಗಬೇಕಾದರೆ, ಅದು ಖಂಡಿತ ಕಷ್ಟದ ಕೆಲಸ ಎಂದು ಅದೇ ಉಳ್ಳಾಲ ಪರಿಸರದಲ್ಲಿ ಜಮಾತಿನ ಆರಂಭಿಕ ಹಂತದಲ್ಲಿ ತಂದೆಯವರೂ ಅವರ ಸಂಘಟನಾ ಕಾರ್ಯಕರ್ತರು ಎದುರಿಸಿದ ಸವಾಲುಗಳು, ಅದರ ಬಗ್ಗೆ ತಂದೆಯವರು ಹೇಳುತ್ತಿದ್ದ ವಿಚಾರಗಳು ನೆನಪಿಗೆ ಬಂತು.

ಹಾಗೆಯೇ ಮತದಾನ ಮಾಡುವ ದಿನ ಬಹಳ ಉತ್ಸಾಹದಿಂದ ಆರಂಭದ ಅವಧಿಯಲ್ಲಿ ಮತ ಚಲಾಯಿಸಿ ಪರಸ್ಪರರನ್ನು ಮತ ಚಲಾಯಿಸಲು, ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ತಂದೆಯವರು ತೋರುತ್ತಿದ್ದ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ. ಅದೇ ಪರಂಪರೆಯನ್ನು ಮುಂದುವರಿಸುವ ಮುತುವರ್ಜಿಯನ್ನು ಅವರ ಹಿರಿಯ ಮಗ ಈ ಬಾರಿಯ ಚುನಾವಣೆಯಲ್ಲಿ ತೋರಿಸಿದ್ದಲ್ಲದೆ ನಮ್ಮೆಲ್ಲರೊಂದಿಗೂ ಹಾಗೆ ಮಾಡಲು ಕೇಳಿಕೊಂಡಿದ್ದುದು ಅಭಿನಂದನಾರ್ಹ. ನಾನು ಮತದಾನ ಮಾಡಿ ನನ್ನ ಕೈ ಬೆರಳನ್ನು ನೋಡಿದಾಗ, ತಂದೆಯವರು ಮತದಾನದ ಸಂದರ್ಭದಲ್ಲಿ ತಮ್ಮ ಬೆರಳಿಗೆ ಹಚ್ಚಿದ ಮತದಾನ ಮಾಡಿದ ಗುರುತಿನ ಶಾಹಿಯನ್ನು ಸ್ವಲ್ಪವೂ ಉಜ್ಜದೆ ಜಾಗರೂಕತೆಯಿಂದ ಕಾಪಾಡಿಕೊಳ್ಳುತ್ತಿದ್ದ ಆ ಕ್ಷಣದ ನೆನಪು ಕಣ್ಣ ಮುಂದೆ ತೇಲಿ ಬಂತು.

ಒಟ್ಟಿನಲ್ಲಿ ಈ ಚುನಾವಣಾ ಫಲಿತಾಂಶ ನನ್ನಬ್ಬನವರನ್ನು ಖಂಡಿತ ಸಂತುಷ್ಟ ಗೊಳಿಸುತ್ತಿತ್ತೇನೋ…. ಯಾರೇ ಆಡಳಿತದ ಚುಕ್ಕಾಣಿ ಹಿಡಿಯಲಿ, ಸಾಮರಸ್ಯದ, ನೆಮ್ಮದಿಯ ಬದುಕು ಎಲ್ಲರಿಗೂ ಸಿಗುವಂತಾಗಲಿ ಎಂಬ ತಂದೆಯವರ ಆಶಯ ನೆರವೇರಲಿ. ‘ ತು ಹಿಂದು ಬನೇಗಾ ನ ಮುಸಲ್ಮಾನ್ ಬನೇಗಾ ಇನ್ ಸಾನ್ ಕಿ ಅವ್ ಲಾದ್ ಹೈ ತು ಇನ್ಸಾನ್ ಬನೇಗಾ….’ ಎಂಬ ಮೊಹಮ್ಮದ್ ರಫಿ ಅವರು ಹಾಡಿದ ನನ್ನ ತಂದೆಯವರ ನೆಚ್ಚಿನ ಗೀತೆ ನನ್ನ ಕಿವಿಗಳಲ್ಲಿ ಗುನುಗುಣಿಸಿದಂತೆ ಭಾಸವಾಯಿತು.

  • ಲುಬ್ನ ಝಕೀಯ್ಯ