ಸಾಲದ ವ್ಯವಹಾರ: ಸಾಕ್ಷ್ಯ, ಅವಧಿ ನಿರ್ಣಯ

0
176

ಸನ್ಮಾರ್ಗ ವಾರ್ತೆ

ಹಣ, ಸಂಪತ್ತು, ಕುಟುಂಬ, ಉತ್ತಮ ಸ್ನೇಹಿತರು ಮಾನವನಿಗೆ ಲಭಿಸುವ ಅತಿ ದೊಡ್ಡ ಅನುಗ್ರಹ. ಅವುಗಳನ್ನು ಧಾರ್ಮಿಕ ಮಾರ್ಗದರ್ಶನದಂತೆ ಸರಿಯಾದ ರೀತಿಯಲ್ಲಿ ನಿಭಾಯಿಸುವವರಿಗೆ ಮಾತ್ರ ಸಮಾಜದಲ್ಲಿ ಗೌರವ, ಘನತೆ, ಸಮೃದ್ಧಿ ಮತ್ತು ಉತ್ತಮ ಬಾಂಧವ್ಯ ಇರುವುದು. ಸಮಾಜದಲ್ಲಿ ಎಲ್ಲರೊಂದಿಗೆ ಜೀವಿಸುವಾಗ ತಮ್ಮ ಅಗತ್ಯಗಳನ್ನು ಪೂರೈಸಲು ಕೆಲವೊಮ್ಮೆ ಪರಸ್ಪರ ಹಣಕಾಸಿನ ಸಹಾಯ ಮತ್ತು ಸಾಲ ರೂಪದಲ್ಲಿ ಸಹಕಾರದ ಅಗತ್ಯವಿರುತ್ತದೆ. ಹಾಗಿದ್ದರೆ ಮಾತ್ರ ನಮಗೆ ಸಂತೋಷದಿಂದ ಜೀವಿಸಲು ಸಾಧ್ಯ.

ಜನರಿಗೆ ಅಗತ್ಯದ ಸಂದರ್ಭಗಳಲ್ಲಿ ನಿರ್ದಿಷ್ಟಾವಧಿಗೆ ಸಾಲ ನೀಡುವುದು ಅತ್ಯಂತ ಮಹತ್ವ ಮತ್ತು ಪುಣ್ಯ ಕಾರ್ಯವಾಗಿದೆ. ಅಗತ್ಯವಿರುವವರಿಗೆ ಸಾಲ ನೀಡುವುದನ್ನು ಕೂಡಾ ಇಸ್ಲಾಂ ಧರ್ಮ ಪ್ರೋತ್ಸಾಹಿಸುತ್ತದೆ. ಹೆಚ್ಚಿನವರಿಗೆ ಸಾಲ ಪಡೆಯುವಾಗ ಇರುವ ಗಂಭೀರತೆ, ಜವಾಬ್ದಾರಿ ಪ್ರಜ್ಞೆಯು ಮರಳಿಸುವ ವಿಷಯದಲ್ಲಿ ಇರುವುದಿಲ್ಲ. ಪವಿತ್ರ ಕುರ್ ಆನ್ ನ ಅತಿ ದೊಡ್ಡ ಸೂಕ್ತವು ಸಾಲದ ವ್ಯವಹಾರದ ಬಗ್ಗೆ ಚರ್ಚಿಸುತ್ತದೆ. ಆಧುನಿಕ ಕಾಲದಲ್ಲಿ ಉತ್ತಮ ಸಾಮಾಜಿಕ ವ್ಯವಹಾರವನ್ನು ನಿರ್ಮಿಸುವಲ್ಲಿ ಈ ಸೂಕ್ತದ ನಿರ್ದೇಶನಗಳು ನ್ಯಾಯಬದ್ಧವೂ ಯುಕ್ತಿಪೂರ್ಣವೂ ಆಗಿದೆ.

ಇಸ್ಲಾಮ್ ಧರ್ಮವು ಯಾವುದೇ ವ್ಯವಹಾರ, ಕರಾರು, ಒಪ್ಪಂದಗಳನ್ನು ಬರೆದಿಡಲು ಆಜ್ಞಾಪಿಸುತ್ತದೆ. ಸಾಲದ ವ್ಯವಹಾರ ಮಾಡುವಾಗ ಸಾಕ್ಷಿದಾರರ ಸಹಿಯೊಂದಿಗೆ ಒಪ್ಪಂದಗಳನ್ನು ಬರೆಯುಲು ಅರ್ಹತೆ ಇರುವ ತಜ್ಞರನ್ನು ಆಯ್ಕೆ ಮಾಡುವುದು ಉತ್ತಮವಾಗಿದೆ.

“ಓ ಸತ್ಯವಿಶ್ವಾಸಿಗಳೇ! ನೀವು ಅವಧಿಯನ್ನು ನಿಶ್ಚಯಿಸಿಕೊಂಡು ಪರಸ್ಪರ ಸಾಲದ ಲೇವಾದೇವಿ ಮಾಡುವಾಗ ಅದನ್ನು ಬರೆದಿಟ್ಟುಕೊಳ್ಳಿರಿ…..ಸಾಲಕ್ಕೆ ಬಾಧ್ಯಸ್ಥನಾದವನು (ಸಾಲ ಪಡೆಯುವಾತನು) ಒಕ್ಕಣೆಯನ್ನು ಬರೆಯಿಸಬೇಕು…….ಅನಂತರ ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಯಾಗಿರಿಸಿಕೊಳ್ಳಬೇಕು. ಇಬ್ಬರು ಪುರುಷರು ಸಿಗದಿದ್ದರೆ, ಒಬ್ಬ ಪುರುಷನೂ ಇಬ್ಬರು ಸ್ತ್ರೀಯರೂ ಬೇಕು. ಇದು ಒಬ್ಬಳು ಮರೆತು ಬಿಟ್ಟರೆ ಇನ್ನೊಬ್ಬಳು ನೆನಪಿಗೆ ತರಲಿಕ್ಕಾಗಿ…….. ವ್ಯವಹಾರವು ಚಿಕ್ಕದಿರಲಿ ಅಥವಾ ದೊಡ್ಡದಿರಲಿ-ಅವಧಿಯ ನಿರ್ಣಯದೊಂದಿಗೆ ಅದರ ಕರಾರು ಪತ್ರವನ್ನು ಬರೆಯಿಸಿಕೊಳ್ಳುವುದರ ಬಗ್ಗೆ ಉದಾಸೀನರಾಗದಿರಿ…..” (ಪವಿತ್ರ ಕುರ್ ಆನ್ :282)

ಸಾಲದ ವ್ಯವಹಾರ ಮಾಡುವಾಗ ಮರುಪಾವತಿಯ ಅವಧಿ ಮತ್ತು ರೀತಿಯನ್ನು ಮೊದಲೇ ನಿಶ್ಚಯಿಸಬೇಕು. ದೀರ್ಘ ಕಾಲದ ಸಾಲದ ವ್ಯವಹಾರ ಮಾಡಲು ಯಾರೂ ತಯಾರಿರುವುದಿಲ್ಲ. ಹಣದ ಮೌಲ್ಯ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯಲ್ಲಿ ಏರು ಪೇರುಗಳಾಗುತ್ತಿರುತ್ತದೆ. ಎಲ್ಲರಿಗೂ ತಮ್ಮ ಜವಾಬ್ದಾರಿ ನಿರ್ವಹಿಸಲು, ವ್ಯವಹಾರ, ಹೂಡಿಕೆ ಮಾಡಲು ಹಣದ ಅಗತ್ಯವಿರುತ್ತದೆ.

ಸಾಲ ನೀಡುವಾಗ ಸಾಲಗಾರನ ಅಗತ್ಯ ಮತ್ತು ಬೇಡಿಕೆಗಳನ್ನು ಪರಿಗಣಿಸಿ ನೀಡಿರಿ. ಸಾಲಗಾರನ ಬೇಡಿಕೆಯು ಅತೀ ಅಗತ್ಯವಾಗಿದ್ದರೆ ಮಾತ್ರ ನೀಡಿರಿ. ಇಲ್ಲವೆಂದಾದರೆ ಅತ್ಯುತ್ತಮ ಉಪದೇಶ ನೀಡಿ ಸಾಲಾಗಾರನಾಗದಂತೆ ಮಾರ್ಗದರ್ಶನ ಮಾಡಿರಿ. ನಿಮ್ಮ ಮೂಲಭೂತ ಬೇಡಿಕೆ ಅಗತ್ಯಗಳಿಗೆ ಬೇಕಾದಷ್ಟು ಹಣವನ್ನು ಇಟ್ಟು ಅಗತ್ಯಕ್ಕಿಂತ ಹೆಚ್ಚು ಇರುವುದರಲ್ಲಿ ಒಂದಲ್ಪ ಭಾಗವನ್ನು ಸಾಲ ನೀಡಿರಿ. ಸಾಲಗಾರನು ಮರುಪಾವತಿ ಮಾಡುವವರೆಗೆ ಸಹನೆ ಮತ್ತು ತಾಳ್ಮೆಯಿಂದ ಸಮಯವನ್ನು ನೀಡಿರಿ.

ಸಾಲ ನೀಡಿ ಅಮೂಲ್ಯವಾದ ಸಂಬಂಧವನ್ನು ಎಂದೂ ಕಳೆದುಕೊಳ್ಳಬೇಡಿರಿ. ಸಾಲ ನೀಡುವಾಗ ಮತ್ತು ಪಡೆಯುವಾಗ ಆಪ್ತ ಬಂಧುಗಳಿಗೆ ಅಲ್ಲವೇ? ಪರಸ್ಪರ ವಿಶ್ವಾಸ ಇಲ್ಲವೇ? ಲಿಖಿತ ದಾಖಲೆ, ಸಾಕ್ಷ್ಯ ಯಾಕೆ ಎಂದು ಪ್ರಶ್ನಿಸಬೇಡಿರಿ. ಇದು ಅಲ್ಲಾಹನ ಆಜ್ಞೆಯಾಗಿದೆ. ಅದನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಮನುಷ್ಯರು ಕೆಲವೊಮ್ಮೆ ಮರೆತು ಬಿಡುವುದು ಸಹಜವಾಗಿದೆ. ನಮ್ಮ ಸಮಾಜದಲ್ಲಿ ಲಿಖಿತ ದಾಖಲೆಗಳಿಲ್ಲದೆ ಸಾಲ ನೀಡಿ ಸಹಾಯ ಮಾಡಿ ನೋವು ಅನುಭವಿಸುವ ಎಷ್ಟೋ ಜನರನ್ನು ಕಾಣಬಹುದಾಗಿದೆ. ನಿಶ್ಚಯಿಸಿದ ಅವಧಿಯಲ್ಲಿ ಸಾಲ ಮರುಪಾವತಿ ಸಾಧ್ಯವಾಗದಿದ್ದರೆ ಸಾಲ ಪಡೆದವನು ಇನ್ನು ಸ್ವಲ್ಪ ಕಾಲಾವಕಾಶವನ್ನು ನೀಡಲು ವಿನಂತಿಸಬೇಕು. ಸಾಲ ನೀಡಿದವನು ತನ್ನ ಹಣವನ್ನು ಮರಳಿ ಪಡೆಯಲು ಭಿಕ್ಷೆ ಬೇಡುವಂತಾಗಬಾರದು. ಹಣ ಉಳಿತಾಯ ಮಾಡುವವರು ಬಹಳ ಜಾಗರೂಕತೆಯಿಂದ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಾರೆ. ಹಣ ಸಂಪದಿಸುವಾಗಲೂ ಕಷ್ಟ ಪಟ್ಟು ಸಂಪಾದಿಸುತ್ತಾರೆ.

ಮರಣ ಹೊಂದಿದವನ ಸಾಲ ಸಂದಾಯ ಮಾಡಿದ ನಂತರವೇ ಅವನ ಸೊತ್ತು ವಿತರಣೆ ಮಾಡಬೇಕೆಂದು ಪವಿತ್ರ ಕುರ್ ಆನ್ ನಲ್ಲಿ ಆಜ್ಞಾಪಿಸಲಾಗಿದೆ. ತಂದೆಯು ಮಾಡಿದ ಯಾವುದೇ ಸಾಲಗಳಿಗೆ ಮಕ್ಕಳು ಜವಾಬ್ದಾರರಾಗಿರುವುದಿಲ್ಲ. ಮನುಷ್ಯನಿಗೆ ಜೀವಿಸಲು ಬೇಕಾಗಿರುವುದು ಮೈ ಮರೆಸಲು ಎರಡು ತುಂಡು ವಸ್ತ್ರ, ಬಿಸಿಲು ಮಳೆಯಿಂದ ರಕ್ಷಣೆ ಹೊಂದಲು ಸಣ್ಣದಾದ ಮನೆ, ದೈನಂದಿನ ಚಟುವಟಿಕೆಗಳನ್ನು ನಡೆಸಲು ಅತ್ಯುತ್ತಮ ವಿದ್ಯಾಭ್ಯಾಸ, ಆರೋಗ್ಯವನ್ನು ಕಾಪಾಡಲು ಶುದ್ದವಾದ ಉಟೋಪಾಚಾರ ಮಾತ್ರ. ಸಾಲ ಮಾಡಿ ವ್ಯಾಪಾರದಲ್ಲಿ ಶೀಘ್ರ ಲಾಭ ಪಡೆಯುವ ಕನಸನ್ನು ಕಾಣಬೇಡಿರಿ. ಸಾಲವನ್ನು ಬಾಕಿಯಿಟ್ಟು ಎಲ್ಲಾ ಖರ್ಚುಗಳನ್ನು ಮಾಡುತ್ತಾ ಹೋಗಬೇಡಿರಿ.

ಸಾಲಗಾರನಾದರೆ ಭವಿಷ್ಯದ ಪರಿಣಾಮ, ದುಃಸ್ಥಿತಿ, ಸಂಕಟ ವಿವರಿಸಲಸಾಧ್ಯ. ಸಾಲವು ಮಾನಸಿಕ ಒತ್ತಡವನ್ನು, ನಿದ್ರಾಹೀನತೆಯನ್ನು ಉಂಟು ಮಾಡುತ್ತದೆ. ಇದರಿಂದ ಶರೀರದಲ್ಲಿ ವಿವಿಧ ರೀತಿಯ ಜೀವನ ಶೈಲಿ ರೋಗಗಳಿಗೆ ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಅಸಾಧ್ಯವಾದರೆ ಮಾತನಾಡುವಾಗ ಸುಳ್ಳು ಹೇಳುವಂತೆ, ವಾಗ್ದಾನವನ್ನು ಪೂರೈಸದಿರುವಂತೆ ಮಾಡುತ್ತದೆ. ಪತಿ ಪತ್ನಿ, ತಂದೆ ತಾಯಿ ಮಕ್ಕಳು, ಸಹೋದರ ಸಹೋದರಿಯರ ಸಂಬಂಧ ಕೆಡಲು ಮಿತಿಮೀರಿದ ಖರ್ಚು ಮತ್ತು ಸಾಲದ ವ್ಯವಹಾರ ಕೂಡ ಒಂದು ಕಾರಣವಾಗಿರುತ್ತದೆ.

ಉತ್ತಮ ಸಂಬಂಧಗಳಿರುವಾಗ ಆರಂಭವಾದ ಸಾಲದ ವ್ಯವಹಾರವು ಕೋಪ, ಜಗಳದಲ್ಲಿ ಅಂತ್ಯವಾಗದಂತೆ ಜಾಕರೂಕತೆ ವಹಿಸಬೇಕು. ನಮಗೆ ನಿಭಾಯಿಸಲು ಸಾಧ್ಯವಿಲ್ಲದ ಯಾವುದೇ ಭಾರವನ್ನು ನಮ್ಮ ಮೇಲೆ ಎಳೆದು ಹಾಕಬಾರದು. ನಮ್ಮ ಎಲ್ಲ ಖರ್ಚು ವೆಚ್ಚಗಳು ಆದಾಯಕ್ಕೆ ಅನುಗುಣವಾಗಿರಬೇಕು. ವಿವಾಹ, ಚಿನ್ನಾಭರಣ, ಉಡುಗೊರೆ, ಮನೆ ನಿರ್ಮಾಣ, ಸ್ವಂತ ವಾಹನ, ಐಶಾರಾಮ ಜೀವನ ಮತ್ತು ಸೌಕರ್ಯಗಳು ಒಂದು ದೊಡ್ಡ ವಿಭಾಗವನ್ನು ಸಾಲಗಾರರಾಗಿ ಮಾಡುತ್ತದೆ. ನಮ್ಮ ಬಜೆಟ್ ಗಿಂತ ಮಿತಿ ಮೀರಿದ ವಿವಾಹ ಹಾಗೂ ಮನೆ ನಿರ್ಮಾಣದ ಖರ್ಚನ್ನು ನಿಯಂತ್ರಿಸದಿದ್ದರೆ ಜೀವನದಲ್ಲಿ ನಮಗೆ ಅಪಾಯ ತಪ್ಪಿದ್ದಲ್ಲ.

ಆದುದರಿಂದ ಮನೆ ನಿರ್ಮಾಣ, ವಿವಾಹದ ಖರ್ಚು ವೆಚ್ಚಗಳನ್ನು ಪರಸ್ಪರ ಸೂಕ್ತ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬಹಳ ಜಾಗರೂಕತೆಯಿಂದ ಯೋಜನೆಯನ್ನು ರೂಪಿಸಬೇಕು. ಎಲ್ಲದಕ್ಕೂ ಸಾಲ ಪಡೆದು ಅಗತ್ಯದ ಸಮಯದಲ್ಲಿ ಜನರು ಸಾಲ ನೀಡಲು ಹಿಂಜರಿಯುವಂತಹ ಪರಿಸ್ಥಿತಿ ಉಂಟು ಮಾಡಬಾರದು.

ಜನರು ಸಾಲ ಮರುಪಾವತಿಯ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವಂತಹ ಕಾಲಘಟ್ಟದಲ್ಲಿ ನಾವು ವಾಸಿಸುತ್ತಿದ್ದೇವೆ. ಕಾಣುವುದೆಲ್ಲವೂ ಸುಂದರವಾಗಿರಬೇಕು, ಅತಿಯಾಸೆ, ಇಹಲೋಕದ ಮೇಲಿನ ಅತಿಯಾದ ಪ್ರೀತಿ ಮನುಷ್ಯನನ್ನು ಸಾಲ ಪಡೆದು ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ. ಕೆಲವೊಮ್ಮೆ ತಮ್ಮ ಅಗತ್ಯಗಳನ್ನು ಪೂರೈಸಲು ಕಷ್ಟ ಪಡಬೇಕಾಗಿರುವುದು ಅನಿವಾರ್ಯವಾಗಿರುತ್ತದೆ. ನಮ್ಮಲ್ಲಿರುವುದು ಹಳತ್ತಾಗಿದ್ದರೂ, ಕಳಪೆ ಗುಣಮಟ್ಟದ್ದಾಗಿದ್ದರೂ, ಸಣ್ಣದಾದರೂ, ದೊಡ್ಡದಾದರೂ, ಲೋಪದೊಷಗಳಿದ್ದರೂ ಎಲ್ಲವನ್ನೂ ಅಂಗೀಕರಿಸಬೇಕು. ಮನೆ, ವಾಹನ, ವ್ಯಾಪಾರ, ಉದ್ಯೋಗ, ಆಹಾರ, ಮಕ್ಕಳು ಎಲ್ಲವನ್ನೂ ಅನುಗ್ರಹವಾಗಿ ಪರಿಗಣಿಸಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಾ ಸಂತೃಪ್ತರಾಗಬೇಕು.

ಖದೀಜ ನುಸ್ರತ್

LEAVE A REPLY

Please enter your comment!
Please enter your name here