“ಮುಸ್ಲಿಮರ ಹಕ್ಕು ಮಾನವ ಹಕ್ಕಲ್ಲವೇ?”; ಶರ್ಜೀಲ್ ಇಮಾಮ್ ಸಹೋದರನ ಪ್ರಶ್ನೆ

0
165

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಜೆ.ಎನ್.ಯು ವಿದ್ಯಾರ್ಥಿ ಹಾಗೂ ವಿಚಾರಣಾಧೀನ ಕೈದಿಯಾಗಿರುವ ಶರ್ಜೀಲ್ ಇಮಾಮ್ ವಿರುದ್ಧ ಸಂಘ ಪರಿವಾರ ಬೆಂಬಲಿತ ಕೇಂದ್ರಗಳಿಂದ ವ್ಯಾಪಕವಾದ ದ್ವೇಷಪೂರಿತ ಅಪಪ್ರಚಾರ ಮುಂದುವರಿಯುತ್ತಿದ್ದು ಇದನ್ನು ಅವರ ಸಹೋದರ ಮುಝಮ್ಮಿಲ್ ಇಮಾಮ್ ಪ್ರಶ್ನಿಸಿದ್ದಾರೆ.

ಮುಸ್ಲಿಮರ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಗೆ ಒಳಪಡುವುದಿಲ್ಲವೇ? ಇತಿಹಾಸದ ಕುರಿತು ಭಿನ್ನ ಅಭಿಪ್ರಾಯವನ್ನು ಪ್ರಕಟಿಸಬಹುದು. ಅದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪ್ರಜೆಗಳಿಗೆ ನೀಡಲಾದ ಹಕ್ಕುಗಳ ಭಾಗವಾಗಿದೆ ಎಂದು ಮುಝಮ್ಮಿಲ್ ಇಮಾಮ್ ಹೇಳಿದರು.

ಶರ್ಜೀಲ್ ಇಮಾಮ್ ಅವರು ಜಾಮೀನು ಪಡೆದು ಹೊರಬಂದ್ದಿದಾಗ ನೀಡಿದ್ದ ಸಂದರ್ಶನವೊಂದನ್ನು ತಿರುಚಿ, ತಪ್ಪಾಗಿ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ದೊಡ್ಡ ಮಟ್ಟದ ದ್ವೇಷಪೂರಿತ ಪ್ರಚಾರ ಮತ್ತು ಸಂಘಟಿತ ದಾಳಿಗಳನ್ನು ನಡೆಸಲಾಗಿತ್ತು. ಇದಕ್ಕೆ ಉತ್ತರವಾಗಿ ಶಾರ್ಜಿಲ್ ಸಹೋದರ ಮುಝಮ್ಮಿಲ್ ಒಂದು ನಿರ್ದಿಷ್ಟ ಸಮುದಾಯದ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಮಾತ್ರ ಶರ್ಜೀಲ್ ಅವರನ್ನು ‘ಇಸ್ಲಾಮಿಸ್ಟ್’ ಎಂದು ಮುದ್ರೆ ಒತ್ತಿ ಬೇಟೆಯಾಡುತ್ತಿರುವುದು ಏಕೆ ಎಂದು ಅವರು ಟೀಕಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿ ದೇಶದಲ್ಲಿ ತಲೆಮಾರುಗಳಿಂದ ಮುಸ್ಲಿಮರು ಎದುರಿಸುತ್ತಿರುವ ಅನುಭವಗಳು ಮತ್ತು ವಾಸ್ತವಗಳನ್ನು ಶರ್ಜೀಲ್ ಅವರ ರಾಜಕೀಯ ನಿಲುವುಗಳಲ್ಲಿ ಪ್ರತಿಫಲಿಸುತ್ತಿವೆ ಎಂದು ಮುಝಮ್ಮಿಲ್ ಬೆಟ್ಟು ಮಾಡಿದ್ದಾರೆ. ಶರ್ಜೀಲ್ ಇಮಾಮ್ ಅವರ ರಾಜಕೀಯ ಮತ್ತು ಇತರ ನಿಲುವುಗಳೊಂದಿಗೆ ನಿಮಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಎತ್ತುತ್ತಿರುವ ಸಾಮಾಜಿಕ ಪ್ರಶ್ನೆಗಳು ಮತ್ತು ಹಿನ್ನೆಲೆಯನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದು ಮುಝಮ್ಮಿಲ್ ಒತ್ತಾಯಿಸಿದ್ದಾರೆ.