ಗಾಂಧೀಜಿಯವರ ದೃಷ್ಟಿಯಲ್ಲಿ ಮಾದರೀ ಮಹಿಳೆ

0
852

-ಹಫ್ಸಾ ಬಾನು ಬೆಂಗಳೂರು

ಮಹಿಳೆಯರನ್ನು ಶೋಷಿತರನ್ನಾಗಿಸಿದ ಆ ಕಾಲದಲ್ಲೂ ಗಾಂಧೀಜಿಯವರು ಮಹಿಳೆಗೆ ಕೊಟ್ಟಿರುವುದು ನಿಜವಾಗಿಯೂ ಬಹಳ ದೊಡ್ಡ ಕೊಡುಗೆಯೇ. ಮಹಿಳಾ ಹೋರಾಟಕ್ಕೆ ಅವರು ನೈತಿಕತೆಯ ಮುದ್ರೆಯನ್ನೇ ಒತ್ತಿಬಿಟ್ಟಿದ್ದರು. ಇಂದಿಗೂ ಯಾರೇ ಆಗಲೀ ಮಹಿಳೆಯರ ಮೂಲಭೂತ ಹಕ್ಕುಗಳನ್ನು ವಿರೋಧಿಸಲು ಸಾಧ್ಯವೇ ಇಲ್ಲ. ಅಂಥದೊಂದು ಸಾಮಾಜಿಕ ರಾಜಕೀಯ ಸನ್ನಿವೇಶವನ್ನು ಮಹಿಳೆಯರಿಗೆ ಅನುಕೂಲಕರವಾಗುವಂತೆ ಗಾಂಧೀಜಿಯವರು ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಇದನ್ನು ವಿರೋಧಿಸಿದವನೊಬ್ಬ

ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ನೀಡಿದರೇ.. ಅದು ಅನೈತಿಕತೆಗೆ ದಾರಿ ಮಾಡಿ ಕೊಡುವುದಿಲ್ಲವೇನು..? ಎಂದು ಕೇಳಿದ ಪ್ರಶ್ನೆಗೆ. ಖಡಾಖಂಡಿತವಾಗಿ ಗಾಂಧೀಜಿಯವರು ನೀಡಿದ ಉತ್ತರವೂ ಹೀಗಿತ್ತು.

ಯಾಕೆ ಹಾಗೆ ಕೇಳುತ್ತೀರಿ..? ಗಂಡಸಿಗಿರುವ ಸ್ವಾತಂತ್ರ್ಯ ಹಾಗೂ ಆಸ್ತಿಹಕ್ಕಿನಿಂದ ಅವನಲ್ಲೂ ಅನೈತಿಕತೆ ವ್ಯಾಪಕವಾಗಿಯೇ ಇಲ್ಲವೇನು..? ಪುರುಷನಂತೆ ಮಹಿಳೆಗೂ ಎಲ್ಲಾ ಹಕ್ಕುಗಳೂ ದೊರೆಯಲಿ. ಅದರಿಂದ ಆಕೆ ಸ್ವೇಚ್ಛಾಪ್ರವೃತ್ತಿಯವಳೆಂದೂ ಆಗಲಾರಳು ಎಂದಿದ್ದರು.

ವೈಯಕ್ತಿಕ ಸಂಬಂಧಗಳಲ್ಲಿ ಕೆಲವೊಮ್ಮೆ ‘ಅದು ಹೆಂಗಸರ ಗುಣಗಳು’ ಎಂದು ಗಂಡಸರು ತಿರಸ್ಕರಿಸುವ ಕೆಲವೊಂದು ಗುಣಗಳಿಗೂ.. ಗಾಂಧೀಜಿಯವರು ಉದ್ದೇಶ ಪೂರ್ವಕವಾಗಿ ಮಹತ್ವವನ್ನೇ ನೀಡಿದ್ದರು. ತಮಗೂ ತಮ್ಮ ಮನೆಯ ಮಹಿಳೆಯರೇ ಮಾದರಿ ಎಂಬುದನ್ನು ಸಹ ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದ ಮಹಾನ್ ವ್ಯಕ್ತಿತ್ವವು ಗಾಂಧೀಜಿಯವರದಾಗಿತ್ತು.

ಮಹಿಳೆ ಹಾಗೂ ಅವಳ ಸ್ಥಾನಮಾನಗಳನ್ನು ಕುರಿತಂತೆ ಗಾಂಧೀಜಿಯವರ ವಿಚಾರಧಾರೆಯು ಮನನೀಯವಾಗಿವೆ. ಅವರ ಪ್ರಕಾರ ಮಹಿಳೆಯು ಸುಧಾರಣೆಗೆ ಒಳಗಾಗಬೇಕಾದ ವಸ್ತು ಖಂಡಿತಾ ಅಲ್ಲ. ಅಂತೆಯೇ ಪುರುಷರ ಉದಾರ ಕಾಳಜಿಯನ್ನು ಬಯಸುವ ಅಸಹಾಯಕ ಜೀವಿಯೂ ಅಲ್ಲ. ಬದಲಿಗೆ ಆಕೆ ಒಂದು ಧೀಮಂತ ಚೇತನ, ಸಹನೆ, ತ್ಯಾಗ, ದೃಢತೆಯಿಂದ ಸದಾ ಕ್ರಿಯಾಶೀಲಳೂ ಆತ್ಮಪ್ರಜ್ಞೆಯುಳ್ಳವಳೂ ಆದ ವಿಶ್ವಾಸಾರ್ಹ ಒಬ್ಬ ಸಶಕ್ತ ವ್ಯಕ್ತಿ. ಅಲ್ಲದೆ ಸಾಮಾಜಿಕ ನವನಿರ್ಮಾಣದ ಕೆಲಸವನ್ನು ನಿಸ್ವಾರ್ಥ ದೃಷ್ಟಿಯಿಂದ ನೆರವೇರಿಸುವ ಶಕ್ತಿಯೂ ಮಹಿಳೆಯರಲ್ಲಿ ಅಪಾರವಾಗಿದೆ ಎಂದವರು ದೃಢವಾಗಿ ನಂಬಿದ್ದರು.

ಮಹಾಸಂಗ್ರಾಮದ ವಿರುದ್ಧ ನಡೆಯುವ ಹೋರಾಟದಲ್ಲಿ ವಿಶ್ವದ ಮಹಿಳೆಯರೇ ನೇತೃತ್ವ ವಹಿಸಬೇಕೆಂದೂ.. ಅದು ಮಹಿಳೆಯರ ವಿಶೇಷ ಹಕ್ಕು ಕೂಡ ಎಂದು ಅಭಿಮಾನದಿಂದ ಗಾಂಧೀಜಿಯವರು ನುಡಿಯುತ್ತಿದ್ದರು. ಪುರುಷರಾಗಿಯೂ ಬಹಳ ಮಮತಾಮಯಿ ವ್ಯಕ್ತಿತ್ವ ಗಾಂಧೀಜಿಯವರದ್ದಾಗಿತ್ತು.

ಬಾಪೂಜಿಯವರು ತೋರಿಸಿದ ಬೆಳಕಿನ ಪಥದಲ್ಲಿ ಹೆಮ್ಮೆಯಿಂದ ಸಂಚರಿಸುತ್ತಾ.. ನಮ್ಮ ದೇಶವನ್ನು ಬಾಪು ಕಂಡ ಕನಸಿನ ಭಾರತವನ್ನಾಗಿಸಲು ಪಣತೊಡಲು ಭಾರತದ ಸರ್ವ ಮಹಿಳೆಯರೂ ಮುಂದಾಗಬೇಕಿದೆ.