ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್,ಅ.1:ವಿಶ್ವಸಂಸ್ಥೆಯ ತನ್ನ ಖಾಯಂ ಪ್ರತಿನಿಧಿ ಸ್ಥಾನದಿಂದ ಡಾ. ಮಲೀಹಾ ಲೋದಿಯನ್ನು ಬದಲಿಸಿದ ಪಾಕ್, ಮುನೀರ್ ಅಕ್ರಮ್‍ರನ್ನು ನೇಮಿಸಿದೆ. ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಅಧಿವೇಶನ ಮುಗಿಸಿಕೊಂಡು ತಾಯ್ನೆಲಕ್ಕೆ ಮರಳಿದ ಬೆನ್ನಿಗೆ ಈ ಬದಲಾವಣೆ ಆಗಿದೆ.ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮನವರಿಕೆ ಮಾಡಿಕೊಡಲು ಡಾ.ಮಲೀಹಾ ವಿಫಲರಾಗಿದ್ದಾರೆ ಎನ್ನಲಾಗಿದೆ.
2002ರಿಂದ 2008ರವರೆಗೆ ಅಕ್ರಮ್ ವಿಶ್ವಸಂಸ್ಥೆಯ ಪಾಕಿಸ್ತಾನದ ಖಾಯಂ ಪ್ರತಿನಿಧಿಯಾಗಿದ್ದರು. ಬೆನಝೀರ್ ಭುಟ್ಟೊ ಕೊಲೆ ಪ್ರಕರಣದಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಿದಾಗ ಅಸಮಾಧಾನಗೊಂಡಿದ್ದ ಅಂದಿನ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅಕ್ರಮ್‌ರನ್ನು ಎತ್ತಂಗಡಿ ಮಾಡಿದ್ದರು.
ಈ ನಡುವೆ 2002 ಡಿಸೆಂಬರ್‌ನಲ್ಲಿ ಗೆಳತಿ ಮರಿಯಾ ಮಿಹಿಕ್ ಅಕ್ರಮ್ ವಿರುದ್ಧ ಗೃಹಹಿಂಸೆ ನೀಡಿದ್ದಾರೆಂಬ ಪ್ರಕರಣ ದಾಖಲಿಸಿದ್ದರು. ಇದು ಕೋರ್ಟಿನ ಹೊರಗೆ ರಾಜಿಯಲ್ಲಿ ಮುಗಿದಿತ್ತು.ರಾಜತಾಂತ್ರಿಕ ರಕ್ಷಣೆಯಿರುವುದರಿಂದ ಅಕ್ರಮ್ ವಿರುದ್ಧ ಆರೋಪ ಹೊರಿಸಿರಲಿಲ್ಲ ಎಂದೂ ವರದಿಯಾಗಿತ್ತು.
ವಿಶ್ವಸಂಸ್ಥೆಯ ಕೋರಿಕೆ ಮೇರೆಗೆ ಅವರನ್ನು ಅಲ್ಲಿಂದ ಪಾಕಿಸ್ತಾನ ಹಿಂದೆ ಕರೆಯಿಸಿಕೊಂಡಿತ್ತು. ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಕಲಿತಿದ್ದ ಅವರು ಪಾಲಿಟಿಕಲ್ ಸೈನ್ಸ್ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಈಗ ವಿದೇಶ ಸಚಿವಾಲಯದಲ್ಲಿ (ವಿಶ್ವಸಂಸ್ಥೆ) ಡೈರಕ್ಟರ್ ಜನರಲ್ ಆಗಿರುವ ಖಲೀಲ್ ಅಹ್ಮದ್ ಹಾಶ್ಮಿಯವರನ್ನು ಜಿನಿವಾದ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿ ನೇಮಕಗೊಳಿಸಲಾಗಿದೆ.












