ಸನ್ಮಾರ್ಗ ವಾರ್ತೆ
ಮಂಗಳೂರು: ಸನ್ಮಾರ್ಗ ಪತ್ರಿಕೆಯ ಚಾಲಕ ಶಕ್ತಿಯಾಗಿದ್ದ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯರೂ ಆಗಿದ್ದ ದಿ| ಕೆ.ಎಂ. ಶರೀಫ್ ಅವರ ಪತ್ನಿ ಮೈಮುನಾ (75) ಅವರು ಕೆಲ ಕಾಲದ ಅಸ್ವಾಸ್ತ್ಯದ ಬಳಿಕ ಮಾರ್ಚ್ 31ರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಪತಿ ಕೆ.ಎಂ. ಶರೀಫ್ ಅವರು ಬದುಕಿದ್ದ ಸಮಯದಲ್ಲಿ ಅವರ ಪ್ರತಿ ಚಟುವಟಿಕೆಗೂ ಬೆನ್ನೆಲುಬಾಗಿ ನಿಂತಿದ್ದರು. ಜಮಾಅತೆ ಇಸ್ಲಾಮಿ ಹಿಂದ್ನ ಬೆಳವಣಿಗೆಯಲ್ಲಿ ಮತ್ತು ಅದರ ಪ್ರಚಾರದಲ್ಲಿ ಸಕ್ರಿಯರಾಗಿದ್ದ ಇವರು, ಜಮಾಅತ್ಗಾಗಿ ಪತಿ ನಡೆಸುತ್ತಿದ್ದ ತ್ಯಾಗ ಮತ್ತು ಪರಿಶ್ರಮಕ್ಕೆ ತುಂಬು ಬೆಂಬಲವನ್ನು ನೀಡುತ್ತಿದ್ದರು. ಸನ್ಮಾರ್ಗ ಮತ್ತು ಅನುಪಮದ ಓದುಗರಾಗಿದ್ದರು. ಅವರ ಮಗ ಅಶ್ಫಾಕ್ ಅಹಮದ್ ಅವರು ಎಸ್ಐಓ ರಾಷ್ಟ್ರಾಧ್ಯಕ್ಷರಾಗಿ ದುಡಿದವರಾಗಿದ್ದು, ಅವರ ಪುತ್ರಿ ಸಮೀನಾ ಅಫ್ಶಾನ್ ಅವರು ದೆಹಲಿಯಿಂದ ಹೊರಡುವ ಔರಾ ಇ ಮ್ಯಾಗಝೀನ್ನ ಸಂಪಾದಕರಾಗಿದ್ದಾರೆ. ಮೃತರ ಎಲ್ಲಾ ಮಕ್ಕಳು ಜಮಾಅತೆ ಇಸ್ಲಾಮಿ ಹಿಂದ್ನ ಜೊತೆ ಗುರುತಿಸಿಕೊಂಡಿದ್ದು, ಅದರ ಅಭಿವೃದ್ಧಿಗೆ ಕೊಡುಗೆ ನೀಡುವವರಾಗಿದ್ದಾರೆ.
ಮೃತರು ತಮ್ಮ ಸಜ್ಜನಿಕೆಗೆ ಮತ್ತು ಮಿತ ಭಾಷೆಗಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಜೊತೆಗೆ ತಮ್ಮ ದೊಡ್ಡ ಕುಟುಂಬದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದರು. ಒಳ್ಳೆಯ ದಾನಿಯೂ ಆಗಿದ್ದರು.
ಅಲ್ಲಾಹನು ಮೃತರಿಗೆ ಮಗ್ ಫಿರತ್ ಮತ್ತು ಮರ್ ಹಮತ್ ನೀಡಿ ಅನುಗ್ರಹಿಸಲಿ.











