ಟಿಕೆಟ್ ನಿರಾಕರಣೆ: ಅಸ್ಸಾಮ್ ಬಿಜೆಪಿ ಸಚಿವ ಕಾಂಗ್ರೆಸ್ಸಿಗೆ

0
308

ಸನ್ಮಾರ್ಗ ವಾರ್ತೆ

ಗುವಾಹಟಿ: ಅಸ್ಸಾಂ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಚಿವ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಹಿಲ್ ಏರಿಯ ಡೆವಲಪ್‍ಮೆಂಟ್, ಮೈನ್ಸ್ ಆಂಡ ಮಿನರಲ್ಸ್ ಸಚಿವ ಸೋ ರೋಂಗ್‍ಹಾಂಗ್ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರಿಗೆ ಸ್ಥಾನ ನೀಡದ್ದನ್ನು ಪ್ರತಿಭಟಿಸಿ ಅವರು ಬಿಜೆಪಿ ತೊರೆದಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಹಿರಿಯ ನಾಯಕ ರಿಪುನ್ ಬೊರಾ ನೇತೃತ್ವದಲ್ಲಿ ಅವರು ಪಾರ್ಟಿ ಸೇರ್ಪಡೆಗೊಂಡಿದ್ದಾರೆ.
ನನಗೆ ಟಿಕೆಟ್ ನಿರಾಕರಿಸಿದ ರೀತಿ ಇಷ್ಟವಾಗಲಿಲ್ಲ. ಪೂರ್ಣ ಸಮರ್ಪಣೆಯಿಂದ ಇಷ್ಟು ದಿನ ಹೊಣೆಗಾರಿಕೆ ನಿರ್ವಹಿಸಿರುವೆ. ಕೆಲವು ವ್ಯಕ್ತಿಗಳ ಚಿತಾವಣೆಯಿಂದ ನನಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ರೋಂಗ್‍ಹಾಂಗ್ ಹೇಳಿದರು.

ಕಾಂಗ್ರೆಸ್ ಟಿಕೆಟ್‍ನಲ್ಲಿ ದಿಪು ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚುನಾವಣೆಯ ಮೊದಲು ಹನ್ನೊಂದು ಬಿಜೆಪಿ ಶಾಸಕರು ಪಾರ್ಟಿಯನ್ನು ತೊರೆದಿದ್ದಾರೆ.