‘ಏಕ್ ದಿನ್ ಕಾ ಇನ್ಸ್‌ಪೆಕ್ಟರ್’ ಆದ ಶಿವಮೊಗ್ಗದ 8ರ ಹರೆಯದ ಬಾಲಕ ಆಝಾನ್ ಖಾನ್

0
165

ಸನ್ಮಾರ್ಗ ವಾರ್ತೆ

ಆ ಮುಸ್ಲಿಂ ಕುಟುಂಬದ ಪುಟ್ಟ ಪೋರನಿಗೆ ಈಗ ಎಂಟೂವರೆ ವರ್ಷ. ದೊಡ್ಡವನಾದ ಮೇಲೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಬೇಕೆಂಬ ಕನಸು. ಆದರೆ, ಹುಟ್ಟಿದ ಮೂರು ತಿಂಗಳಿಂದ ಶುರುವಾದ ಹೃದಯ ಸಂಬಂಧಿ ಕಾಯಿಲೆ ಕುಟುಂಬವನ್ನು ಸಂಕಟಕ್ಕೆ ಸಿಲುಕಿಸಿದೆ.

ಆದರೆ, ಹುಡುಗನ ಆಸೆಯನ್ನು ಸದ್ಯ ನೆರವೇರಿಸಿದ್ದು ಮಾತ್ರ ಪೊಲೀಸ್ ಇಲಾಖೆ.

ಹೌದು. ಇದು ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಒಂದು ದಿನ ಸಾಂಕೇತಿಕವಾಗಿ ಕಾರ್ಯ ನಿರ್ವಹಣೆ ಮಾಡಿದ ಬಾಲಕ ಆಝಾನ್ ಖಾನ್‌ ಸುದ್ದಿಯಲ್ಲಿದ್ದಾನೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಬ್ರೇಝ್ ಖಾನ್‌ ಮತ್ತು ನಗ್ಮಾ ಖಾನ್‌ ಅವರ ಪುತ್ರ ಆಝಾನ್‌ ಖಾನ್‌, ತಾನು ಪೊಲೀಸ್ ಆಗಬೇಕೆಂಬ ಕನಸನ್ನು ಶಿವಮೊಗ್ಗ ಜಿಲ್ಲಾ ಎಸ್‌ಪಿ ಮಿಥುನ್‌ ಕುಮಾರ್‌ ನೆರವೇರಿಸಿದ್ದಾರೆ.

ಬಾಲಕನ ಆಸೆಯಂತೆ ಸಮವಸ್ತ್ರ ಧರಿಸಿ ಇನ್ಸ್‌ಪೆಕ್ಟರ್‌ ಕುರ್ಚಿಯ ಮೇಲೆ ಕುಳಿತು ಅಧಿಕಾರ ಚಲಾಯಿಸಿದ ಕ್ಷಣಕ್ಕೆ ದೊಡ್ಡಪೇಟೆ ಠಾಣೆ ಬುಧವಾರ ಸಾಕ್ಷಿಯಾಯಿತು.

ಮಗ ಖಾಕಿ ತೊಟ್ಟು, ಪೊಲೀಸ್ ಅಧಿಕಾರಿಯಾಗಿ ಗತ್ತಿನಲ್ಲಿ ನಡೆಯುವುದನ್ನು ನೋಡಿದ ಪೋಷಕರು, ಕುಟುಂಬ ಸದಸ್ಯರು ಸೇರಿದಂತೆ ಅಲ್ಲಿ ಸೇರಿದ್ದ ಎಲ್ಲರೂ ಭಾವುಕರಾದ ಸನ್ನಿವೇಶಕ್ಕೆ ಸಾಕ್ಷಿಯಾದರು.

ಈ ಫೋಟೋಗಳನ್ನು ಶಿವಮೊಗ್ಗ ಎಸ್‌ಪಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವೇಳೆ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿಕೆ ಮಿಥುನ್‌ ಕುಮಾರ್‌ ಅವರಿಗೆ ಸೆಲ್ಯೂಟ್ ಹೊಡೆದು ಇನ್ಸ್‌ಪೆಕ್ಟರ್‌ ಆಗಿ ‘ಡ್ಯೂಟಿ’ ಮಾಡಿದ ಬಾಲಕ, ಕಳ್ಳನಂತೆ ಪಾತ್ರ ವಹಿಸಿದ್ದ ಸಿಬ್ಬಂದಿಯೋರ್ವರಿಗೆ ಬುದ್ಧಿಮಾತು ಹೇಳಿದ್ದು ವಿಶೇಷವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಎಸ್‌ಪಿ, ಒಂದು ದಿನ ಪೊಲೀಸ್‌ ಆಗಬೇಕು ಎಂದು ಬಾಲಕನಿಗೆ ಆಸೆ ಇತ್ತು. ಈ ಕುರಿತು ಅವರ ತಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಡಿವೈಎಸ್‌ಪಿ ಅವರಿಗೆ ತಿಳಿಸಿ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ. ಬಾಲಕ ತುಂಬಾ ಖುಷಿ ಪಟ್ಟಿದ್ದಾನೆ’ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರಡ್ಡಿ, ಪೊಲೀಸ್‌ ಅಧಿಕಾರಿಗಳಾದ ಬಾಲರಾಜ್‌, ಡಿ ಟಿ ಪ್ರಭು, ಅಂಜನ್‌ ಕುಮಾರ್‌ ಇತರರು ಉಪಸ್ಥಿತರಿದ್ದರು.

10 ಲಕ್ಷ ಜನರಲ್ಲಿ ಒಬ್ಬರಿಗೆ ಕಂಡು ಬರುವ ಈ ಕಾಯಿಲೆ ಬಾಲಕ ಆಝಾನ್ ಖಾನ್‌ಗೂ ತಗುಲಿದೆ. ಈ ಕಾಯಿಲೆಗೆ ಚಿಕಿತ್ಸೆಯೂ ಅಪರೂಪವೇ ಆಗಿದೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.

ಆಝಾನ್‌ ಮೂರು ತಿಂಗಳಿರುವಾಗಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಆಂಜಿಯೋಗ್ರಾಂ ಮಾಡಿ ಕಾರಣವನ್ನು ಪತ್ತೆ ಹಚ್ಚಲಾಗಿದೆ.

ಈತ ಸಂಪೂರ್ಣ ಗುಣಮುಖನಾಗಬೇಕಾದರೆ ಹೃದಯ ಮತ್ತು ಶ್ವಾಸಕೋಶದ ಕಸಿಯಾಗಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ದಾನಿಗಳು ಬೇಕು. ಜತೆಗೆ ಲಕ್ಷಾಂತರ ಹಣವೂ ಖರ್ಚಾಗುತ್ತದೆ ಎಂದು ಈತನ ಪೋಷಕರು ತಿಳಿಸಿದ್ದಾರೆ.