ಯುದ್ಧ ವಿರೋಧಿ ಪ್ರವಾದಿ(ಸ); ಪ್ರತೀಕಾರವೆಸಗುವೆ ಎಂದ ದಂಡನಾಯಕನನ್ನೇ ಕಿತ್ತು ಹಾಕಿದ್ದರು

0
221

ಸನ್ಮಾರ್ಗ ವಾರ್ತೆ

✍️ ಶೈಖ್ ಮುಹಮ್ಮದ್ ಕಾರಕ್ಕುನ್ನು

ಮಕ್ಕಾವನ್ನು ವಿಮೋಚನೆಗೊಳಿಸಲು ಹೊರಟ ಹತ್ತು ಸಾವಿರಕ್ಕೂ ಅಧಿಕ ಸೈನಿಕರನ್ನು ಪ್ರವಾದಿ(ಸ)ರು ನಾಲ್ಕು ಗುಂಪುಗಳಾಗಿ ವಿಂಗಡಿಸಿದರು. ಅವುಗಳಿಗೆ ನೇತೃತ್ವ ನೀಡಿದ ಝುಬೈರ್ ಬಿನ್ ಅವ್ವಾಮ್, ಖಾಲಿದ್ ಬಿನ್ ವಲೀದ್, ಅಬೂ ಉಬೈದ, ಸಅದ್ ಇಬ್ನು ಉಬಾದರೊಂದಿಗೆ ಯುದ್ಧ ಮಾಡಬಾರದೆಂದು ವಿಶೇಷವಾಗಿ ಸೂಚನೆ ನೀಡಿದರು.

ಆದರೆ ಸಅದ್ ಇಬ್ನು ಉಬಾದ ಇದನ್ನು ಪರಿಗಣಿಸದೆ ಅತ್ಯಂತ ಆವೇಶದಿಂದ ಹೇಳಿದರು, “ಇಂದು ಕಅಬಾದ ಪಾವಿತ್ರ್ಯ ಪರಿಗಣಿಸಲ್ಪಡುವುದಿಲ್ಲ.”

ವಿಷಯವನ್ನು ತಿಳಿದ ಪ್ರವಾದಿಯವರು(ಸ) ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಿದರು. ಬದಲಿಯಾಗಿ ಅವರ ಮಗ  ಖೈಸ್‌ರನ್ನು ನೇಮಿಸಿದರು. ನಂತರ ಹೀಗೆ ಹೇಳಿದರು: “ಸಅದ್ ಸುಳ್ಳು ಹೇಳಿದ್ದಾರೆ. ಇಂದು ಕರುಣೆಯ ದಿನವಾಗಿದೆ. ಇವತ್ತು ಅಲ್ಲಾಹನು ಕಅಬಾವನ್ನು ಗೌರವಿಸುವ ದಿನವಾಗಿದೆ.” (ಬುಖಾರಿ)

ಬಳಿಕ ತಂದೆಯಿಂದ ಪತಾಕೆಯನ್ನು ತೆಗೆದು ಖೈಸ್‌ಗೆ ನೀಡಲಾಯಿತು. ಆದ್ದರಿಂದ ನಾಲ್ಕೂ ಸೈನಿಕ ತಂಡಗಳು ಯಾವುದೇ ಯುದ್ಧ  ಮಾಡದೆ ಮಕ್ಕಾ ಪ್ರವೇಶಿಸಿತು.

ಒಂದು ಹನಿ ರಕ್ತವೂ ಹರಿಸದೆ ಪ್ರವಾದಿ(ಸ)ರು ಮದೀನಾದಲ್ಲಿ ಒಂದು ರಾಷ್ಟ್ರವನ್ನು ಕಟ್ಟಿದರು. ಅಲ್ಲಿನವರು ಎರಡೂ ಕೈಗಳನ್ನು ಚಾಚಿ  ಅವರನ್ನು ಸ್ವಾಗತಿಸಿದರು, ಮದೀನಾವನ್ನು ಪ್ರವಾದಿವರ್ಯರ(ಸ) ಕೈಗೆ ವಹಿಸಿಕೊಟ್ಟರು. ತನ್ನ ಜನ್ಮ ಭೂಮಿಯಾದ ಮಕ್ಕಾದ ವಿಮೋಚನೆ ರಕ್ತ ಹರಿಸದೆ ಆಗಬೇಕೆಂದು ಪ್ರವಾದಿ ಯವರು(ಸ) ಬಯಸಿದ್ದರು. ಭೂ ಪ್ರದೇಶವನ್ನು ಇಸ್ಲಾಮ್ ಅಧೀನಪಡಿಸಿಕೊಳ್ಳುವ  ಮೊದಲು ಅಲ್ಲಿನ ಜನರ ಮನಸ್ಸು ಇಸ್ಲಾಮ್‌ಗೆ ಅಧೀನವಾಗಬೇಕೆಂದು ಅವರು ಬಯಸಿದ್ದರು. ಅದರಿಂದಾಗಿಯೇ ಮಕ್ಕಾ ವಿಜಯದ ಸಂದರ್ಭದಲ್ಲಿ ಯಾವುದೇ ಕಟ್ಟಡವು ನಾಶವಾಗಲಿಲ್ಲ. ಯಾವುದೇ ಸಂಸ್ಥೆಯೂ ಲೂಟಿಯಾಗಲಿಲ್ಲ. ಯಾರನ್ನೂ ಸೋಲಿಸದ ವಿಜಯವಾಗಿತ್ತದು. ಯಾರನ್ನೂ ಅವಮಾನಿಸದ, ಯಾರನ್ನೂ ಲೂಟಿ ಮಾಡದ ವಿಮೋಚನೆ ಯಾಗಿತ್ತು ಅದು. ತಮ್ಮ ಕಡೆಗೆ  ಬರುತ್ತಿರುವ ಮುಹಮ್ಮದ್(ಸ) ಆಕ್ರಮಣಕಾರಿಯಲ್ಲವೆಂದೂ, ಶತ್ರುವೂ ಅಲ್ಲವೆಂದು ಮಕ್ಕಾ ನಿವಾಸಿಗಳಿಗೆ ಚೆನ್ನಾಗಿ ತಿಳಿದಿತ್ತು. ಪ್ರವಾದಿ(ಸ)  ಮತ್ತು ಅವರ ನಡುವಿನ ಸಂಘಟನೆಯೇ ಅದಕ್ಕೆ ಸಾಕ್ಷ್ಯವನ್ನು ವಹಿಸುತ್ತದೆ.

ಪವಿತ್ರ ಕಅಬಾದ ಪ್ರವೇಶ ದ್ವಾರದ ಎರಡೂ ಬದಿಗಳನ್ನು ಹಿಡಿದುಕೊಂಡು ಪ್ರವಾದಿ(ಸ)ರು ಅವರೊಂದಿಗೆ ಕೇಳಿದರು: “ನೀವು ನನ್ನಿಂದ  ಏನು ನಿರೀಕ್ಷಿಸುತ್ತೀರಿ?”
ಅವರು ಏಕ ಸ್ವರದಲ್ಲಿ ಹೇಳಿದರು: “ನಾವು ಉತ್ತಮವಾದುದನ್ನೇ ನಿರೀಕ್ಷಿಸುತ್ತಿದ್ದೇವೆ. ನೀವು ನಮ್ಮ ಗೌರವಾನ್ವಿತ ಮತ್ತು ಉದಾರನಾದ  ಸಹೋದರನ ಮಗನಾಗಿದ್ದೀರಿ.”

ಆಗ ಪ್ರವಾದಿ(ಸ)ರು ಘೋಷಿಸಿದರು: “ನನ್ನ ಸಹೋದರ ಯೂಸುಫ್(ಅ) ಹೇಳಿರುವುದನ್ನೇ ನಾನು ಹೇಳುತ್ತೇನೆ. ಇಂದು ನಿಮ್ಮ ಮೇಲೆ ಪ್ರತೀಕಾರವಿಲ್ಲ, ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಪರಮ ಕರುಣಾಮಯಿ. ನೀವೆಲ್ಲರೂ ವಿಮೋಚಿತರಾಗಿದ್ದೀರಿ.”

ಹೀಗೆ ಮಕ್ಕಾದಲ್ಲಿ ಹೊಸ ಯುಗ ಆರಂಭವಾಯಿತು. ಸರ್ವರೂ ಪರಸ್ಪರ ಸಹೋದರರಾಗಿ ಬದಲಾದರು. ಎಲ್ಲರ ಅಭಿಮಾನ  ಸಂರಕ್ಷಿಸಲ್ಪಟ್ಟಿತು. ಮಕ್ಕಾ ಜನರ ಮನಸ್ಸಿನಲ್ಲಿ ಶಾಂತಿ ಸಮಾಧಾನದ ಸುರಿಮಳೆಯಾಯಿತು.

ತ್ರಿಮೂರ್ತಿಗಳಿಗೂ ಕ್ಷಮೆ
ಮಕ್ಕಾ ವಿಜಯದ ಬಳಿಕವೂ ಮಕ್ಕಾದಲ್ಲಿ ಇಸ್ಲಾಮ್ ಮತ್ತು ಪ್ರವಾದಿಯವರೊಂದಿಗೆ ತೀವ್ರ ಶತ್ರುತ್ವವನ್ನು ಬೆಳೆಸಿಕೊಂಡಿದ್ದ ಮೂವರು  ಉಗ್ರಗಾಮಿಗಳಿದ್ದರು. ಸಫ್ವಾನ್ ಇಬ್ನು ಉಮಯ್ಯ, ಇಕ್ರಿಮತುಬ್ನು ಅಬೀಜಹಲ್, ಸುಹೈಲ್ ಇಬ್ನು ಅಮ್ರ್. ಆದರೆ ಮಕ್ಕಾ ನಿವಾಸಿಗಳು ಅವರೊಂದಿಗೆ ಸೇರಿಕೊಳ್ಳಲಿಲ್ಲ. ಆದ್ದರಿಂದಲೇ ರಕ್ತಪಾತವು ಸಂಪೂರ್ಣ ಇಲ್ಲವಾಯಿತು. ಮೂವರೂ ಹುದೈಬಿಯಾ ಸಂಧಿಯನ್ನು  ಉಲ್ಲಂಘಿಸಿದ್ದರು. ಅವರ ಮೂವರ ಹತ್ಯೆಗೆ ಪ್ರವಾದಿವರ್ಯರು(ಸ) ತನ್ನ ಮಕ್ಕಾ ಪ್ರವೇಶಕ್ಕೆ ಮೊದಲು ಆದೇಶಿಸಿದ್ದರು. ಸಫ್ವಾನ್ ಮತ್ತು ಇಕ್ರಿಮಾ ಒಪ್ಪಂದದ ವ್ಯವಸ್ಥೆಯನ್ನು ಉಲ್ಲಂಘಿಸಿ ವಂಚಿಸಿದ್ದಲ್ಲದೆ, ಖುಸಾಅ ಗೋತ್ರದೊಂದಿಗೆ ಯುದ್ಧವನ್ನು ಮಾಡಿದ  ಆರೋಪಿಗಳಾಗಿದ್ದರು. ಆದ್ದರಿಂದ ಸುಹೈಲ್‌ಗೆ ಕ್ಷಮೆಯನ್ನು ನೀಡಿದಾಗಲೂ ಇನ್ನಿಬ್ಬರನ್ನು ಎಲ್ಲೆ ಕಂಡರೂ ಬಂಧಿಸಬೇಕೆಂದು ಪ್ರವಾದಿ(ಸ) ಆದೇಶಿಸಿದ್ದರು. ಸುಹೈಲ್‌ನನ್ನು ಆತನ ಮಗ ಅಬ್ದುಲ್ಲಾರ ಶಿಫಾರಸು ಸ್ವೀಕರಿಸಿ ಪ್ರವಾದಿವರ್ಯರು(ಸ) ಸುಮ್ಮನೆ ಬಿಟ್ಟರು.

ಅಬೂಜಹಲನ ಮಗ ಇಕ್ರಿಮಾ ಹಡಗು ಹತ್ತಿ ಯಮನ್‌ಗೆ ಪಲಾಯನ ಮಾಡಲೆಂದು ತೀರ ಪ್ರದೇಶಕ್ಕೆ ಹೋದ. ಆಗ ಆತನ ಪತ್ನಿ  ಉಮ್ಮು ಹಕೀಮ್ ಪ್ರವಾದಿಯವರನ್ನು(ಸ) ಭೇಟಿ ಮಾಡಿ ಪತಿಗೆ ಕ್ಷಮೆ ನೀಡುವಂತೆ ಕೇಳಿಕೊಂಡರು. ಅದರಂತೆ ಪ್ರವಾದಿ(ಸ)ರು ಆತನ ನ್ನು ಕ್ಷಮಿಸಿದರು.
ನಂತರ ತನ್ನ ಸಹಚರರೊಂದಿಗೆ ಹೇಳಿದರು: “ಸತ್ಯವಿಶ್ವಾಸಿ ಮತ್ತು ಮುಹಾಜಿರ್ ಆಗಿ ಇಕ್ರಿಮ ನಿಮ್ಮ ಬಳಿಗೆ ಬರಲಿರುವರು. ನೀವು  ಅವರ ತಂದೆಯ ಕುರಿತು ಅಸಭ್ಯ ಹೇಳಬೇಡಿ. ಮರಣ ಹೊಂದಿದವರನ್ನು ಕೆಟ್ಟದಾಗಿ ಹೇಳುವುದು ಜೀವಿಸಿರುವವರಿಗೆ ದೋಷ ನೀಡುತ್ತದೆ. ಮರಣ ಹೊಂದಿದವರಿಗೆ ಆ ದೋಷವು ತಲುಪುವುದಿಲ್ಲ.

ನಂತರ ಇಕ್ರಿಮಾ ಪ್ರವಾದಿಯವರನ್ನು ಸಂಪರ್ಕಿಸಿ ಹೇಳಿದರು: “ನಾನು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯಲು ಖರ್ಚು ಮಾಡಿದ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ದುಪ್ಪಟ್ಟು ಖರ್ಚು ಮಾಡುತ್ತೇನೆ. ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯಲು ಮಾಡಿದ ಹೋರಾಟದ ದುಪ್ಪಟ್ಟು ಪರೀಕ್ಷೆಗಳನ್ನು ಅಲ್ಲಾಹನ ಮಾರ್ಗದಲ್ಲಿ ಅನುಭವಿಸಲು ನಾನು ಸಿದ್ಧನಿದ್ದೇನೆ.”

ಪ್ರವಾದಿವರ್ಯರನ್ನು(ಸ) ವಿಷಲೇಪಿತ ಖಡ್ಗದಿಂದ ಕೊಲ್ಲಲು ಉಮೈರ್ ಇಬ್ನು ವಹಬ್‌ನನ್ನು ನಿಯೋಗಿಸಿದ್ದ ವ್ಯಕ್ತಿಯಾಗಿದ್ದರು ಸಫ್ವಾನ್  ಇಬ್ನು ಉಮಯ್ಯ. ಆತ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಓಡಿದ್ದ. ಉಮೈರ್ ಆತನಿಗಾಗಿ ಕ್ಷಮೆ ಕೇಳಿದರು. ಪ್ರವಾದಿವರ್ಯರು(ಸ)  ಸಫ್ವಾನ್‌ಗೂ ಕ್ಷಮೆ ನೀಡಿದರು. ಅದನ್ನು ನಂಬುವಂತೆ ರಸೂಲ್ ತನ್ನ ಪೇಟವನ್ನು ಉಮೈರ್‌ರ ಬಳಿ ನೀಡಿ ಕಳಿಸಿದರು. ಸಫ್ವಾನ್  ಇಸ್ಲಾಮ್ ಸ್ವೀಕರಿಸದಯೇ ಪ್ರವಾದಿವರ್ಯರು(ಸ) ಆತನನ್ನು ಕ್ಷಮಿಸಿದ್ದರು. ಆತನೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಹುನೈನ್ ಯುದ್ಧದ ಬಳಿಕ ಆತ ಇಸ್ಲಾಮ್ ಅನ್ನು ಪ್ರೀತಿಸಿದ.

ಮಾನವ ಇತಿಹಾಸದಲ್ಲಿ ಮನುಷ್ಯನ ಪ್ರಾಣ ಮತ್ತು ಸ್ವಾಭಿಮಾನವನ್ನು ಸಂರಕ್ಷಿಸಲು ಪ್ರವಾದಿಯವರಂತೆ(ಸ) ತ್ಯಾಗ ಮಾಡಿದ, ರಾಜಿ ಮಾಡಿದ ವ್ಯಕ್ತಿ ಬೇರೆ ಯಾರಿರಬಹುದು?

ಯುದ್ಧರಂಗದಲ್ಲಿ ಮಾನವ ಜೀವನವನ್ನು ಸಾಧ್ಯವಾದಷ್ಟು ರಕ್ಷಿಸಲು ಪ್ರವಾದಿ(ಸ) ಅನುಯಾಯಿಗಳಿಗೆ ಸೂಚಿಸಿದರು. ಮಹಿಳೆಯರು, ಮಕ್ಕಳು, ವೃದ್ಧರು, ಆಯುಧವಿಲ್ಲದವರು, ಹಿಂದಿರುಗಿ ಹೋಗುವವರು,  ಪುರೋಹಿತರು, ಆರಾಧನೆಗಳಲ್ಲಿ ಮುಳುಗಿರುವವರನ್ನು ಕೊಲ್ಲಬಾರದೆಂದು ಆದೇಶಿಸಿದರು. ಆದ್ದರಿಂದಲೇ ಪ್ರವಾದಿ(ಸ)ರು ಭಾಗವಹಿಸಿದ ಯುದ್ಧಗಳಲ್ಲಿ ಒಟ್ಟು ಸತ್ತವರ ಸಂಖ್ಯೆ 1018 ಮಾತ್ರ. 259 ಮುಸ್ಲಿಮರು ಮತ್ತು 759 ಶತ್ರುಗಳು.

ಯುದ್ಧದಲ್ಲಿ ಸೋತವರನ್ನು ಕೊಲ್ಲಬಾರದೆಂದು ಆದೇಶಿಸಿದ್ದರು. ಶತ್ರುಗಳೊಂದಿಗೆ ಇಷ್ಟೂ ಉದಾರತೆ, ರಾಜಿ, ಕ್ಷಮೆಯನ್ನು ತೋರಿಸಿದ  ಪ್ರವಾದಿ(ಸ)ರನ್ನು ಅಕ್ರಮಿ, ಪ್ರತೀಕಾರ ದಾಹಿ, ದ್ವೇಷದ ವಾಹಕ ಎಂದು ಚಿತ್ರೀಕರಿಸಲು ಇಸ್ಲಾಮಿನ ವಿಮರ್ಶಕರು ನಿರಂತರ ಪ್ರಯತ್ನಿಸುತ್ತಾರೆ. ಘನ ಘೋರ ತಪ್ಪನ್ನು ಮಾಡಿದ ಮತ್ತು ಪಶ್ಚಾತ್ತಾಪ ಪಡದೆ ಅಥವಾ ಕ್ಷಮೆಯಾಚಿಸದೆ ಧಿಕ್ಕಾರ ತೋರಿದ ಕೆಲವು ಘೋರ ಅತಿಕ್ರಮಣಕಾರರನ್ನು ಶಿಕ್ಷಿಸಿದ ಪ್ರವಾದಿವರ್ಯರನ್ನು(ಸ) ಪ್ರತೀಕಾರದಾಹಿ ಎಂದು ಬಿಂಬಿಸಲು ಕೋಮುಭ್ರಾಂತಿ ಹಿಡಿದ ಕೆಲವರು ಪ್ರಯತ್ನಿಸುತ್ತಾರೆ.

ವಿಶ್ವಾಸದಿಂದ ಪ್ರೇರಿತರಾಗಿ ಇಸ್ಲಾಮೀ ಸಂದೇಶವನ್ನು ನಿರ್ವಹಿಸುವವರು ಯಾವಾಗಲೂ ಲೋಕಾನುಗ್ರಹಿಯಾದ ಪ್ರವಾದಿವರ್ಯರ(ಸ) ಜೀವನದ ಸ್ನೇಹ, ಸಹೋದರತೆ, ಕರುಣೆ, ವಿನಯ, ತ್ಯಾಗ ಮತ್ತು ಔದಾರ್ಯದ ಅನುಪಮ ಉದಾಹರಣೆಗಳನ್ನು ಸಮಾಜಕ್ಕೆ ಪ್ರಸ್ತುತ ಪಡಿಸುತ್ತಾರೆ ಮತ್ತು ಅದಕ್ಕೆ ವಿರುದ್ಧವಾದ ಅಪಪ್ರಚಾರಗಳನ್ನು ತಡೆಯಲು ಪ್ರಯತ್ನಿಸುತ್ತಾರೆ.