ಪತಂಜಲಿ ಬಾಬಾ ರಾಮ್‌ದೇವ್ ಮತ್ತು NIMSನ ಮೋಸದ ದಂಧೆ: ಕೊರೋನ ಮದ್ದಿನ ಹಿಂದಿರುವ ಚೋರ್ ಚೋರ್ ಮೌಸೇರೇ ಭಾಯ್‍ ಕತೆ

0
1705

ಸನ್ಮಾರ್ಗ ವಾರ್ತೆ

‌ಲೇಖಕರು: ಅಲ್ಮೇಡಾ ಗ್ಲಾಡ್ಸನ್

ರಾಜಸ್ಥಾನ ಸರ್ಕಾರ ಕೊರೋನಾಕ್ಕೆ ಮದ್ದು ಕಂಡು ಹಿಡಿದಿದ್ದೇವೆ ಎಂದು ಸರ್ಕಾರದ ಅನುಮತಿ ಸಿಗುವ ಮೊದಲೇ ಜಾಹೀರಾತು ಬಿಡುಗಡೆಗೊಳಿಸಿದ್ದ ಬಾಬಾ ರಾಮ್‍ದೇವ್ ಹಾಗೂ ಪತಂಜಲಿ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದೆ. ಪತಂಜಲಿ ಹೇಳಿದ್ದಂತೆ ಕೊರೋನಿಲ್ ಜೌಷಧಿಯನ್ನು ಹರಿದ್ವಾರದ Patanjali Research Institute ಹಾಗೂ ಜೈಪುರ್ ನಲ್ಲಿರುವ National Institute of Medical Sciences (NIMS) ಜಂಟಿಯಾಗಿ ಸಂಶೋಧಿಸಿತ್ತು.

NIMS ನಿರ್ದೇಶಕರ ಪ್ರಕಾರ ಈ ಜೌಷಧಿಯನ್ನು ಅವರು NIMS ಕೇಂದ್ರದಲ್ಲಿ ಭರ್ತಿಯಾಗಿದ್ದ ಕೆಲ ಕೋವಿಡ್ ರೋಗಿಗಳ ಮೇಲೆ ಪ್ರಯೋಗಿಸಿದ್ದರು ಹಾಗೂ ಆ ರೋಗಿಗಳು ಗುಣಮುಖ ಹೊಂದಿದ್ದರು. ಅಂದಹಾಗೆ ಈ NIMS ಹೆಸರನ್ನು ಕೇಳಿ ಅದೊಂದು ಸರ್ಕಾರಿ ಸಂಸ್ಥೆ ಎಂದು ತಿಳಿದುಕೊಳ್ಳಬೇಡಿ. ಅದು ಖಾಸಗಿ ಸಂಸ್ಥೆ. ಸದ್ಯದ ಅಲ್ಲಿನ ನಿರ್ದೇಶಕರಾದ ಡಾ. ಅನುರಾಗ್ ತೋಮರ್ ಅವರ ತಂದೆ ಬಲ್ವೀರ್ ತೋಮರ್ ಸುಮಾರು ಹತ್ತೊಂಬತ್ತು ವರುಷಗಳ ಹಿಂದೆ ಆರಂಭಿಸಿದ ಸಂಸ್ಥೆ.

ಬಾಬಾ ರಾಮ್‍ದೇವ್ ಹಾಗೂ ಡಾ.ಅನುರಾಗ್ ತೋಮರ್ ಸೇರಿ ಕೊರೋನಿಲ್ ಔಷಧಿಯ ವಿಷಯದಲ್ಲಿ ಮಾಡಿರುವ ಮೋಸವನ್ನು ಊಹಿಸಲೂ ಅಸಾಧ್ಯ. ರಾಜಸ್ಥಾನ ಸರ್ಕಾರದ ಪ್ರಕಾರ ಕೊರೋನಿಲ್‍ನ್ನು NIMS ರೋಗಿಗಳ ಮೇಲೆ ಪ್ರಯೋಗಿಸುವ ಮೊದಲು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ತೋಮರ್ ಕೂಡಾ ಅದನ್ನೇ ಹೇಳುತ್ತಿರುವುದು. ಅವರ ಪ್ರಕಾರ NIMS ಕೇವಲ ಪತಂಜಲಿಗೆ ಸಂಶೋಧನೆಯಲ್ಲಿ ಸಹಾಯ ಮಾಡಿತ್ತೇ ವಿನ: ಯಾವುದೇ ಕಾನೂನಾತ್ಮಕ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಅದಿರಲಿಲ್ಲ. ಅವೆಲ್ಲಾವನ್ನು ಪತಂಜಲಿ ಪಡೆದಿತ್ತಂತೆ. ಆದರೆ ರಾಜಸ್ಥಾನ ಸರ್ಕಾರ ತನ್ನ ಅನುಮತಿಯಿಲ್ಲದೆ, ತನ್ನ ರಾಜ್ಯದ ಕೋವಿಡ್ ರೋಗಿಗಳ ಮೇಲೆ ಕೊರೋನಿಲ್ ಪ್ರಯೋಗಿಸಿದ್ದಕ್ಕೆ ರಾಮ್‍ದೇವ್ ವಿರುದ್ಧ ಕೇಸ್ ದಾಖಲಿಸಲು ನಿರ್ಧರಿಸಿದೆ.

ಅಷ್ಟಕ್ಕೂ NIMS ಹಾಗೂ ಪತಂಜಲಿ ಒಟ್ಟಿಗೆ ಸೇರಿ ಮಾಡಿದ ಮೋಸವೇನು ಗೊತ್ತೇ? NIMS ಯಾರಿಗೆಲ್ಲಾ ಕೊರೋನಿಲ್ ಔಷಧಿಯನ್ನು ಕೊಟ್ಟಿತ್ತೋ ಅವರೆಲ್ಲರೂ ಕೋವಿಡ್‍ನ ಯಾವುದೇ ಗುಣಲಕ್ಷಣ ಇಲ್ಲದ ರೋಗಿಗಳು. NIMS ಅವರ ಕೋವಿಡ್ ಪರೀಕ್ಷೆ ಮಾಡಿದ ದಿನವೇ ರಾಜಸ್ಥಾನದ ಬೇರೆ ಕಡೆಯಲ್ಲೂ ಅವರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ NIMS ಒಂದರಲ್ಲಿ ಬಿಟ್ಟು ಮತ್ತೆಲ್ಲಾ ಕಡೆಯಲ್ಲಿ ಅವರು ಕೋವಿಡ್ ನೆಗೆಟೀವ್ ಎಂದು ವರದಿ ಬಂದಿದ್ದರೆ, NIMSನಲ್ಲಿ ಮಾತ್ರ ಅವರ ವರದಿ ಕೋವಿಡ್ ಪಾಸಿಟಿವ್. ಅಂದರೆ ರಾಮ್‍ದೇವ್ ಹಾಗೂ NIMS ಒಟ್ಟಾಗಿ ಕೋವಿಡ್ ನೆಗೆಟಿವ್ ಬಂದ ರೋಗಿಗಳನ್ನು ಕೋವಿಡ್ ಪಾಸಿಟಿವ್ ಎಂದು ತೋರಿಸಿ, ಅವರು ಕೊರೋನಿಲ್‍ನಿಂದ 100% ಗುಣಮುಖ ಹೊಂದಿದ್ದಾರೆಂದು ತೋರಿಸಿಕೊಟ್ಟಿದ್ದು. ಎಂಥಾ ಭಯಂಕರ ಹಾಗೂ ಕ್ರಿಮಿನಲ್ ತಲೆ ಇದು! ಹೀಗೆ ಜೌಷಧಿ ಕೊಟ್ಟ ರೋಗಿಗಳೆಲ್ಲರೂ Covid asymptomatic.

ಈ ಡಾ.ಅನುರಾಗ್ ತೋಮರ್ ಎರಡ್ಮೂರು ವರುಷಗಳ ಹಿಂದೆ ಭೃಷ್ಟಾಚಾರದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. ಆತನ ತಂದೆಯೇ ಕೇಸ್ ದಾಖಲಿಸಿದ್ದು. ಅದೇ ಸಮಯದಲ್ಲಿ ಆತನ ತಂದೆ ಬಲ್ವೀರ್ ತೋಮರ್ ವಿರುದ್ಧ NIMSನ ಮಹಿಳಾ ಸಿಬ್ಬಂದಿಗಳನ್ನು ಲೈಂಗಿಕ ಶೋಷಣೆಗೊಳಪಡಿಸಿದ ಪ್ರಕರಣ ದಾಖಲಾಗಿತ್ತು. ಆ ಪ್ರಕರಣವನ್ನು ದಾಖಲಿಸಿದ್ದು, ಆತನ ಹೆಂಡತಿ. ಆದರೆ ವಸುಂಧರಾ ರಾಜೇ ನೇತ್ರತ್ವದ ಸರಕಾರ ಇವರಿಬ್ಬರ ಮೇಲಿನ ಕೇಸುಗಳನ್ನು ಮುಚ್ಚಿ ಹಾಕಿತ್ತು ಎಂದು ಆರೋಪಗಳು ಕೇಳಿ ಬಂದಿದ್ದವು. ಅಂಥಾ NIMS ಹಾಗೂ ತೋಮರ್ ಜೊತೆಗೂಡಿ ಬಾಬಾ ರಾಮ್‍ದೇವ್ ಕೊರೋನಿಲ್ ಎಂಬ ಫ್ರಾಡ್ ಹುಟ್ಟು ಹಾಕಿದ್ದಾರೆ. ಎಷ್ಟೆಂದರೂ ಚೋರ್-ಚೋರ್ ಮೌಸೇರೇ ಭಾಯ್‍ (ಇಬ್ಬರು ಕಳ್ಳರು ಸೋದರ ಸಂಬಂಧಿಗಳು) ಅಲ್ವೇ?

ಲೇಖಕರು: ಅಲ್ಮೇಡಾ ಗ್ಲಾಡ್ಸನ್