ಇರಾನ್ ಅಧ್ಯಕ್ಷರ ನಿಧನ ಜಾಗತಿಕ ಮುಸ್ಲಿಮ್ ಸಮುದಾಯಕ್ಕಾದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್

0
497

ಸನ್ಮಾರ್ಗ ವಾರ್ತೆ

ಇರಾನಿನ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ತೀವ್ರ ಶೋಕ ವ್ಯಕ್ತಪಡಿಸಿದೆ. ಅವರ ನಿಧನವು ಕೇವಲ ಇರಾನಿಯನ್ನರಿಗೆ ಮಾತ್ರ ಅಲ್ಲ, ಜಾಗತಿಕ ಮುಸ್ಲಿಂ ಸಮುದಾಯದ ಪಾಲಿಗೇ ಬಹಳ ದೊಡ್ಡ ನಷ್ಟ ಎಂದು ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೇನಿ ಹೇಳಿದ್ದಾರೆ.

ಇಬ್ರಾಹಿಂ ರಯೀಸಿ ಅವರು ತಮ್ಮ ದೃಢ ನಿರ್ಧಾರದ ಮೂಲಕ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಮುಖ್ಯವಾಗಿ ಪಾಶ್ಚಾತ್ಯ ರಾಷ್ಟ್ರಗಳು ಆರ್ಥಿಕ ಬಹಿಷ್ಕಾರವನ್ನು ಹೇರುವ ಮೂಲಕ ಶರಣಾಗುವಂತೆ ಒತ್ತಡ ಹೇರಿದರೂ ಕೆಚ್ಚೆದೆಯಿಂದ ಅವರು ತನ್ನ ರಾಷ್ಟ್ರದ ಸ್ವಾಭಿಮಾನವನ್ನು ರಕ್ಷಿಸಿದ್ದಾರೆ. ಹಾಗೆಯೇ ಫೆಲೆಸ್ತೀನಿಯರಿಗೆ ಅತಿ ಪ್ರಬಲ ಬೆಂಬಲ ನೀಡುವ ಮೂಲಕ ಝಿಯೋನಿಸ್ಟ್ ಶಕ್ತಿಗಳ ಎಲ್ಲ ಸಂಚುಗಳಿಗೂ ಹೊಡೆತ ನೀಡಿದ್ದಾರೆ ಎಂದು ಹುಸೇನಿ ಹೇಳಿದ್ದಾರೆ.

ರಯೀಸಿಯವರು ಭಾರತ ಮತ್ತು ಇರಾನ್ ನಡುವಿನ ಸಂಬಂಧಕ್ಕೆ ಸಾಕಷ್ಟು ಮಹತ್ವವನ್ನು ಕೊಟ್ಟರಲ್ಲದೆ ಸಂಬಂಧವನ್ನು ಉತ್ತಮ ಪಡಿಸಿದರು. ಚಬಹಾರ್ ಬಂಧರ್ ಮೂಲಕ ಭಾರತದೊಂದಿಗೆ ಹತ್ತು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದ ಎರಡು ರಾಷ್ಟ್ರಗಳ ಅಭಿವೃದ್ಧಿಗೆ ಮತ್ತು ಜನರ ಬದುಕಿನ ಮಟ್ಟವನ್ನು ಎತ್ತರಿಸುವುದಕ್ಕೆ ಕಾರಣವಾಗಬಲ್ಲದು. ಇಂಥ ಧೀಮಂತ ನಾಯಕನನ್ನು ಭಾರತ ಮತ್ತು ಇರಾನಿನ ಜನತೆ ಕಳಕೊಂಡಿದೆ ಎಂದವರು ಹೇಳಿದ್ದಾರೆ.