ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.20: ಕಳೆದ ಕೆಲವು ವರ್ಷಗಳಿಂದ ಭಾರತದ ಬ್ಯಾಂಕಿಂಗ್ ಕ್ಷೇತ್ರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಮೂರು ವರ್ಷಗಳಲ್ಲಿ ಐದು ಬ್ಯಾಂಕುಗಳು ಪತನವಾಗಿದೆ. ಈ ಲೆಕ್ಕಗಳು ಭಾರತದ ಅರ್ಥವ್ಯವಸ್ಥೆಯ ಕುರಿತು ನಿರೀಕ್ಷೆಯನ್ನು ಮಂಕಾಗಿಸಿವೆ. ಇತ್ತೀಚೆಗೆ ಚೆನ್ನೈ ಕೇಂದ್ರ ಕಚೇರಿಯಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್ ಪತನದಂಚಿನಲ್ಲಿದೆ. ಬ್ಯಾಂಕಿನ ಬಾಕಿ ಸಾಲ ಹೆಚ್ಚಳ, ಮೂಲ ಬಂಡವಾಳದಲ್ಲಿ ದೊಡ್ಡ ಮಟ್ಟದ ಹಾನಿಯನ್ನು ತಂದೊಡ್ಡಿರುವುದು ಬ್ಯಾಂಕಿನ ಪತನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಈ ಬ್ಯಾಂಕ್ ನಷ್ಟ ಅನುಭವಿಸಲು ಆರ್‍ಬಿಐ ಕಾರಣ ಎನ್ನಲಾಗುತ್ತಿದ್ದು ಈ ಬ್ಯಾಂಕನ್ನು ಡಿಬಿಎಸ್ ಬ್ಯಾಂಕ್‍ನಲ್ಲಿ ವಿಲೀನಗೊಳಿಸಿ ಬಿಕ್ಕಟ್ಟು ಪರಿಹಾರಕ್ಕೆ ಅದು ಯತ್ನಿಸುತ್ತಿದೆ. ಹಣಕಾಸು ಸಂಸ್ಥೆಗಳ ನಿರಂತರ ಹಿನ್ನಡೆ ದೇಶಕ್ಕೆ ದೊಡ್ಡ ಮುನ್ನೆಚ್ಚರಿಕೆಯಾಗಿದೆ ದೇಶ ಆರ್ಥಿಕ ಮಾಂದ್ಯದ ಬಾಗಿಲ ಬಳಿಯಿದ್ದು ಬ್ಯಾಂಕುಗಳ ವೈಫಲ್ಯ ಬಹು ದೊಡ್ಡ ಆರ್ಥಿಕ ಸಮಸ್ಯೆಯನ್ನು ಸೃಷ್ಟಿಸುವ ಆತಂಕವನ್ನು ಉಂಟು ಮಾಡುತ್ತಿದೆ.
ಐಎಲ್ ಆಂಡ್ ಎಫ್‍ಸಿ, ಡಿಎಚ್‍ಎಫ್‍ಎಲ್, ಪಂಜಾಬ್ ಆಂಡ್ ಮಹಾರಾಷ್ಟ್ರ ಕೊ. ಆಪರೇಟಿವ್ ಬ್ಯಾಂಕ್, ಯೆಸ್‍ಬ್ಯಾಂಕ್ ಕಳೆದ ಮೂರು ವರ್ಷಗಳಲ್ಲಿ ಪತನಗೊಂಡಿವೆ. ಪತನದಂಚಿಗೆ ಸರಿದಿದ್ದ ಐಡಿಬಿಐ ಬ್ಯಾಂಕನ್ನು ಎಲ್‍ಐಸಿಯ ಹೂಡಿಕೆಯನ್ನು ಬಳಿಸಿ ಕೇಂದ್ರ ಸರಕಾರ ರಕ್ಷಿಸಿತ್ತು. ಪತನಗೊಂಡ ಯೆಸ್ ಬ್ಯಾಂಕಿನ ರಕ್ಷೆಗೆ ಎಸ್‍ಬಿಐ ಬಂದರೂ, ಪಿಎಂಸಿ ಬ್ಯಾಂಕನ್ನು ರಕ್ಷಿಸಲು ಹೊಸ ಯೋಜನೆ ಜಾರಿಯಾಗಲಿಲ್ಲ. ಎರಡು ಬ್ಯಾಂಕುಗಳು ಪತನದಂಚಿಗೆ ಬಾಕಿ ಸಾಲ ಮತ್ತು ಸಾಲ ಕೊಡುವುದರಲ್ಲಿ ನಡೆದ ಅವ್ಯವಸ್ಥೆ ಮತ್ತು ಕೆಟ್ಟ ಕಾರ್ಪೊರೇಟ್ ಆಡಳಿತ ಕಾರಣ ಎನ್ನಲಾಗುತ್ತಿದೆ.