ಸನ್ಮಾರ್ಗ ವಾರ್ತೆ
ಗುವಾಹಟಿ ಮೇ 8- ಇಲ್ಲಿನ ಧುಬ್ರಿ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಈವರೆಗೆ ಸುಮಾರು 75,000 ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದಾರೆ. ಆಲ್ ಇಂಡಿಯ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮೌಲಾನಾ ಅಜ್ಮಲ್ ಅವರು ಇನ್ನೂ ಒಂದು ಲಕ್ಷ ಆಹಾರ ಕಿಟ್ ಗಳನ್ನು ವಿತರಿಸುವ ಯೋಜನೆ ಹೊಂದಿರುವುದಾಗಿ ಘೋಷಿಸಿದ್ದಾರೆ.
ನಾವು ಈವರೆಗೆ 75000 ಆಹಾರ ಪೊಟ್ಟಣಗಳನ್ನು ವಿತರಿಸಿದ್ದೇವೆ. ಐವರು ಸದಸ್ಯರಿರುವ ಕುಟುಂಬದ ಮಟ್ಟಿಗೆ ಹದಿನೈದು ದಿನಕ್ಕೆ ಬರಬಹುದಾದಷ್ಟು ಆಹಾರ ಸಾಮಗ್ರಿಗಳು ಈ ಪೊಟ್ಟಣ ಒಳಗೊಂಡಿದೆ. ರಮಝಾನ್ ನ ಈ ಸಮಯದಲ್ಲಿ ಇನ್ನೂ ಒಂದು ಲಕ್ಷ ಆಹಾರ ಕಿಟ್ ಗಳನ್ನು ವಿತರಿಸಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಜ್ಮಲ್ ಅವರ ಸಿಎಸ್ಆರ್ ಎಂಬ ಎನ್ಜಿಓ ಈಶಾನ್ಯ ಭಾರತದಲ್ಲಿ ಅತಿ ದೊಡ್ಡ ಎನ್ ಜಿ ಓ ಎಂಬ ಹೆಸರು ಗಳಿಸಿಕೊಂಡಿದೆ. ದೇಶದಲ್ಲಿ ಲಾಕ್ ಡೌನ್ ಆದ ಬಳಿಕ ಸಿಎಸ್ಆರ್ ನ ಪಾಲುದಾರರಾದ ಮರ್ಕಝುಲ್ ಮಹಾರಿಫ್ ಮತ್ತು ಅಜ್ಮಲ್ ಫೌಂಡೇಶನ್ ಸೇರಿಕೊಂಡು ಬಡ ಮತ್ತು ನಿರ್ಗತಿಕ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ನಾವು ಎರಡು ವಿಭಾಗವಾಗಿ ಸೇವಾಕಾರ್ಯವನ್ನು ವಿಭಜಿಸಿ ನಿರವಹಿಸುತ್ತಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಾಕ್ ಡೌನ್ ನಿಂದಾಗಿ ಯಾರು ತತ್ತರಿಸಿ ಹೋಗಿದ್ದಾರೋ ಅವರ ನೆರವಿಗಾಗಿ ಒಂದು ವಿಭಾಗ ಗಮನ ಕೊಟ್ಟರೆ ಇನ್ನೊಂದು ವಿಭಾಗ ಇಫ್ತಾರ್ ಮತ್ತು ಸಹರಿಗಾಗಿ ನೆರವಾಗುತ್ತಿದೆ ಎಂದು ಮಾಜಿ ಸಂಸದ ಮತ್ತು ಅಜ್ಮಲ್ ಅವರ ಸಹೋದರ ಸಿರಾಜುದ್ದೀನ್ ಅಜ್ಮಲ್ ಅವರು ಹೇಳಿದರು. ಅವರು ಸಿ ಎಸ್ ಆರ್ ನ ಜಂಟಿ ಸಿಇಒ ಆಗಿದ್ದಾರೆ.
ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ರೈತರು, ಬಡವರು ಮತ್ತು ಇನ್ನಿತರ ಅರ್ಹ ವ್ಯಕ್ತಿಗಳಿಗೆ ಸಿಎಸ್ಆರ್ ನ ಮೂಲಕ ಕಿಟ್ ಗಳನ್ನೂ ವಿತರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.


ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












