ಬಾಹ್ಯ ಶಕ್ತಿಗಳು  ಕುರ್ಬಾನಿಯನ್ನು ತಡೆಯದಂತೆ ಕ್ರಮ: ಗೋವಾ ಸಚಿವ

0
917
ಗೋವಾದ ಕಾರ್ಖಾನೆ ಮತ್ತು ಮಾಂಸ ವ್ಯವಹಾರ ಸಚಿವ ವಿಜಯ್ ಸರ್ದೇಸಾಯಿ

ಈದ್ ನ ಹಿನ್ನೆಲೆಯಲ್ಲಿ ಬಲಿ ಕರ್ಮವನ್ನು ನಿರ್ವಹಿಸುವುದಕ್ಕಾಗಿ ಪ್ರಾಣಿಗಳನ್ನು ಸಾಗಿಸುವುದಕ್ಕೆ ಯಾವ ತೊಂದರೆಯೂ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಗೋವಾದ ಕಾರ್ಖಾನೆ ಮತ್ತು ಮಾಂಸ ವ್ಯವಹಾರ ಸಚಿವ ವಿಜಯ್ ಸರ್ದೇಸಾಯಿ ಮುಸ್ಲಿಂ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಆಗಸ್ಟ್ 21 ಕ್ಕಿಂತ ಮೊದಲೇ ಕುರ್ಬಾನಿಗಾಗಿ ಸೂಕ್ತ ಏರ್ಪಾಡುಗಳನ್ನು ಮಾಡಬೇಕೆಂಬ ಬೇಡಿಕೆ ಮುಸ್ಲಿಂ ಸಮುದಾಯದಿಂದ ಬಂದಿದೆ. ಕುರ್ಬಾನಿ  ನಡೆಸುವುದಕ್ಕೆ ನಿರಪೇಕ್ಷಣಾ ಪತ್ರವನ್ನು ನೀಡಬೇಕಿದೆ. ಅವರ ಧಾರ್ಮಿಕ ವಿಧಿಗಳನ್ನು ಬಾಹ್ಯ ಶಕ್ತಿಗಳು ಅಡ್ಡಿಪಡಿಸದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂ ನಿಯೋಗದ ಸಂಚಾಲಕ ಬಷೀರ್ ಶೈಖ್ ಮಾತಾಡಿ, ಕುರ್ಬಾನಿಗಾಗಿ ಅನುಮತಿ ಕೋರಿ ಪ್ರತಿವರ್ಷ ನಾವು ಸರಕಾರೀ ಇಲಾಖೆಯನ್ನು ಸಂಪರ್ಕಿಸಬೇಕಾಗುತ್ತದೆ. ಕುರ್ಬಾನಿ ಆರಂಭಕ್ಕಿಂತ ತಿಂಗಳುಗಳ ಮೊದಲು ಪ್ರತೀ ವರ್ಷ ಕಚೇರಿಯಿಂದ ಕಚೇರಿಗೆ ಅನುಮತಿ ಪತ್ರಕ್ಕಾಗಿ ಅಲೆಯಬೇಕು. ಇದೊಂದು ಬಗೆಯ ಹಿಂಸೆ.  ಈ ಬಗೆಯ ನಿಯಮವನ್ನು ಬದಲಿಸುವಂತೆ ಕಳೆದ ಆರು  ವರ್ಷಗಳಿಂದ ಸರಕಾರಕ್ಕೆ ಪತ್ರವನ್ನು ಬರೆಯುತ್ತಲೇ ಇದ್ದೇವೆ. ನಾವು ಅನುಮತಿ ಪಡೆಯದಿದ್ದರೆ ಸರಕಾರ ನಮ್ಮ ಮೇಲೆ ಕ್ರಮ ಕೈಗೊಳ್ಳುವ ಭೀತಿ ಇದೆ. ನಾವು ಪ್ರತೀ ವರ್ಷ ಕುರ್ಬಾನಿ ಮಾಡುತ್ತೇವೆಂದು ಸರಕಾರಕ್ಕೆ ಗೊತ್ತಿದೆ. ಮತ್ತೇಕೆ ಪ್ರತಿ ವರ್ಷ ಅನುಮತಿ ಪತ್ರಕ್ಕಾಗಿ ಸತಾಯಿಸುತ್ತಾರೆಂಬುದು ಗೊತ್ತಾಗುತ್ತಿಲ್ಲ. ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಕುರ್ಬಾನಿಗಾಗಿ ಒಂದು ಕಾನೂನು ಮಾಡಿ ಪ್ರತೀ ವರ್ಷ ಅಲೆದಾಡಿಸುವುದರಿಂದ ಮುಕ್ತಿ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.