ಆರೆಸ್ಸೆಸ್ ಕಾರ್ಯಕರ್ತನ ದೂರು: ASP ಯ ವೇತನ ತಡೆಹಿಡಿದು ಇನ್ ಸ್ಪೆಕ್ಟರ್ ಗೆ ಹಿಂಬಡ್ತಿ ನೀಡಿದ ಮಧ್ಯಪ್ರದೇಶ ಸರಕಾರ 

0
932
ಸಾಂದರ್ಭಿಕ ಚಿತ್ರ

ಆರೆಸ್ಸೆಸ್ ಪ್ರಚಾರಕನಿಗೆ ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಸರಕಾರವು ಮೂವರು ಪೊಲೀಸ್ ಅಧಿಕಾರಿಗಳಿಗೆ ಹಿಂಬಡ್ತಿ ನೀಡಿದೆ ಮತ್ತು ಓರ್ವ ಹೆಚ್ಚುವರಿ ಸುಪರಿಟೆಂಡೆಂಟ್ ಆಫ್ ಪೊಲೀಸ್ (ASP) ದರ್ಜೆಯ ಅಧಿಕಾರಿಯ ವೇತನ ಹೆಚ್ಚಳವನ್ನು ತಡೆಹಿಡಿದಿದೆ ಎಂದು ದ  ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

https://indianexpress.com/article/india/rss-leaders-assault-in-custody-mp-govt-demotes-3-cops-withholds-hike-of-another-5285546/
ಈ ಪ್ರಕರಣ ನಡೆದಿರುವುದು ಎರಡು ವರ್ಷಗಳ ಹಿಂದೆ. ಬಾಲಘಾಟ್ ಜಿಲ್ಲೆಯ ಬೈಹಾರ್ ನಗರದ ಆರೆಸ್ಸೆಸ್ ಕಚೇರಿಯಿಂದ ಸುರೇಶ ಯಾದವ್ ಎಂಬ ಈ ಪ್ರಚಾರಕನನ್ನು ಸೆಪ್ಟೆಂಬರ್ 25, 2016 ರಂದು ಬಂಧಿಸಲಾಗಿತ್ತು. ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿ  ಈ ಬಂಧನ ನಡೆದಿತ್ತು. ಆದರೆ, ಆ ಬಂಧನವನ್ನು ವಿರೋಧಿಸಿ ಆರೆಸ್ಸೆಸ್ ಕಾರ್ಯಕರ್ತರು ಬೈಹಾರ್ ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದ್ದರು. ಬಂಧಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಬಳಿಕ ASP ರಾಜೇಶ್ ಕುಮಾರ್ ಮತ್ತು ಇನ್ ಸ್ಪೆಕ್ಟರ್ ಜಿಯಾವುಲ್ ಹಕ್ ರ ವಿರುದ್ಧ ಹತ್ಯಾ ಯತ್ನವೂ ಸೇರಿದಂತೆ ಹಲವಾರು ಸೆಕ್ಷನ್ ಗಳ ಅಡಿಯಲ್ಲಿ ಕೇಸು ದಾಖಲಾದುವು. ತನಗೆ ಕಸ್ಟಡಿಯಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಸುರೇಶ್ ಯಾದವ್ ಆರೋಪಿಸಿದರು.
ಮರುದಿನ ಆರೆಸ್ಸೆಸ್ ಇನ್ನಷ್ಟು ಕಠಿಣ ನಿಲುವನ್ನು ಪ್ರದರ್ಶಿಸಿತು. ಒಂದೋ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕು ಇಲ್ಲವೇ ಪ್ರತಿಭಟನೆ ಮಾಡಲಾಗುವುದು ಎಂದು ಸರಕಾರವನ್ನು ಎಚ್ಚರಿಸಿತು. ಆದರೆ, ಪೊಲೀಸರು ಕಸ್ಟಡಿ ಹಿಂಸೆಯನ್ನು ನಿರಾಕರಿಸಿದರು. ಅಲ್ಲದೆ, ಬಂಧಿಸಲು ಹೋದಾಗ ಸಹಕರಿಸದ ಕಾರಣ ಬಲಪ್ರಯೋಗಿಸಬೇಕಾಯಿತು ಎಂದು ಸಮರ್ಥಿಸಿಕೊಂಡರು. ಬಳಿಕ ಸರಕಾರವು ಆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತು ಮತ್ತು ಜಿಲ್ಲಾ SP ಮತ್ತು IG ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿತು. ಜೊತೆಗೆ, ಈ ಕುರಿತಂತೆ ತನಿಖೆ ನಡೆಸಲು ಸಿಟ್ ಅನ್ನು ರೂಪಿಸಿತು.
ಕಳೆದವರ್ಷವೇ ಸಿಟ್ ವರದಿಯನ್ನು ಸರಕಾರಕ್ಕೆ ಒಪ್ಪಿಸಿತ್ತಾದರೂ ಸರಕಾರ ವರದಿಯ ಅಂಶಗಳನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ನಾಲ್ವರು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕಾರ  ASP ಶರ್ಮಾರ ವೇತನ ಏರಿಕೆಯನ್ನು ತಡೆಹಿಡಿಯಲಾಗಿದ್ದರೆ ; ಇನ್ ಸ್ಪೆಕ್ಟರ್ ಆಗಿದ್ದ ಹಖ್ ರನ್ನು ಸಬ್ ಇನ್ ಸ್ಪೆಕ್ಟರ್ ಆಗಿಯೂ ಸಬ್ ಇನ್ ಸ್ಪೆಕ್ಟರ್ ಆಗಿದ್ದ ಅನಿಲ್ ಅಜಮೇರಿ ಮತ್ತು ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರ್(ASI) ಆಗಿದ್ದ ಸುರೇಶ್ ವಿಜಯುರ್ ಅವರನ್ನು ಕ್ರಮವಾಗಿ ASI ಮತ್ತು ಹೆಡ್ ಕಾನ್ಸ್ಟೇಬಲ್ ಆಗಿ ಹಿಂಬಡ್ತಿ ನೀಡಲಾಗಿದೆ.