ಸನ್ಮಾರ್ಗ ವಾರ್ತೆ
ಅಹಮದಾಬಾದ್: ಸಾರ್ವಜನಿಕ ಉದ್ಯಾನವನದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಳಾ ಯೂಸುಫ್ಝಾಯ್ ಮತ್ತು ಅನ್ನೇ ಫ್ರಾಂಕ್ ಅವರ ಪುಸ್ತಕಗಳನ್ನು ಓದುತ್ತಿದ್ದ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಮಲಾಳಾ ಅವರ ಪುಸ್ತಕಗಳಲ್ಲಿ “ಭಾರತ ವಿರೋಧಿ ವಿಚಾರಗಳಿವೆ” ಎಂದು ಸಂಘ ಪರಿವಾರದ ಅಂಗಸಂಸ್ಥೆಯಾದ ಬಜರಂಗದಳ ಆರೋಪಿಸಿದೆ.
ಅಹಮದಾಬಾದ್ನ ವಸ್ತ್ರಾಪುರ ಪ್ರದೇಶದ ಉದ್ಯಾನವನವೊಂದರಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಓದುಗರ ಸಂಘದ ನೇತೃತ್ವ ವಹಿಸಿದ್ದ ಉದ್ಯಮಿ ಜೈ ಠಕ್ಕರ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ ಬಜರಂಗದಳದ ಹೆಸರು ಉಲ್ಲೇಖಿಸದಿದ್ದರೂ, ಇಬ್ಬರು ಬಜರಂಗದಳ ಮುಖಂಡರಾದ ಹಿರಣ್ ರಬಾರಿ ಮತ್ತು ಜಿಮಿತ್ ರಬಾರಿ ಸೇರಿದಂತೆ 18 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ದಾಳಿಯಲ್ಲಿ ಭಾಗವಹಿಸಿದವರು ಕೇಸರಿ ಶಾಲುಗಳನ್ನು ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಆಯೋಜಿಸಲಾಗಿದ್ದ ಓದುವಿಕೆ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರು ಉದ್ಯಾನವನದಲ್ಲಿ ಸೇರಿದ್ದರು. ಸಂಜೆ 6 ಗಂಟೆ ಸುಮಾರಿಗೆ ದೊಣ್ಣೆಗಳೊಂದಿಗೆ ಆಗಮಿಸಿದ ಗುಂಪೊಂದು, ಮಲಾಳಾ ಪುಸ್ತಕವನ್ನು ಯಾಕೆ ಓದುತ್ತಿದ್ದೀರಿ ಎಂದು ಪ್ರಶ್ನಿಸಿ ನಂತರ ದಾಳಿ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪುಸ್ತಕಗಳನ್ನು ಓದುತ್ತಿದ್ದ ಕಾರಣಕ್ಕಾಗಿ ಕೆಲವರಿಗೆ ಹೊಡೆಯಲಾಗಿದೆ, ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಮತ್ತು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಕಾಶ್ಮೀರ ವಿಷಯದಲ್ಲಿ ಮಲಾಳಾ ಯೂಸುಫ್ಝಾಯ್ ಭಾರತ ವಿರೋಧಿ ನಿಲುವು ತಾಳಿದ್ದಾರೆ ಮತ್ತು ಅದಕ್ಕಾಗಿಯೇ ನಾವು ಅವರ ಪುಸ್ತಕದ ಓದುವಿಕೆಯನ್ನು ವಿರೋಧಿಸುತ್ತಿದ್ದೇವೆ ಎಂದು ಬಜರಂಗದಳದ ಸ್ಥಳೀಯ ನಾಯಕ ಜ್ವಾಲಿತ್ ಮೆಹ್ತಾ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಅಹಮದಾಬಾದ್ನ ಖಾಸಗಿ ಶಾಲೆಯ ಗ್ರಂಥಾಲಯದಲ್ಲಿ ಮಲಾಳಾ ಅವರ ಆತ್ಮಕಥೆ ‘ಐ ಆಮ್ ಮಲಾಳಾ: ದಿ ಗರ್ಲ್ ಹೂ ಸ್ಟುಡ್ ಅಪ್ ಫಾರ್ ಎಜುಕೇಶನ್ ಅಂಡ್ ವಾಸ್ ಶಾಟ್ ಬೈ ದಿ ತಾಲಿಬಾನ್’ ಮತ್ತು ನರಮೇಧದ (ಹೋಲೋಕಾಸ್ಟ್) ಸಂದರ್ಭದ ತಮ್ಮ ಅನುಭವಗಳನ್ನು ವಿವರಿಸುವ ಅನ್ನೇ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ಸೇರಿಸುವುದನ್ನು ವಿರೋಧಿಸಿ ಕೆಲವು ಪೋಷಕರು ಮತ್ತು ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.












