ಬ್ಯಾರಿ ಸಾಂಸ್ಕೃತಿಕ ಭವನಕ್ಕೆ ವಿರೋಧ ಸಲ್ಲದು- ಬಷೀರ್ ಬೈಕಂಪಾಡಿ

0
444

ಸನ್ಮಾರ್ಗ ವಾರ್ತೆ

ಮಂಗಳೂರು: ಜನವರಿ ಒಂದರಂದು ನಡೆಯ ಬೇಕಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ಹಾಗೂ ಬ್ಯಾರಿ ಸಾಂಸ್ಕೃತಿಕ ಭವನದ ಶಿಲಾನ್ಯಾಸಕ್ಕೆ ಕೆಲವು ಸ್ಥಾಪಿತ ಹಿತಾಸಕ್ತಿಗಳಿಂದ ವಿರೋಧ ವ್ಯಕ್ತವಾಗಿದ್ದು ಇದು ಖಂಡನೀಯ ಎಂದು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಬ್ಯಾರಿ ವಾರ್ತೆ ಪತ್ರಿಕೆಯ ಸಂಪಾದಕ ಬಷೀರ್ ಬೈಕಂಪಾಡಿ ಪತ್ರಿಕಾ ಹೇಳಿಕೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರಕಾರದ ವತಿಯಿಂದ ನಡೆಯಲ್ಪಡುವ ಅಕಾಡೆಮಿಯಲ್ಲಿ ಪ್ರಸಕ್ತ ಹನ್ನೊಂದು ಸದಸ್ಯರ ಪೈಕಿ ಆರು ಮಂದಿ ಮುಸ್ಲಿಮೇತರರು ಸದಸ್ಯರಾಗಿದ್ದು ಮುಸ್ಲಿಮೇತರ ಕಲಾವಿದರು ಪ್ರಶಸ್ತಿಯನ್ನು ಪಡೆದಿದ್ದಾರೆ. ಅಕಾಡೆಮಿ ಒಂದು ಧರ್ಮೀಯರಿಗೆ ಸೀಮಿತವಾಗಿದ್ದರೆ ಇದೆಲ್ಲಾ ಹೇಗೆ ಸಾಧ್ಯ? ಆದ್ದರಿಂದ ಭಾಷೆ ಕಲೆ ಸಾಹಿತ್ಯದ ಚಟುವಟಿಕೆ ಕೇಂದ್ರಕ್ಕೂ ಒಂದು ಸಮುದಾಯದ ಧಾರ್ಮಿಕ ಚಟುವಟಿಕೆಗೂ ನಂಟು ಕಲ್ಪಿಸುವುದು ಸರಿಯಲ್ಲ. ತುಳು ಕೊಂಕಣಿ ಕೊಡವ ಅರೆಭಾಷೆಗೂ ನೀಡಿದ ಸಮಾನ ಗೌರವ ಬ್ಯಾರಿ ಭಾಷೆಗೂ ನೀಡಬೇಕು. ಸರಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಬೇಕೆಂದೂ ತಪ್ಪಿದಲ್ಲಿ ಬ್ಯಾರಿ ಮಲಾಮೆ ಮೋಯಾ ತೀಯ ಮುಂತಾದ ಸಮಾನ ಮನಸ್ಕ ಭಾಷಾ ಸಂಘಟನೆಗಳು ಸೇರಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಷೀರ್ ಬೈಕಂಪಾಡಿ ತಿಳಿಸಿದ್ದಾರೆ