ಬೆಳ್ತಂಗಡಿ ಹಲ್ಲೆ ಪ್ರಕರಣ: ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ ಭೇಟಿ

0
1018

ಸನ್ಮಾರ್ಗ ವಾರ್ತೆ

ಮಂಗಳೂರು: ದನಗಳ್ಳರೆಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬ್ದುರ್ರಹೀಂ ಮತ್ತು ಮುಸ್ತಫಾರನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿಯವರ ನೇತೃತ್ವದ ನಿಯೋಗವು ಭೇಟಿ ಮಾಡಿ ಸಾಂತ್ವನ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಸಂತ್ರಸ್ತರಿಬ್ಬರೂ ಆ ಸಂದರ್ಭದ ಕ್ರೌರ್ಯವನ್ನು ನಿಯೋಗದೊಂದಿಗೆ ಮೆಲುಕು ಹಾಕಿಕೊಂಡರು.

ತಾವು ದನಸಾಗಾಟ ವ್ಯವಹಾರ ಮಾಡುತ್ತಿಲ್ಲವೆಂದೂ, 25ರಷ್ಟಿದ್ದ ಮಂದಿ ಸಂದೇಹ ವ್ಯಕ್ತಪಡಿಸಿ ತಮ್ಮ ಮೇಲೆ ಸುಮಾರು 45 ನಿಮಿಷಗಳವರೆಗೆ ಮನಸೋ ಇಚ್ಚೆ ಥಳಿಸಿದರೆಂದೂ ಅಬ್ದುರ್ರಹೀಂ ತಿಳಿಸಿದರು.

ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ರಾತ್ರಿ ಹತ್ತು ಗಂಟೆಯ ವೇಳೆ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಇಬ್ಬರು ಬೈಕಿನಲ್ಲಿ ಬಂದು ಪಿಕ್ ಅಪ್ ನ್ನು ನಿಲ್ಲಿಸಲು ಸೂಚಿಸಿದರು. ಏನು ದನ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಾವು ಏನೂ ತಪ್ಪು ಮಾಡಿಲ್ಲದ ಕಾರಣ ವಾಹನ ನಿಲ್ಲಿಸಿದೆವು. ಅವರು ವಾಹನ ತಪಾಸಿಸಿದರು. ಬಳಿಕ ಫೋನಲ್ಲಿ ಯಾರದ್ದೋ ಜೊತೆ ಮಾತಾಡುತ್ತ, ದನ ಇಲ್ಲ ಎಂದು ಹೇಳುವುದೂ ಕೇಳಿಸಿತು. ಆ ಬಳಿಕ ಬೇರೆ ಬೇರೆ ವಾಹನಗಳಲ್ಲಿ ತಕ್ಷಣ ಪ್ರತ್ಯಕ್ಷರಾದ ಸುಮಾರು 25 ರಷ್ಟಿದ್ದ ಗುಂಪು ವಿನಾಕಾರಣ ಥಳಿಸಿತು. ಅವಾಚ್ಯ ಪದಗಳನ್ನು ಬಳಸಿತು. ಗುಂಪು ನಮ್ಮನ್ನು ಸಾಯಿಸುವಂತೆ ಹೇಳುತ್ತಿತ್ತು. ಪೊಲೀಸರು ಬರದೇ ಇರುತ್ತಿದ್ದರೆ ತಮ್ಮ ಸಾವು ಸಂಭವಿಸುತ್ತಿತ್ತು ಎಂದವರು ಹೇಳಿದರು.

ಪೊಲೀಸರು ಚೆನ್ನಾಗಿ ನಡೆಸಿಕೊಂಡಿದ್ದಾರೆ. ಆಗಲೇ ನಾಲ್ಕೈದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಅವರಲ್ಲಿ ಕತ್ತಿ ಇತ್ತು. ಆದರೆ ಅದು ಅವರ ಕೈಯಿಂದ ಉದುರಿ ಪೊದೆಗೆ ಬಿದ್ದುದರಿಂದ ನಾವು ಬಚಾವಾದೆವು. ಓರ್ವ ನನ್ನ ಕತ್ತನ್ನು ಅಮುಕಿದ. ಎದೆಗೆ ತುಳಿಯಲು ಬಂದಾಗ ಉತ್ತರ ಪ್ರದೇಶದ ಅಖ್ಲಾಕ್ ಘಟನೆ ನೆನಪಿಗೆ ಬಂದು ತಕ್ಷಣ ಎದ್ದು ನಿಂತೆ ಎಂದವರು ಸಂಕಟ ತೋಡಿಕೊಂಡರು.

ನಮಗೂ ಆ ಗುಂಪಿಗೆ ಯಾವ ಪರಿಚಯವೂ ಇಲ್ಲ. ಅಲ್ಲೇ ಅವರನ್ನು ಮೊದಲ ಬಾರಿ ನೋಡಿದ್ದು. ನಮ್ಮ ಊರು ಬೇರೆ. ಅದು ನಮ್ಮ ಸಂಬಂಧಿಕರ ಊರು. ನಮಗೂ ಅವರಿಗೂ ಜಗಳ ನಡೆದಿತ್ತು ಎಂಬ ಮಾತು ಬರೇ ವದಂತಿ ಎಂದವರು ಸ್ಪಷ್ಟಪಡಿಸಿದರು.

ಅಬ್ದುಲ್ ರಹೀಮ್ ಅವರಿಗೆ ಮೂವರು ಮಕ್ಕಳು. ಎರಡು ಗಂಡು ಒಂದು ಹೆಣ್ಣು. ಮುಸ್ತಫಾರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಜಮಾತಿನ ನಿಯೋಗವು ಅವರ ಮಾತುಗಳನ್ನು ಆಲಿಸಿ ಧೈರ್ಯ ತುಂಬಿತು.ನಿಯೋಗದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷರಾದ ಕೆ.ಎಂ. ಅಶ್ರಫ್, ಸಾಮಾಜಿಕ ಕಾರ್ಯಕರ್ತರಾದ ಶಬ್ಬೀರ್, ಮುಹ್ಸಿನ್ ಮತ್ತು ವಿದ್ಯಾ ದಿನಕರ್, ಏ.‌ಕೆ.‌ ಕುಕ್ಕಿಲ, ಎಸ್.ಐ‌.ಓ. ನ ಇರ್ಷಾದ್ ವೇಣೂರು, ಎಪಿಸಿಆರ್ ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನ್ಯಾಯವಾದಿ ಸರ್ಫರಾಜ್ ಉಪಸ್ಥಿತರಿದ್ದರು.