ಸನ್ಮಾರ್ಗ ವಾರ್ತೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಾದ ದೇವನಹಳ್ಳಿ ಬಳಿ ಇರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ವೇಳೆ ಸಿಲಿಂಡರ್ ಒಂದು ಸ್ಫೋಟಗೊಂಡ ಪರಿಣಾಮ 6 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾದ ಘಟನೆ ನಡೆದಿದೆ.
ಕೆಐಎಎಲ್ ನ ಎರಡನೇ ಟರ್ಮಿನಲ್ ಗಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು-ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನು ರಸ್ತೆಗೆ ಬಳಿಯಲಾಗುತ್ತಿತ್ತು. ಇದಕ್ಕಾಗಿ ವಾಹನವೊಂದರಲ್ಲಿ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನ ಬಿಸಿ ಮಾಡುವ ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ಸಂದರ್ಭ ಕಾಮಗಾರಿ ನಿರತರಾಗಿದ್ದ 6 ಮಂದಿ ಕಾರ್ಮಿಕರು ಗಾಯಗೊಂಡರು.
ಸ್ಪೋಟದ ರಭಸಕ್ಕೆ ವಾಹನಕ್ಕೂ ಕೂಡ ಬೆಂಕಿ ತಗುಲಿದೆ. ಗಾಯಗೊಂಡಿರುವ ಕಾರ್ಮಿಕರನ್ನು ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೇಂಪೇಗೌಡ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












