ವಿಚಾರಣಾಧೀನ ಕೈದಿಗಳಲ್ಲಿ ಮೂವರಲ್ಲಿ ಒಬ್ಬ ದಲಿತ/ಆದಿವಾಸಿ!

0
816

ನವದೆಹಲಿ: ಭಾರತದಲ್ಲಿ ಪರಿಶಿಷ್ಟ ಜಾತಿ(ಎಸ್ ಸಿ) ಮತ್ತು ಪರಿಶಿಷ್ಟ ಪಂಗಡಗಳ(ಎಸ್ ಟಿ) ಜನಸಂಖ್ಯೆಯು 24% ಆಗಿದೆ ಆದರೆ ಈ ಎರಡೂ ವರ್ಗಗಳ ಜನಸಂಖ್ಯೆಗಿಂತಲೂ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪರಿಣಾಮದಲ್ಲಿ ತೀವ್ರ ಏರಿಕೆ ಇದ್ದು 34% ಪ್ರಮಾಣ ಕೈದಿಗಳನ್ನು ಹೊಂದಿರುವುದಾಗಿ ಹೊಸ ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ.

ನ್ಯಾಷನಲ್ ದಲಿತ್ ಮೂವ್ಮೆಂಟ್ ಫಾರ್ ಜಸ್ಟೀಸ್ ಹಾಗೂ ನ್ಯಾಷನಲ್ ಸೆಂಟರ್ ಫಾರ್ ದಲಿತ್ ಹ್ಯೂಮನ್ ರೈಟ್ಸ್ ಗಳ ಜಂಟಿ ಆಶ್ರಯದಲ್ಲಿ “ಜಾತಿಯ ನೆರಳಲ್ಲಿ ಕ್ರಿಮಿನಲ್ ನ್ಯಾಯ”(criminal Justice in the shadow of caste )ಎಂಬ ಶೀರ್ಷಿಕೆಯಡಿಯಲ್ಲಿ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ(NCRB) ದತ್ತಾಂಶಗಳನ್ನು ಆಧಾರವಾಗಿರಿಸಿಕೊಂಡು ತಯಾರಿಸಿದ ವರದಿಯಲ್ಲಿ ಈ ಆಶ್ಚರ್ಯಕರ ಸತ್ಯಾಂಶವು ತಿಳಿದು ಬಂದಿದೆ.

ಅಸ್ಸಾಂ, ತಮಿಳು ನಾಡು, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರ ಪರಿಸ್ಥಿತಿಯು ಅತ್ಯಂತ ಕೆಳಮಟ್ಟದಲ್ಲಿರುವುದನ್ನು ವರದಿಯು ಬಹಿರಂಗ ಪಡಿಸಿದೆ. ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಟ್ಟು ಜನಸಂಖ್ಯೆಯು 21% ಆಗಿದ್ದು, ಕೈದಿಗಳ ಪ್ರಮಾಣದಲ್ಲಿ 17% ಹೆಚ್ಚಳವಿದೆ. ಇದರಲ್ಲಿಯೂ ಕೂಡ ವಿಚಾರಣಾಧೀನ ಕೈದಿಗಳಲ್ಲಿ 38% ಪ್ರಮಾಣವು ಎಸ್ ಸಿ/ ಎಸ್ ಟಿ ಸಮುದಾಯದವರನ್ನು ಹೊಂದಿದೆ.

“ಪೋಲಿಸರು ದಲಿತರು ಮತ್ತು ಆದಿವಾಸಿಗಳನ್ನೇ ಅಪರಾಧಿ ಕೃತ್ಯಗಳಲ್ಲಿ ಬಂಧಿಸುತ್ತಿರುವುದು ಕಾರ್ಯಾಚರಣಾ ವಿಧಾನಗಳ ಮೇಲೆ ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದ್ದು, ಪ್ರತ್ಯೇಕ ಸಮುದಾಯಗಳನ್ನು ಬಲಿಪಶು ಗಳನ್ನಾಗಿಸಲಾಗುತ್ತಿದೆಯೇ ಎಂಬ ಅನುಮಾನವು ಸತ್ಯಾಂಶಗಳಿಗೆ ನಿಕಟತೆಯನ್ನು ತೋರುತ್ತಿದೆ”ಎಂದು ವರದಿಯು ಬಿತ್ತರಿಸಿದೆ.

2015 ರ ಎನ್ ಸಿ ಆರ್ ಬಿ ವರದಿಯ ಪ್ರಕಾರ ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮ್ ವಿಚಾರಣಾಧೀನ ಕೈದಿಗಳ ಪ್ರಮಾಣವು 55% ಆಗಿತ್ತೆಂದು ತಿಳಿದು ಬರುತ್ತದೆ. ಇದಲ್ಲದೇ ನ್ಯಾಷನಲ್ ಲಾ ಯುನಿವರ್ಸಿಟಿ 2016 ರಲ್ಲಿ ತಯಾರಿಸಿದ ಜೀವಾವಧಿ ಶಿಕ್ಷೆ ವಿಧಿಸಿದ ವರದಿಗಳ ದತ್ತಾಂಶದ ಪ್ರಕಾರ 279 ರಲ್ಲಿ 127 ಕೈದಿಗಳು(34%) ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆಂಬುದು ತಿಳಿದು ಬರುತ್ತದೆ. ಸಾಮಾನ್ಯ ವರ್ಗದಲ್ಲಿ ಈ ಪ್ರಮಾಣವು 24% ಆಗಿದೆ. ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಇದರ ಪ್ರಮಾಣವು 20% ಆಗಿದೆ. ಗುಜರಾತ್ ನ ದತ್ತಾಂಶಗಳ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಒಟ್ಟು 19 ಕೈದಿಗಳಲ್ಲಿ 15 ಕೈದಿಗಳು(79%) ಮುಸ್ಲಿಮರಾಗಿದ್ದಾರೆಂಬುದರ ಕುರಿತು ವರದಿಯು ತಿಳಿಸಿದೆ.

“ಪೋಲಿಸರು ವಿಚಾರಣೆಗಳಿಗೆ ಸಂಬಂಧಿಸಿದಂತೆ ದಲಿತರು ಮತ್ತು ಆದಿವಾಸಿಗಳನ್ನೇ ಹೆಕ್ಕಿ ತೆಗೆಯುತ್ತಿರುವುದು ಹಾಗೂ ಸರಿಯಾದ ರೀತಿಯ ಚಾರ್ಜ್ ಶೀಟ್ ಗಳನ್ನಾಗಲಿ, ತನಿಖೆಯನ್ನು ಸಂಪೂರ್ಣಗೊಳಿಸುವುದನ್ನಾಗಲಿ ಮಾಡದೇ ಇರುವುದರ ಪರಿಣಾಮವಾಗಿ ತಮ್ಮ ಮೇಲೆ ಯಾವ ಆರೋಪಗಳಿವೆ ಎಂಬುದರ ಕುರಿತಾದ ಮಾಹಿತಿ ಇಲ್ಲದ ಅಮಾಯಕರ ಸಂಖ್ಯೆಯು ಹೆಚ್ಚಾಗಿದೆ” ಎಂದು ವರದಿಯು ಆರೋಪಿಸಿದೆ.