ಡಿಜಿಟಲ್ ಚಟಕ್ಕೆ ಬಿಹಾರದಲ್ಲಿ ಬ್ರೇಕ್: ಮಕ್ಕಳ ‘ಸ್ಕ್ರೀನ್ ಟೈಮ್’ ನಿಯಂತ್ರಣಕ್ಕೆ ಹೊಸ ನೀತಿ!

0
248

ಸನ್ಮಾರ್ಗ ವಾರ್ತೆ

ಬಿಹಾರದಲ್ಲಿ ಮಕ್ಕಳಲ್ಲಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನೀತಿಯನ್ನು ರೂಪಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಕ್ಕಳು ಸಾಮಾಜಿಕ ಮಾಧ್ಯಮ ರೀಲ್ಸ್ ಮತ್ತು ಆನ್‌ಲೈನ್ ಆಟಗಳಿಗೆ ಹೆಚ್ಚು ಅವಲಂಬಿತರಾಗುತ್ತಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಫೆಬ್ರವರಿ 23ರಂದು ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸರ್ಕಾರ ಈ ಮಾಹಿತಿ ನೀಡಿದೆ.

ಈ ಕುರಿತು ಮಾರ್ಗಸೂಚಿಗಳನ್ನು ಪಡೆಯಲು ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಜ್ಞರನ್ನು ಸಂಪರ್ಕಿಸಲಾಗಿದೆ. ಐಟಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಈ ನೀತಿಯನ್ನು ಜಾರಿಗೆ ತರಲಿವೆ ಎಂದು ಐಟಿ ಸಚಿವ ಶ್ರೇಯಸಿ ಸಿಂಗ್ ತಿಳಿಸಿದ್ದಾರೆ. ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಲು ಪೋಷಕರು, ಶಾಲೆಗಳು ಮತ್ತು ಸಮುದಾಯದೊಂದಿಗೆ ಸಮನ್ವಯ ಸಾಧಿಸಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ನಿಮ್ಹಾನ್ಸ್‌ನ ವರದಿ ಬಂದ ನಂತರ ವಿವಿಧ ಇಲಾಖೆಗಳ ಸಭೆ ನಡೆಸಿ ಹೊಸ ನಿಯಮಗಳನ್ನು ಘೋಷಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಜೆಡಿಯು ಶಾಸಕ ಸಮೃದ್ಧಿ ವರ್ಮಾ ಅವರು, ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಮಕ್ಕಳು ಗಂಟೆಗಟ್ಟಲೆ ಮೊಬೈಲ್ ಬಳಸುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಮಾತ್ರವಲ್ಲದೆ ನಿರ್ದಿಷ್ಟ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಸಮಯದ ಮಿತಿಯನ್ನು ವಿಧಿಸಬೇಕು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಗಮನ ಹರಿಸಿದೆ ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಜೊತೆಗೆ ಬಿಹಾರಕ್ಕೆ ಪ್ರತ್ಯೇಕ ಮತ್ತು ಸಮಗ್ರ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.