ಬಿಹಾರ ಚುನಾವಣೆಯಲ್ಲಿ ಹಿನ್ನಡೆ; ಕಾಂಗ್ರೆಸ್ಸಿನೊಳಗೆ ತಳಮಳ

0
502

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.12: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದ್ದು ಭಿನ್ನಮತ ತೀವ್ರಗೊಂಡಿದೆ. ನಾಲ್ಕು ವರ್ಷದ ಹಿಂದೆ ಪ್ರಮುಖ ನಾಯಕರು ಭಿನ್ನ ಧ್ವನಿಯನ್ನು ಎತ್ತಿದ ಅಲೆಗಳು ಶಮನಗೊಳ್ಳುವ ಮೊದಲೇ ಇನ್ನೊಂದು ಭಿನ್ನಮತದ ಅಲೆ ಎದ್ದಿದೆ. ಗಾಂಧಿ ಕುಟುಂಬವನ್ನು ಪ್ರಶ್ನಿಸುವ ರೀತಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗುವ ಸೂಚನೆ ಲಭ್ಯವಾಗಿದೆ. ಆರ್‌ಜೆಡಿ, ಎಡಪಕ್ಷಗಳ ಸೋಲಿಗೆ ಕಾಂಗ್ರೆಸ್‍ನ ನಿರಾಶಜನಕ ಪ್ರದರ್ಶನ ಎಂದು ಹಿರಿಯ ನಾಯಕರು ಭಿನ್ನಮತ ವ್ಯಕ್ತಪಡಿಸಿದರು.

ಬಿಹಾರದಲ್ಲಿ 70 ಸೀಟುಗಳಲ್ಲಿ ಸ್ಪರ್ಧಿಸಿ ಕೇವಲ 19 ಸೀಟುಗಳನ್ನು ಮಾತ್ರ ಗೆಲ್ಲಲು ಕಾಂಗ್ರಸ್‌ಗೆ ಸಾಧ್ಯವಾಗಿದೆ. 144 ಸೀಟುಗಳಲ್ಲಿ ಸ್ಪರ್ಧಿಸಿದ ಆರ್‍ಜೆಡಿ 75 ಸೀಟುಗಳಲ್ಲಿ ಗೆಲುವು ಪಡೆದಿದೆ. ಈವರೆಗೆ ಮುಖ್ಯ ಧಾರೆಯಲ್ಲಿಲ್ಲದ ಸಿಪಿಐ (ಎಂಎಲ್) 19 ಸೀಟುಗಳಲ್ಲಿ 12 ಸೀಟುಗಳಲ್ಲಿ ಗೆದ್ದಿದೆ. ಮಹಾಘಟ್‍ಬಂಧನ್‍ನಲ್ಲಿ ಅತ್ಯಂತ ಕನಿಷ್ಠ ವಿಜಯವನ್ನು ಕಾಂಗ್ರೆಸ್ ದಾಖಲಿಸಿದೆ.

ಇದೇವೇಳೆ, ಅಭ್ಯರ್ಥಿ ನಿರ್ಣಯದಲ್ಲಿ ತಪ್ಪು, ಎಐಎಂಐಎಂನ ಗೆಲುವು ಮೂರನೇ ಹಂತದ ಚುನಾವಣೆಯಲ್ಲಿ ನಡೆದ ಧೃವೀಕರಣ ಕಾಂಗ್ರೆಸ್ ಹಿನ್ನಡೆಗೆ ಕಾರಣವೆಂದು ಚುನಾವಣಾ ಉಸ್ತುವಾರಿಯಲ್ಲಿದ್ದ ಕಾಂಗ್ರೆಸ್ ನಾಯಕರು ಕಾರಣ ತೋರಿಸುತ್ತಿದ್ದಾರೆ. ಸಖ್ಯದ ಯಾವ ಪಾರ್ಟಿಯೂ 30 ವರ್ಷಗಳಿಂದ ಗೆಲ್ಲದ 26 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕಾಯಿತೆಂದು ಇವರು ಹೇಳುತ್ತಿದ್ದಾರೆ. ಆದರೆ ಭಿನ್ನ ಅಭಿಪ್ರಾಯ ಹೊಂದಿದವರು ನಾಯಕತ್ವದ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ತಮ್ಮನ್ನು ಪ್ರಚಾರದಿಂದ ದೂರ ನಿಲ್ಲಿಸಿ ಅಸಮರ್ಥರನ್ನು ಪ್ರಚಾರಕ್ಕೆ ಕಳುಹಿಸಲಾಯಿತು ಎಂದು ಇವರು ಹೇಳುತ್ತಿದ್ದಾರೆ.

ಬಿಹಾರ ಕಾಂಗ್ರೆಸ್ ನಾಯಕರನ್ನೇ ಮೂಲೆಗಿಡಲಾಯಿತೆಂದು ಅವರು ಹೇಳುತ್ತಿದ್ದಾರೆ. ಬಿಹಾರ ಚುನಾವಣೆ ಮಾತ್ರವಲ್ಲ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಉಪಚುನಾವಣೆಯ ಸೋಲನ್ನೂ ಇದರೊಂದಿಗೆ ಸೇರಿಸಿ ನೋಡಬೇಕೆಂದು ಅವರು ಹೇಳಿದ್ದಾರೆ.