ಅನ್ಯಜಾತಿ ವಿವಾಹ; ತಂದೆ ಬೆದರಿಕೆ ಹಾಕಿದರೆಂದು ಬಿಜೆಪಿ ಶಾಸಕರ ಪುತ್ರಿಯ ಆರೋಪ

0
808

ಹೊಸದಿಲ್ಲಿ, ಜು. 11: ಅನ್ಯ ಜಾತಿಗೆ ಸೇರಿದ ಯುವಕನನ್ನು ಮದುವೆಯಾಗಿದ್ದಕ್ಕೆ ಬಿಜೆಪಿ ಶಾಸಕರಾಗಿರುವ ತಂದೆ ತನಗೆ ಬೆದರಿಕೆ ಹಾಕಿದ್ದಾರೆಂದು ಶಾಸಕರ ಪುತ್ರಿ ಹೇಳಿದ್ದಾರೆ. ಉತ್ತರಪ್ರದೇಶದ ಬಿಜೆಪಿ ಶಾಸಕ ರಾಜೇಶ್ ಮಿಶ್ರರ ಪುತ್ರಿ ಸಾಕ್ಷಿ ಮಿಶ್ರ ಈ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ದಲಿತ ವಿಭಾಗದ ಅಜಿತೇಶ್ ಕುಮಾರ್ ಎಂಬ ಯುವಕನನ್ನು ಸಾಕ್ಷಿ ಕಳೆದ ವಾರ ಮದುವೆಯಾಗಿದ್ದರು. ತಂದೆ ಕಳುಹಿಸಿದ ಗೂಂಡಾಗಳಿಂದ ಬಚ್ಚಿಟ್ಟು ಬದುಕುತ್ತಿದ್ದೇವೆ. ಶಾಂತಿಯಿಂದ ಬದುಕಲು ಅವಕಾಶ ಕೊಡಬೇಕು. ಪತಿಗೂ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ಸಂತೋಷ ಮತ್ತು ಸ್ವಾತಂತ್ರ್ಯದಿಂದ ಜೀವಿಸಲು ಅವಕಾಶ ಮಾಡಿಕೊಡಬೇಕೆಂದು ಲೈವ್ ವೀಡಿಯೊ ಮೂಲಕ ಸಾಕ್ಷಿ ಮನವಿ ಮಾಡಿದ್ದಾರೆ.

ತನಗೂ, ತನ್ನ ಪತಿ ಹಾಗೂ ಅವರ ಕುಟುಂಬಕ್ಕೆ ಏನಾದರೂ ಆದರೆ ಅದಕ್ಕೆ ತನ್ನ ತಂದೆ ಮತ್ತು ಸಹೋದರರು ಕಾರಣವಾಗಿದ್ದಾರೆ. ನಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಸಾಕ್ಷಿ ಮಿಶ್ರ ಆಗ್ರಹಿಸಿದರು. ಯುವತಿಯ ವೀಡಿಯೊವನ್ನು ಗಮನಿಸಿದ್ದೇವೆ. ದಂಪತಿಗಳಿಗೆ ಸುರಕ್ಷೆಯೊದಗಿಸಲು ಸೂಚನೆ ನೀಡಲಾಗಿದೆ ಎಂದು ಡೆಪ್ಯುಟಿ ಇನ್ಸಪೆಕ್ಟರ್ ಜನರ್ ಆರ್‍ಕೆ ಪಾಂಡೆ ತಿಳಿಸಿದರು. ಇದೇವೇಳೆ ಸಾಕ್ಷಿ ಮತ್ತು ಪತಿ ಎಲ್ಲಿದ್ದಾರೆಂದು ಗೊತ್ತಿಲ್ಲ. ಅವರು ಅವರೆಲ್ಲಿದ್ದಾರೆಂದು ತಿಳಿಸಲಿ ಎಂದು ಪಾಂಡೆ ಹೇಳಿದರು. ಪುತ್ರಿಯ ಆರೋಪಕ್ಕೆ ಶಾಸಕರು ಪ್ರತಿಕ್ರಿಯೆ ನೀಡಿಲ್ಲ.