ಪಂಜಾಬ್: ಲೂಧಿಯಾನ ಕೋರ್ಟ್‌ನಲ್ಲಿ ಸ್ಫೋಟ; ಇಬ್ಬರು ಮೃತ್ಯು

0
289

ಸನ್ಮಾರ್ಗ ವಾರ್ತೆ

ಲೂಧಿಯಾನ: ಪಂಜಾಬ್‌ನ ಲೂಧಿಯಾನದಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸ್ಫೋಟದಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಕಟ್ಟಡದ ಎರಡನೇ ಮಹಡಿಯಲ್ಲಿರುವ ಸ್ನಾನಗೃಹದಲ್ಲಿ ಮಧ್ಯಾಹ್ನ 12:22 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಯಿಂದಾಗಿ ಸ್ನಾನಗೃಹದ ಗೋಡೆಗಳು ಧ್ವಂಸಗೊಂಡಿದ್ದು ಹತ್ತಿರದ ಕೋಣೆಗಳ ಕಿಟಕಿಗಳ ಗಾಜುಗಳು ಪುಡಿಯಾಗಿವೆ.

ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ನ್ಯಾಯಾಲಯದ ಸಂಕೀರ್ಣವು ಲುಧಿಯಾನ ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಇದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘಟನೆಯ ಕುರಿತು ಕೂಲಂಕಷವಾಗಿ ತನಿಖೆ ಮಾಡುವಂತೆ ಪಂಜಾಬ್ ಪೊಲೀಸರಲ್ಲಿ ಮನವಿ ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಪಡೆಗಳಿಂದ ರಾಜ್ಯಕ್ಕೆ ಬೆದರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ರಕ್ಷಣೆಗಾಗಿ 25 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು(CAPF) ಮತ್ತು ಡ್ರೋನ್ ವಿರೋಧಿ ಗ್ಯಾಜೆಟ್‌ಗಳನ್ನು ಗಡಿ ಭದ್ರತಾ ಪಡೆಗೆ (BSF) ಬೇಡಿಕೆಯನ್ನಿರಿಸಿದ್ದರು.