ಮಂಗಳೂರು: ಕಾರ್ಮಿಕನ ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿದ ಪ್ರಕರಣ; ಆರು ಮಂದಿಯ ಬಂಧನ

0
215

ಸನ್ಮಾರ್ಗ ವಾರ್ತೆ

ಮಂಗಳೂರು: ನಗರದ ಬಂದರ್ ದಕ್ಕೆಯಲ್ಲಿ ಕಾರ್ಮಿಕನೊಬ್ಬನನ್ನು ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಆರು ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಕಳ್ಳತನದ ಆರೋಪ ಹೊರಿಸಿ ಆಂಧ್ರಪ್ರದೇಶ ಮೂಲದ ವೈಲ ಶೀನು ಎಂಬ ಮೀನುಗಾರನ ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಮೇಲೆ ಹಲ್ಲೆ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿ ಕೊಂಡೂರು ಪೋಲಯ್ಯ, ಅವುಲ ರಾಜ್ ಕುಮಾರ್, ಕಾಟಂಗರಿ ಮನೋಹರ್, ವೂಟುಕೋರಿ ಜಾಲಯ್ಯ, ಕರಪಿಂಗಾರ ರವಿ ಹಾಗೂ ಪ್ರಳಯಕಾವೇರಿ ಗೋವಿಂದಯ್ಯ ಎಂಬವರನ್ನು ಬಂಧಿಸಲಾಗಿದೆ. ಇವರೆಲ್ಲರೂ ಆಂಧ್ರ ಪ್ರದೇಶ ಮೂಲದವರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ವೊಂದರಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ವೈಲ ಶೀನು ಡಿ.14ರಂದು ರಾತ್ರಿ ಹೋಗಿದ್ದರು. ಬಳಿಕ ವಾಪಾಸ್ಸಾಗಿ ತಾನು ಕೆಲಸಕ್ಕಿದ್ದ ಬೋಟ್‌ನಲ್ಲಿ ಮಲಗಿದ್ದ. ಆದರೆ ಡಿ.15ರಂದು ಬೆಳಗ್ಗೆ ತಮ್ಮ ಬೋಟ್‌ಗೆ ಬಂದು ತಮ್ಮ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿದ್ದಿ ಎಂದು ಆರೋಪಿಸಿ ಆರೋಪಿಗಳಾದ ಪೋಲಯ್ಯ, ರಾಜ್‌ಕುಮಾರ್, ಮನೋಹರ್, ಜಾಲಯ್ಯ, ರವಿ ಹಾಗೂ ಗೋವಿಂದಯ್ಯ ಎಂಬವರು ಶೀನುವನ್ನು ಅಪಹರಿಸಿ ತಾವು ಕೆಲಸ ಮಾಡುವ ಬೋಟಿಗೆ ಕೊಂಡೊಯ್ದಿದ್ದಾರೆ. ಈ ವೇಳೆ ಶೀನುವಿನ ಕೈಕಾಲುಗಳನ್ನು ಕಟ್ಟಿ, ಬೊಬ್ಬೆ ಹಾಕದಂತೆ ಬಾಯಿಮುಚ್ಚಿ ತಲೆಕೆಳಗಾಗಿ ಬೋಟಿನ ಆರಿಯ ಕೊಕ್ಕೆಗೆ ನೇತಾಡಿಸಿದ್ದಾರೆ. ಬಳಿಕ ಶೀನು ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಶೀನುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುಷ್ಕೃತ್ಯದ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮಂಗಳೂರು ದಕ್ಷಿಣ ಪೊಲೀಸರು ಆರೋಪಿಗಳ ವಿರುದ್ದ ಡಿ.21ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡಿ.22ರಂದು ಸಂಜೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.