ಕೊಣಾಜೆ: ಕೊಳವೆ ಬಾವಿ ತೋಡಿ ಸಾರ್ವಜನಿಕರಿಗೆ ಅರ್ಪಿಸಿದ ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್

0
1237

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕ ಉಳ್ಳಾಲ ಹಾಗೂ ಕೊಣಾಜೆ ಗ್ರಾಮ ಪಂಚಾಯತ್ ನ ವತಿಯಿಂದ ಕೊಣಾಜೆ ಗ್ರಾಮ ಪಂಚಾಯತ್ ನ ವಠಾರದಲ್ಲಿ ಸಾರ್ವಜನಿಕ ಕೊಳವೆ ಬಾವಿಯನ್ನು ಉದ್ಘಾಟಿಸಲಾಯಿತು. ಹರೇಕಳ ಶ್ರೀರಾಮ ಕೃಷ್ಣ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈಯವರು ಉದ್ಘಾಟನೆಗೈದರು. ಬಳಿಕ ಮಂಗಳ ಗ್ರಾಮೀಣ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಿಗೆ ನೀರು ಕೊಡುವುದು ಒಂದು ದೊಡ್ಡ ಪುಣ್ಯದ ಕಾರ್ಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಾನಿಗಳ ಸಹಕಾರದಿಂದ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಹಾಗೂ ಕೊಣಾಜೆ ಗ್ರಾಮ ಪಂಚಾಯತ್ ಸ್ಥಳೀಯ ಜನರ ನೀರಿನ ಬವಣೆಯನ್ನು ಕಂಡು ಬೋರ್ ವೆಲ್ ಕೊರೆಸಿ, ಜಾತಿ ಧರ್ಮದ ಭೇದವಿಲ್ಲದೆ ಎಲ್ಲರಿಗೂ ನೀರನ್ನು ಒದಗಿಸುವ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ. ಇಂತಹ ಪುಣ್ಯದಾಯಕ ಕೆಲಸಗಳು ಸಮಾಜದಲ್ಲಿ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಮಸ್ಜಿದುಲ್ ಹುದಾ ತೊಕ್ಕೊಟ್ಟು ಖತೀಬರಾದ ಮುಹಮ್ಮದ್ ಕುಂಞÂ, ವಿಜ್ಞಾನಿಗಳು ನೀರಿನ ಸೂತ್ರ ಎಚ್ 2 ಓ ಎಂದು ಜಗತ್ತಿಗೆ ತಿಳಿಸಿದ್ದರಾದರೂ ಈವರೆಗೂ ನೀರನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ನೀರು ದೇವನ ದೊಡ್ಡ ಅನುಗ್ರಹವಾಗಿದೆ. ದೇವನು ಅನುಗ್ರಹಿಸಿದರೆ ಮಾತ್ರ ನಮಗೆ ನೀರು ಲಭ್ಯ. ಆದ್ದರಿಂದ ನೀರನ್ನು ಪ್ರತಿ ನಿತ್ಯ ಬಳಸುವಾಗ ಎಚ್ಚರ ವಹಿಸಬೇಕಿರುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಪಟ್ಟೋರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಇಬ್ರಾಹೀಂ ಕೋಡಿಜಾಲ್, ಗ್ರಾ.ಪಂ. ಸದಸ್ಯರಾದ ಅಚ್ಯುತ ಗಟ್ಟಿ, ಸಮಾಜ ಸೇವಾ ಘಟಕದ ಅಬ್ದುಸ್ಸಲಾಂ ಸಿ.ಎಚ್. ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಉಪಾಧ್ಯಕ್ಷ ಅಬ್ದುಲ್ ರಹೀಮ್, ಗ್ರಾ.ಪಂ. ಸದಸ್ಯರಾದ ಪ್ರಕಾಶ್, ಶ್ರೀಮತಿ ಮುತ್ತು ಶೆಟ್ಟಿ, ಪಂಚಾಯತ್ ಪಿಡಿಓ ಸವಿತಾ, ಪದ್ಮಾವತಿ ಪೂಜಾರಿ, ಶೌಕತ್ ಅಲಿ, ವೇದಾವತಿ ಗಟ್ಟಿ, ರಾಮಚಂದ್ರ ಗಟ್ಟಿ, ಪದ್ಮನಾಭ ಗಟ್ಟಿ, ರಹಿಮಾನ್ ಕೋಡಿಜಾಲ್, ಅಬ್ದುಲ್ ನಾಸೀರ್ ಕೆ.ಕೆ., ಅಬ್ದುಲ್ ರಹಿಮಾನ್ ಏ.ಕೆ ಹಾಗೂ ಮಂಗಳ ಗ್ರಾಮೀಣ ಯುವಕ ಮಂಡಲ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.