ವೈದ್ಯರ ಸೀಲ್ ಕದ್ದ ಪ್ರಕರಣ: ನಕಲಿ ಚೀಟಿ ತಯಾರಿಸಿ ಮಾದಕ ಔಷಧಿ ಖರೀದಿಸಿದ ಇಬ್ಬರ ಬಂಧನ

0
176
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ತಿರುವನಂತಪುರ: ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದಿಂದ ವೈದ್ಯರ ಸೀಲ್ ಹಾಗೂ ಓಪಿ ಚೀಟಿಗಳನ್ನು ಕದ್ದ ಪ್ರಕರಣದಲ್ಲಿ ಸನೋಜ್ (37) ಮತ್ತು ಸೈಯ್ಯದಾಲಿ(26) ಎಂಬಿಬ್ಬರನ್ನು ವೈದ್ಯಕೀಯ ಕಾಲೇಜು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕದ್ದ ಸೀಲ್ ಹಾಗೂ ಓಪಿ ಚೀಟಿಗಳನ್ನು ಬಳಸಿ ನಕಲಿ ಔಷಧ ಚೀಟಿ ತಯಾರಿಸುತ್ತಿದ್ದರು ಮತ್ತು ಮಾದಕ ದ್ರವ್ಯ ವಿಭಾಗಕ್ಕೆ ಸೇರಿದ ಔಷಧಿಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬುದಾಗಿ ವರದಿಯಾಗಿದೆ.

ಕಳೆದ ಜನವರಿಯಲ್ಲಿ ಆಸ್ಪತ್ರೆಯ ಸರ್ಜರಿ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಜೂನಿಯರ್ ರೆಸಿಡೆಂಟ್ ವೈದ್ಯರ ಸೀಲು ಕಳ್ಳತನವಾಗಿತ್ತು. ಈ ಬಗ್ಗೆ ವೈದ್ಯರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಇದಲ್ಲದೇ, ಆರೋಪಿಗಳು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿವಿಧ ಹೆಸರುಗಳಲ್ಲಿ ಒಪಿ ಚೀಟಿಗಳನ್ನು ಪಡೆಯುತ್ತಿದ್ದರು. ಮತ್ತು ಮಾದಕ ವಸ್ತು ವಿಭಾಗಕ್ಕೆ ಸೇರಿದ ಔಷಧಗಳನ್ನು ಬರೆದು ಕೊಲ್ಲಂ ಜಿಲ್ಲೆಯ ವಿವಿಧ ಮೆಡಿಕಲ್ ಸ್ಟೋರ್‌ಗಳಿಂದ ಖರೀದಿಸಿ ಇವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ.

ವಿವಿಧ ಮೆಡಿಕಲ್ ಸ್ಟೋರ್‌ಗಳಿಂದ ಹೆಚ್ಚಿನ ಪ್ರಮಾಣದಲ್ಲಿ  ಔಷಧಗಳನ್ನು ಖರೀದಿಸುತ್ತಿರುವುದು ಗಮನಕ್ಕೆ ಬಂದ ನಂತರ ಪೊಲೀಸರು ನಿರಂತರ ನಿಗಾ ಇರಿಸುವ ಮೂಲಕ ಆರೋಪಿಗಳನ್ನು ಗುರುತಿಸಿದ್ದಾರೆ. ಆರೋಪಿಗಳು ಕೊಲ್ಲಂ ಜಿಲ್ಲೆಯ ಮೆಡಿಕಲ್ ಸ್ಟೋರ್‌‌ವೊಂದರಲ್ಲಿ ಔಷಧಿ ಖರೀದಿಸಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಕದ್ದ ಸೀಲ್ ಮತ್ತು ಒಪಿ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.