ಬಿಹಾರದಲ್ಲಿ 30 ವರ್ಷಗಳ ಬಿಜೆಪಿ ಆಧಿಪತ್ಯಕ್ಕೆ ಬ್ರೇಕ್: ಖಾತೆ ತೆರೆದ ಪ್ರಶಾಂತ್ ಕಿಶೋರ್

0
559

ಸನ್ಮಾರ್ಗ ವಾರ್ತೆ

ಪಟ್ನಾ: ಬಿಹಾರದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಧೂಳಿಪಟವಾಗಿದೆ. ಆರ್‌ಜೆಡಿ ಐತಿಹಾಸಿಕ ಗೆಲುವು ಸಾಧಿಸಿದೆ. ಕಳೆದ ಮೂರು ದಶಕಗಳಿಂದ ಬಿಜೆಪಿ ಪಟ್ನಾ ಶಿಕ್ಷಕರ ಕ್ಷೇತ್ರದಲ್ಲಿ ಭದ್ರ ಹಿಡಿತ ಸಾಧಿಸಿತ್ತು. ಬಿಜೆಪಿಯ ನವಲ್ ಕಿಶೋರ್ ಯಾದವ್ ಗೆಲ್ಲುತ್ತಿದ್ದರು. ಈ ಸಲ ಅವರನ್ನು ಆರ್‌ಜೆಡಿಯ ಡಾ. ಸಂಜೀವ್ ಕುಮಾರ್ ಸೋಲಿಸಿದ್ದಾರೆ. ಇನ್ನೂ ಕುತೂಹಲವೆಂದರೆ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಾರ್ಟಿ ತನ್ನ ಖಾತೆಯನ್ನೂ ತೆರೆಯಿತು. ದರ್‌ಭಂಗದ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಮದನ್ ಮೋಹನ್ ಝಾರನ್ನು ಜನ್ ಸುರಾಜ್ ಅಭ್ಯರ್ಥಿ ಸುರೇಶ್ ಪ್ರಸಾದ್ ರಾಯ್ 324 ವೋಟುಗಳಿಂದ ಸೋಲಿಸಿದ್ದಾರೆ.

ಆರ್‌ಜೆಡಿ ಗೆದ್ದಿದೆ ಎಂದು ತಿಳಿದ ಬೆನ್ನಿಗೆ ಬಿಜೆಪಿ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎಂದು ಆರ್‌ಜೆಡಿಯಿಂದ ಗೆದ್ದ ಅಭ್ಯರ್ಥಿ ಸಂಜೀವ್ ಕುಮಾರ್ ಸಿಂಗ್ ಆರೋಪಿಸಿದ್ದಾರೆ. ಸೋಲು ಗೊತ್ತಾದ ಕೂಡಲೇ ಸರಕಾರದವರು ದಿಗ್ಭ್ರಮೆಗೊಂಡು ಮತ ಎಣಿಕೆ ಕೇಂದ್ರದಲ್ಲಿ ಕೈ ಕೈ ಮಿಲಾಯಿಸಿದರು ಎಂದು ಅವರು ಹೇಳಿದ್ದು ಮತ ಎಣಿಕೆ ದಿನ ಐದು ವಾಹನಗಳಲ್ಲಿ ಬೌನ್ಸರ್‌ಗಳನ್ನು ಬಿಜೆಪಿ ಬೆಂಬಲಿಗರ ತಂಡ ಕರೆ ತಂದಿದೆ ಎಂದು ತಿಳಿಸಿದ್ದಾರೆ.

ಪಟ್ನಾ ಗ್ರಾಜ್ಯುವೇಟ್ ಕ್ಷೇತ್ರದಲ್ಲಿ ಜೆಡಿಯು ಬೆಂಬಲಿತ ಅಭ್ಯರ್ಥಿ ನೀರಜ್ ಕುಮಾರ್ ಗೆದ್ದಿದ್ದಾರೆ. ಇದರೊಂದಿಗೆ ಜೆಡಿಯು ಶಾಸಕ ಅನಂತ್ ಸಿಂಗ್ ಜನ್ ಸುರಾಜ್ ಪಾರ್ಟಿಗೆ ಬಹಿರಂಗ ಬೆಂಬಲ ಘೋಷಿಸಿದ್ದು ಫಲ ನೀಡಿಲ್ಲ. ಅವರನ್ನು ಜೆಡಿಯು ಪಾರ್ಟಿಯಿಂದ ಆರು ವರ್ಷದ ಅವಧಿಗೆ ಉಚ್ಚಾಟಿಸಿದೆ. ಒಟ್ಟು ಎಂಟು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಶಿಕ್ಷಕರ ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಘೋಷಿಸಲಾಗಿದೆ. ಜನ್ ಸುರಾಜ್ ಪಾರ್ಟಿಯ ಗೆಲುವು ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಗಬಹುದೆಂದು ಹೇಳಲಾಗುತ್ತಿದೆ.