ಸನ್ಮಾರ್ಗ ವಾರ್ತೆ
ರಿಯಾದ್: ಸೌದಿ ಅರೇಬಿಯಾದ ಮೇಲಿನ ಹೌತಿ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ ನೀಡಿದೆ. ವಿಮಾನ ನಿಲ್ದಾಣಗಳು ಮತ್ತು ಅಂತಾರಾಷ್ಟ್ರೀಯ ಸಮುದ್ರ ಸಾರಿಗೆಯನ್ನು ಗುರಿಯಾಗಿಸಿಕೊಂಡು ಹೌತಿಗಳು ಹಲವಾರು ದಾಳಿಗಳನ್ನು ನಡೆಸುತ್ತಿದ್ದಾರೆ. ನಾಗರಿಕರ ಜೀವಗಳು ಮತ್ತು ನಾಗರಿಕ ಮೂಲಸೌಕರ್ಯಗಳ ವಿರುದ್ಧದ ಇಂತಹ ನಡೆಗಳನ್ನು ತಾನು ಬಲವಾಗಿ ಖಂಡಿಸುವುದಾಗಿ ಮಂಡಳಿ ತಿಳಿಸಿದೆ.
ಅಂತಾರಾಷ್ಟ್ರೀಯ ಸಮುದ್ರ ಸಾರಿಗೆಯ ಸುರಕ್ಷತೆ ಮತ್ತು ನಿರ್ಣಾಯಕ ಜಲಮಾರ್ಗಗಳ ಮೂಲಕ ಜಾಗತಿಕ ವ್ಯಾಪಾರದ ಮುಕ್ತ ಹರಿವಿಗೆ ಧಕ್ಕೆ ತರುವ ಕ್ರಮಗಳು ಸ್ವೀಕಾರಾರ್ಹವಲ್ಲ. ಅಂತಾರಾಷ್ಟ್ರೀಯ ಕಾನೂನಿನ ಪಾಲನೆ ಹಾಗೂ ನಾಗರಿಕರು ಮತ್ತು ನಾಗರಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಭದ್ರತಾ ಮಂಡಳಿಯ ಸದಸ್ಯರು ಕರೆ ನೀಡಿದರು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಪ್ರದೇಶದಲ್ಲಿ ಭದ್ರತೆ ಹಾಗೂ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.












