ಮುಸ್ಲಿಂ ದ್ವೇಷದ ಹಿನ್ನೆಲೆ: ಕೆನಡಾದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಟ್ರಕ್ ಹರಿಸಿ ಕೊಂದ ಯುವಕ…!

0
1007

ಸನ್ಮಾರ್ಗ ವಾರ್ತೆ

ಒಟ್ಟಾವೊ : ಕೆನಡಾದ ಒಂಟಾರಿಯೊ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಒಂದೇ ಕುಟುಂಬದ ನಾಲ್ವರ ಮೇಲೆ ಟ್ರಕ್ ಹರಿಸಿ ಕೊಂದ ಘಟನೆ ಪೂರ್ವಯೋಜಿತ ಎಂದು ಪೊಲೀಸರು ಹೇಳಿದ್ದಾರೆ. ಇದು ಯೋಜನಾಬದ್ದ ಪೂರ್ವ ಯೋಜಿತ ದಾಳಿಯಾಗಿದೆ .ಇದಕ್ಕೆ ನಮ್ಮಲ್ಲಿ ಸಾಕ್ಷ್ಯಗಳಿವೆ. ಅವರು ಮುಸ್ಲಿಮರಾಗಿದ್ದುದಕ್ಕೆ ಅವರನ್ನು ವ್ಯಾನಿನಡಿಗೆ ಹಾಕಿ ಕೊಲೆ ಮಾಡಲಾಗಿದೆ ಎಂದು ಡಿಟೆ ಕ್ಟಿವ್ ಸೂಪರಿಡೆಂಟ್ ಪಾಲ್ ವೈಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

20 ವರ್ಷದ ನಥಾನಿಯಲ್ ವೆಲ್ಟ್ ಮ್ಯಾನ್ ಎಂಬ ಯುವಕ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಟ್ರಕ್ ನ ಅಡಿಗೆ ಹಾಕಿದ ನಂತರ ಪರಾರಿಯಾಗಿದ್ದ. ನಂತರ ಇವನನ್ನು ಸುಮಾರು 7 ಕಿಲೋಮೀಟರ್ ದೂರದ ಮಾಲ್ ಒಂದರಲ್ಲಿ ಪೊಲೀಸರು ಬಂಧಿಸಿದ್ದರು. ತನಗೆ ಅಪಾಯವಾಗದಂತೆ ಈತ ಸಂರಕ್ಷಣಾ ಕವಚ ತೊಟ್ಟಿದ್ದ ಎಂದು ಪೊಲೀಸರು ಹೇಳಿದರು.

ಒಂಟಾರಿಯೊದ ನಗರವಾದ ಲಂಡನ್‍ನಲ್ಲಿ ರವಿವಾರ ಸಂಜೆ ಘಟನೆ ನಡೆದಿದೆ. ಕುಟುಂಬ ರಸ್ತೆ ಬದಿಯಲ್ಲಿ ಸಂಜೆ ವಾಕಿಂಗ್ ಹೋಗುತ್ತಿತ್ತು. ಕಪ್ಪುಬಣ್ಣದ ಟ್ರಕ್ ಹರಿಸಿ ಹಾಯಿಸಿ 74, 44 ವರ್ಷದ ಇಬ್ಬರು ಮಹಿಳೆಯರು 46 ವರ್ಷದ ಯುವಕ ಮತ್ತು 15 ವರ್ಷದ ಹುಡುಗಿಯ ಸಾವಿಗೆ ಕಾರಣನಾಗಿದ್ದ. ಮೃತರ ಹೆಸರು ವಿವರಗಳನ್ನು ಈವರೆಗೂ ಬಹಿರಂಗಪಡಿಸಲಾಗಿಲ್ಲ. ಈ ವೇಳೆ ಗಾಯಗೊಂಡ ಒಂಭತ್ತು ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಥಾನಿಯಲ್ ವೆಲ್ಟ್ ಮ್ಯಾನ್ ಮೇಲೆ ಕೊಲೆ ಆರೋಪಗಳನ್ನು ಹೊರಿಸಲಾಗಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ, ಲಂಡನ್ ನಲ್ಲಿರುವ ಮುಸ್ಲಿಮ್ ಸಮುದಾಯದವರು ಮತ್ತು ನಮ್ಮ ದೇಶದಲ್ಲಿರುವ ಎಲ್ಲ ಮುಸ್ಲಿಮರು ನಾವು ಅವರೊಂದಿಗೆ ನಿಲ್ಲುತ್ತೇವೆ ಎನ್ನುವುದನ್ನು ಅರಿತಿದ್ದಾರೆ. ನಮ್ಮ ಸಮುದಾಯದಲ್ಲಿ ಇಸ್ಲಾಮೋಫೋಬಿಯಾಗೆ ಯಾವುದೇ ಸ್ಥಾನವಿಲ್ಲ. ಇದು ನಿಲ್ಲಬೇಕು” ಎಂದು ಟ್ವಿಟ್ ಮಾಡಿದ್ದಾರೆ.